ಚುನಾವಣೆಯಲ್ಲಿ ಮುನಿಯಪ್ಪಗೆ ಬೆಂಬಲ: ಮಾಜಿ ಶಾಸಕ ವರ್ತೂರು ಪ್ರಕಾಶ್‌

ಶನಿವಾರ, ಏಪ್ರಿಲ್ 20, 2019
29 °C

ಚುನಾವಣೆಯಲ್ಲಿ ಮುನಿಯಪ್ಪಗೆ ಬೆಂಬಲ: ಮಾಜಿ ಶಾಸಕ ವರ್ತೂರು ಪ್ರಕಾಶ್‌

Published:
Updated:

ಕೋಲಾರ: ‘ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಅವರು ಪಕ್ಷದ ಬೆಂಬಲ ಕೋರಿಲ್ಲ. ಆದರೂ ಅವರನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ’ ಎಂದು ಮಾಜಿ ಶಾಸಕ ಹಾಗೂ ನಮ್ಮ ಕಾಂಗ್ರೆಸ್‌ ಪಕ್ಷದ ಸಂಸ್ಥಾಪಕ ವರ್ತೂರು ಪ್ರಕಾಶ್‌ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಂಗ್ರೆಸ್ ಜಾತ್ಯತೀತ ತತ್ವಗಳಲ್ಲಿ ನಂಬಿಕೆ ಇಟ್ಟುಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಧರ್ಮ ಪಾಲಿಸಿಕೊಂಡು ಚುನಾವಣೆ ಎದುರಿಸುತ್ತಿವೆ’ ಎಂದು ಹೇಳಿದರು.

‘ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ಅವರನ್ನು ಬೆಂಬಲಿಸುತ್ತೇವೆ. ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಅವರಿಗೆ ಗಡುವು ನೀಡಿದ್ದೆ. ಆದರೆ, ಆ ಪಕ್ಷದಲ್ಲಿನ ಕೆಲ ಗೊಂದಲಗಳಿವೆ. ಹೀಗಾಗಿ ಕಾಂಗ್ರೆಸ್ ಸೇರುವ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ’ ಎಂದು ಸ್ಪಷ್ಟಪಡಿಸಿದರು.

‘ನಾನು ಹುಟ್ಟು ಕಾಂಗ್ರೆಸ್ಸಿಗ. ಆ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ 2006ರಲ್ಲಿ ಕೋಲಾರಕ್ಕೆ ಬಂದೆ. 2008 ಮತ್ತು 2013ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದಿದ್ದೆ. ಹಿಂದಿನ 2 ಲೋಕಸಭಾ ಚುನಾವಣೆಗಳಲ್ಲಿ ನಾನು ಮುನಿಯಪ್ಪರನ್ನು ಬೆಂಬಲಿಸಿದ್ದೇನೆ’ ಎಂದು ವಿವರಿಸಿದರು.

‘ವಿಧಾನಸಭೆ ಚುನಾವಣೆ ವೇಳೆ ಮುನಿಯಪ್ಪ ನನ್ನನ್ನು ಸೋಲಿಸಿ ಕ್ಷೇತ್ರದಿಂದ ಓಡಿಸುವುದಾಗಿ ಹೇಳಿದ್ದರು. ಚುನಾವಣೆಯಲ್ಲಿ ನಾನು ಸೋತರೂ ಎಂದಿಗೂ ಅವರ ವಿರುದ್ಧ ಮಾತನಾಡಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ’ ಎಂದು ಮಾಹಿತಿ ನೀಡಿದರು.

ಸಮಾವೇಶ: ‘ಕ್ಷೇತ್ರದಲ್ಲಿ ಏ.12 ಅಥವಾ 13ರಂದು 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸುತ್ತೇನೆ. ಮುನಿಯಪ್ಪ ಸಹ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಪಸಂಖ್ಯಾತರು ತಪ್ಪದೇ ಮುನಿಯಪ್ಪರಿಗೆ ಮತ ಹಾಕಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ಗೆ ನಷ್ಟವಾಗುತ್ತದೆ’ ಎಂದರು.

‘ರಾಜಕಾರಣದಲ್ಲಿ ಪರ, ವಿರೋಧ ಸಹಜ. ಕೆಲವರು ವೈಯಕ್ತಿಕ ಕಾರಣಕ್ಕೆ ಮುನಿಯಪ್ಪ ಅವರಿಗೆ ಟಿಕೆಟ್ ತಪ್ಪಿಸಲು ಪ್ರಯತ್ನಿಸಿದರು. ಅಭ್ಯರ್ಥಿ ನಿರ್ಧಾರವಾದ ಮೇಲೆ ಅವರೆಲ್ಲಾ ಭಿನ್ನಾಭಿಪ್ರಾಯ ಮರೆತು ಪಕ್ಷಕ್ಕಾಗಿ ಶ್ರಮಿಸುತ್ತಾರೆ. ಮಾಲೂರು ಮತ್ತು ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್ ಹಾಗೂ ಜೆಡಿಎಸ್‌ ನಾಯಕರಲ್ಲಿರುವ ಅತೃಪ್ತಿ ಎರಡು ದಿನದಲ್ಲಿ ಬಗೆಹರಿಯಲಿದೆ’ ಎಂದು ಅಭಿಪ್ರಾಯಪಟ್ಟರು.

ಹೃದಯವಂತ: ‘ಮುನಿಯಪ್ಪ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರು ಸರಳ, ಸಜ್ಜನಿಕೆಯ ವ್ಯಕ್ತಿ, ಹೃದಯವಂತರು. ಹಿಂದಿನ 2 ಚುನಾವಣೆಗಳಲ್ಲಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದ್ದರು. ಈ ಬಾರಿ ಅವರನ್ನು ಸೋಲಿಸಲು ಕೆಲವರು ಪಿತೂರಿ ಮಾಡುತ್ತಿದ್ದಾರೆ. ಆದರೆ, ಜೆಡಿಎಸ್ ಜತೆಗಿನ ಮೈತ್ರಿ ಕಾರಣಕ್ಕೆ ಅವರು 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಕ್ಷೇತ್ರದಲ್ಲಿ ನರೇಂದ್ರ ಮೋದಿ ಅಲೆಯಿಲ್ಲ’ ಎಂದರು.

ನಮ್ಮ ಕಾಂಗ್ರೆಸ್‌ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬೆಗ್ಲಿ ಸೂರ್ಯಪ್ರಕಾಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಂಜನಪ್ಪ, ಎಪಿಎಂಸಿ ಸದಸ್ಯ ಅಪ್ಪಯ್ಯಪ್ಪ, ನಗರಸಭೆ ಮಾಜಿ ಸದಸ್ಯರಾದ ಮಂಜುನಾಥ್, ಸಿ.ಸೋಮಶೇಖರ್, ಕಾಶಿ ವಿಶ್ವನಾಥ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !