ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ: ಜೆಡಿಎಸ್‌ ಶಾಸಕ ಶ್ರೀನಿವಾಸಗೌಡ ಘೋಷಣೆ

ಬೆಂಬಲಿಗರ ಸಭೆ
Last Updated 3 ಮೇ 2019, 11:58 IST
ಅಕ್ಷರ ಗಾತ್ರ

ಕೋಲಾರ: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮಂಗಳವಾರ ತಮ್ಮ ಬೆಂಬಲಿಗರು ಹಾಗೂ ಪಕ್ಷದ ಮುಖಂಡರ ಸಭೆ ನಡೆಸಿದ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಘೋಷಿಸಿದರು.

ಕಾಂಗ್ರೆಸ್‌– ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ವಿರುದ್ಧ ಪ್ರಚಾರಕ್ಕೆ ಇಳಿದ ಶ್ರೀನಿವಾಸಗೌಡ, ತಾಲ್ಲೂಕಿನ ವೇಮಗಲ್, ಕ್ಯಾಲನೂರು, ವಕ್ಕಲೇರಿ ಹಾಗೂ ಕಸಬಾ ಹೋಬಳಿಗಳಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು.

‘ಸಂಸದ ಮುನಿಯಪ್ಪ ನನಗೆ ಅನ್ಯಾಯ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿಕೆಟ್ ಕೇಳಿದ್ದೆ. ನನ್ನನ್ನೇ ಅಭ್ಯರ್ಥಿ ಮಾಡಲು ಕಾಂಗ್ರೆಸ್‌ ವರಿಷ್ಠರೆಲ್ಲಾ ಒಪ್ಪಿದ್ದರು. ಆದರೆ, ಅಂತಿಮ ಕ್ಷಣದಲ್ಲಿ ಮುನಿಯಪ್ಪ ಅಡ್ಡಗಾಲು ಹಾಕಿ ಟಿಕೆಟ್‌ ತಪ್ಪಿಸಿದರು. ಅವರಿಂದ ಜಿಲ್ಲೆಯಲ್ಲಿ ಯಾವುದೇ ರಾಜಕೀಯ ನಾಯಕರು ಉದ್ಧಾರವಾಗಿಲ್ಲ’ ಎಂದು ಕಿಡಿಕಾರಿದರು.

‘ಕ್ಷೇತ್ರದಲ್ಲಿ ಹಿರಿಯ ನಾಯಕರು, ಕೆಲ ಹಾಲಿ ಹಾಗೂ ಮಾಜಿ ಶಾಸಕರು ಮುನಿಯಪ್ಪ ವಿರುದ್ಧ ತಿರುಗಿಬಿದ್ದಿದ್ದಾರೆ. ಅವಿಭಜಿತ ಕೋಲಾರ ಜಿಲ್ಲೆಯ ಯಾವುದೇ ವಿಧಾನಸಭಾ ಕ್ಷೇತ್ರದ ಇತಿಹಾಸ ಅವಲೋಕಿಸಿದರೂ ಮುನಿಯಪ್ಪ ಅಲ್ಲಿನ ನಾಯಕರನ್ನು ಮುಗಿಸಿರುವ ದಾಖಲೆಯಿದೆ. ಎಲ್ಲರನ್ನೂ ಸಮಯಕ್ಕೆ ತಕ್ಕಂತೆ ಉಪಯೋಗಿಸಿಕೊಂಡು ರಾಜಕೀಯವಾಗಿ ಮುಗಿಸುವುದು ಆತನ ಚಾಳಿ’ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಪಣ ತೊಟ್ಟಿದ್ದೇವೆ: ‘2004ರ ಚುನಾವಣೆ ವೇಳೆ ಮುನಿಯಪ್ಪ ಸರಿಯಿಲ್ಲ ಎಂದು ಚಿಂತಾಮಣಿಯ ಮಾಜಿ ಶಾಸಕ ಎಂ.ಸಿ.ಸುಧಾಕರ್‌ ಹೇಳಿದ್ದರು. ಆದರೆ, ನಾವು ಅವರ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಈಗ ಎಚ್ಚೆತ್ತುಕೊಂಡಿದ್ದು, ಶತಾಯಗತಾಯ ಮುನಿಯಪ್ಪನನ್ನು ಸೋಲಿಸಲು ಪಣ ತೋಟಿದ್ದೇವೆ’ ಎಂದರು.

‘ಮುನಿಯಪ್ಪ ಕುತಂತ್ರ ರಾಜಕಾರಣ, ನಂಬಿಕೆ ದ್ರೋಹ ಮಾಡುವುದರಲ್ಲಿ ಪ್ರಥಮ. ಆತ ಬಲಗೈ ಸಮಾಜಕ್ಕೆ ಯಾವುದೇ ಅನುಕೂಲ ಮಾಡಿಲ್ಲ. ನನಗೆ ಯಾವುದೇ ವಿರೋಧ ಎದುರಾದರೂ ಪರವಾಗಿಲ್ಲ. ಜನರ ಅಭಿಪ್ರಾಯ ತಿಳಿಯಲು ಪ್ರವಾಸ ಮಾಡಿದಾಗ ಮುನಿಯಪ್ಪ ವಿರೋಧಿ ಅಲೆ ಎದಿದ್ದೆ. ಅಲ್ಪಸಂಖ್ಯಾತರು ಮತ ಹಾಕಲು ಅವಕಾಶವಿದೆ. ಬಿಜೆಪಿಗೆ ಹಾಕಲು ಇಷ್ಟವಿಲ್ಲದಿದ್ದರೆ ‘ನೋಟಾ’ ಮತ ಹಾಕುವ ಮೂಲಕ ಮುನಿಯಪ್ಪನನ್ನು ಸೋಲಿಸಿ’ ಎಂದು ಕೋರಿದರು.

ತಡೆಯಾಜ್ಞೆ ತಂದರು: ‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ತೀವ್ರ ಬರಗಾಲವಿದೆ. ನೀರಿನ ಸಮಸ್ಯೆ ನಿವಾರಣೆಗೆ ಹಿಂದಿನ ಕಾಂಗ್ರೆಸ್‌ ಸರ್ಕಾರ ಕೆ.ಸಿ ವ್ಯಾಲಿ ಯೋಜನೆ ಅನುಷ್ಠಾನಗೊಳಿಸಿತು. ಯೋಜನೆಯಿಂದ ನಾಲ್ಕೈದು ಕೆರೆಗಳಿಗೆ ನೀರು ಹರಿಯುತ್ತಿದ್ದಂತೆ ಮುನಿಯಪ್ಪ ಕೆಲ ಮುಖಂಡರನ್ನು ಎತ್ತಿಕಟ್ಟಿ ಯೋಜನೆಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹೈಕೋರ್ಟ್‌ನಲ್ಲಿ ಹಿನ್ನಡೆಯಾಗುತ್ತಿದ್ದಂತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ತಡೆಯಾಜ್ಞೆ ಮಾಡಿಸಿದರು. ಆದರೆ, ಸುಪ್ರೀಂ ಕೋರ್ಟ್‌ನಲ್ಲೂ ಜಿಲ್ಲೆಯ ಜನರ ಪರ ಜಯ ಸಿಕ್ಕಿದ್ದರಿಂದ ಮುನಿಯಪ್ಪಗೆ ಸಹಿಸಲಾಗುತ್ತಿಲ್ಲ. ಯೋಜನೆ ಅನುಷ್ಠಾನದ ಕೀರ್ತಿ ಕೆ.ಆರ್.ರಮೇಶ್‌ಕುಮಾರ್‌ಗೆ ಸಲ್ಲುತ್ತದೆ ಎಂಬ ನೋವಿನಿಂದ ಮುನಿಯಪ್ಪ ನರಳಾಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಮುನಿಯಪ್ಪ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರಗಳಲ್ಲೂ ತಮ್ಮ ಪರಿವಾರದವರನ್ನೇ ಗೆಲ್ಲಿಸಿಕೊಳ್ಳಲು ಮುಂದಾಗಿದ್ದರು. ಆದರೆ, ಮುಳಬಾಗಿಲಿನಲ್ಲಿ ಅವರ ಒಬ್ಬ ಮಗಳು ನಾಮಪತ್ರ ಹಿಂಪಡೆದರು. ಬಂಗಾರಪೇಟೆ ಕ್ಷೇತ್ರದಲ್ಲೂ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಲು ಪ್ರಯತ್ನ ಮಾಡಿದ್ದರು. ಎಸ್.ಎನ್.ನಾರಾಯಣಸ್ವಾಮಿ ಬಂಗಾರಪೇಟೆ ಟಿಕೆಟ್‌ ಆಕಾಂಕ್ಷಿಯಾಗಿದ್ದರಿಂದ ಮುನಿಯಪ್ಪ ತಮ್ಮ ಪ್ರಯತ್ನದಿಂದ ಹಿಂದೆ ಸರಿದರು’ ಎಂದು ಟೀಕಿಸಿದರು.

ವೈದ್ಯ ಡಾ.ಡಿ.ಕೆ.ರಮೇಶ್, ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಇ.ಗೋಪಾಲಪ್ಪ, ಕೋಚಿಮುಲ್ ನಿರ್ದೇಶಕ ಆರ್.ರಾಮಕೃಷ್ಣೇಗೌಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT