ಬುಧವಾರ, ಸೆಪ್ಟೆಂಬರ್ 18, 2019
26 °C
ಜಿಲ್ಲಾಧಿಕಾರಿ ಮಂಜುನಾಥ್‌ ಮನವಿ

ಕನ್ನಡ ಭಾಷೆ ಅಭಿವೃದ್ಧಿಗೆ ಸಹಕರಿಸಿ

Published:
Updated:
Prajavani

ಕೋಲಾರ: ‘ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಕಲೆ ಹಾಗೂ ಸಾಹಿತ್ಯ ಅಭಿವೃದ್ಧಿಪಡಿಸಲು ಪ್ರತಿಯೊಬ್ಬರ ಸಹಕಾರ ನೀಡಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮನವಿ ಮಾಡಿದರು.

ಇಲ್ಲಿ ಶುಕ್ರವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿ, ‘ನಾನು ಜಿಲ್ಲಾಧಿಕಾರಿಗಿಂತ ಹೆಚ್ಚಾಗಿ ಕನ್ನಡಿಗನಾಗಿ ಕನ್ನಡದ ಕಾರ್ಯಕ್ರಮಗಳಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಸಹಕಾರ ನೀಡುತ್ತೇನೆ’ ಎಂದು ಘೋಷಿಸಿದರು.

‘ರಾಜ್ಯದ ಗಡಿ ಜಿಲ್ಲೆ ಕೋಲಾರದಲ್ಲಿ ಅನೇಕ ಕನ್ನಡಪರ ಸಂಘಟನೆಗಳು ಕನ್ನಡ ಭಾಷೆಯ ಉಳಿವಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ನಿವೇಶನ ನೀಡುವಂತೆ ಮನವಿ ಬಂದಿದೆ. ಪರಿಷತ್ತಿನ ಸದಸ್ಯರು ಸರ್ಕಾರಿ ಜಾಗ ಗುರುತಿಸಿ ತಿಳಿಸಿದರೆ ಪರಿಶೀಲಿಸಿ ಮಂಜೂರು ಮಾಡುತ್ತೇನೆ. ಗಡಿ ಜಿಲ್ಲೆ ಅಭಿವೃದ್ಧಿಗೆ ಗಡಿ ಪ್ರಾಧಿಕಾರದಿಂದ ಅನುದಾನ ಮಂಜೂರು ಮಾಡಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಪರಿಷತ್ತು ಸ್ಥಾಪನೆಯಾಗಿ 105 ವರ್ಷವಾಗಿದೆ. ಪರಿಷತ್ತು ಜಿಲ್ಲೆಯಲ್ಲಿ 10 ಸಾವಿರ ಸದಸ್ಯರನ್ನು ಹೊಂದಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜು ವಿವರಿಸಿದರು.

‘ನಮ್ಮ ಅವಧಿಯಲ್ಲಿ ಜಿಲ್ಲೆಯಲ್ಲಿ ಹೋಬಳಿ, ನಗರ ಘಟಕಗಳನ್ನು ಸ್ಥಾಪಿಸಿ ಸಮ್ಮೇಳನಗಳ ಮೂಲಕ ಕನ್ನಡ ಭಾಷೆ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಜಿಲ್ಲಾಧಿಕಾರಿ ಸಹಕಾರದಿಂದ ಪರಿಷತ್ತಿಗೆ ಹೆಚ್ಚಿನ ಬಲ ಬಂದಿದೆ. ಡಿ.ವಿ.ಗುಂಡಪ್ಪನವರ ಮಂಕು ತಿಮ್ಮನ ಕಗ್ಗದ 75ನೇ ವರ್ಷದ ಸಂಭ್ರಮದ ಕಾರ್ಯಕ್ರಮವನ್ನು ಶಾಲಾ ಕಾಲೇಜುಗಳಲ್ಲಿ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.

ನಿವೇಶನ ನೀಡಬೇಕು: ‘ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ. ಜಿಲ್ಲಾಧಿಕಾರಿ ಮಂಜುನಾಥ್ ಅವರು ಸಮ್ಮೇಳನಕ್ಕೆ ಪ್ರತಿ ಹಂತದಲ್ಲೂ ಸಹಕಾರ ನೀಡಿದರು. ಜಿಲ್ಲಾ ಕೇಂದ್ರದಲ್ಲಿ ಪರಿಷತ್ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತವು ನಿವೇಶನ ನೀಡಬೇಕು’ ಎಂದು ಮನವಿ ಮಾಡಿದರು.

‘ಪರಿಷತ್‌ ಭವನ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಈ ಹಿಂದೆಯೂ ಸಾಕಷ್ಟು ಬಾರಿ ನಗರಸಭೆ ಆಯುಕ್ತರಿಗೆ ಮತ್ತು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದೇವೆ. ಆದರೆ, ನಿವೇಶನ ಮಂಜೂರು ಮಾಡಿಲ್ಲ. ಅಧಿಕಾರಿಗಳು ಕನ್ನಡ ಪರ ಕಾಳಜಿಯಿಂದ ಸ್ಪಂದಿಸಿದರೆ ಮಾತ್ರ ಪರಿಷತ್ತಿನ ಸ್ವಂತ ಕಟ್ಟಡ ನಿರ್ಮಾಣವಾಗುತ್ತದೆ’ ಎಂದು ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರಹ್ಲಾದರಾವ್‌ ತಿಳಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಬಿ.ಆಶೋಕ್, ಕನ್ನಡಪರ ಹೋರಾಟಗಾರ ಸೋಮಶೇಖರ್, ಸಹ್ಯಾದ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಉದಯ್‌ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಜಿಲ್ಲಾ ಪಿಯುಸಿ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ಪರಿಷತ್ತಿನ ಮಾಜಿ ಅಧ್ಯಕ್ಷ ರಾಮಪ್ರಸಾದ್ ಪಾಲ್ಗೊಂಡಿದ್ದರು.

Post Comments (+)