ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ– ನ್ಯಾಯಸಮ್ಮತ ಚುನಾವಣೆಗೆ ಸಹಕರಿಸಿ: ಇಕ್ಬಾಲ್ ಆಲಂ ಅನ್ಸಾರಿ ಮನವಿ

Last Updated 29 ಮಾರ್ಚ್ 2019, 11:33 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಅಧಿಕಾರಿಗಳು ಸಹಕರಿಸಬೇಕು’ ಎಂದು ಪ್ರಧಾನ ಚುನಾವಣಾ ವೀಕ್ಷಕರಾದ ಇಕ್ಬಾಲ್ ಆಲಂ ಅನ್ಸಾರಿ ಮನವಿ ಮಾಡಿದರು.

ಇಲ್ಲಿ ಶುಕ್ರವಾರ ನಡೆದ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಮತದಾನ ಮತ್ತು ಮತ ಎಣಿಕೆ ದಿನ ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು. ಮತದಾರರು ನಿರ್ಭೀತಿಯಿಂದ ಮತಗಟ್ಟೆಗೆ ಬಂದು ಮತ ಚಲಾಯಿಸುವ ವಾತಾವರಣ ಸೃಷ್ಟಿಸಬೇಕು’ ಎಂದು ತಿಳಿಸಿದರು.

ಕ್ಷೇತ್ರದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್, ‘ಕೋಲಾರ ಲೋಕಸಭಾ ಕ್ಷೇತ್ರವು ಜಿಲ್ಲೆಯ 6 ವಿಧಾನಸಭಾ ಕ್ಷೇತ್ರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ 2 ವಿಧಾನಸಭಾ ಕ್ಷೇತ್ರ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ 1,593 ಮತಗಟ್ಟೆಗಳಿದ್ದು, ಇವುಗಳನ್ನು ಶೇ 100ರಷ್ಟು ಪರಿಶೀಲಿಸಿ ಮೂಲಸೌಕರ್ಯ ಕಲ್ಪಿಸಲಾಗಿದೆ. 396 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಮತ್ತು 1,197 ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ’ ಎಂದು ವಿವರಿಸಿದರು.

‘ಜಿಲ್ಲೆಯಲ್ಲಿ 15,933 ಮಂದಿ ಅಂಗವಿಕಲ ಮತದಾರರಿದ್ದು, ಇವರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪ್ರತಿ ಮತಗಟ್ಟೆಯಲ್ಲೂ ರ‍್ಯಾಂಪ್‌ ಮತ್ತು ವ್ಹೀಲ್‌ಚೇರ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಮತದಾನದ ದಿನ ಅಂಗವಿಕಲರು ಮತದಾನ ಮಾಡಲು ಪ್ರತಿ ಗ್ರಾಮ ಪಂಚಾಯಿತಿಗೆ ತಲಾ 2ರಂತೆ ಆಟೊ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಹಾಲಿಗೆ ಪ್ರಸಿದ್ಧಿ: ‘ಜಿಲ್ಲೆಯು ರೇಷ್ಮೆ, ಹಾಲು ಮತ್ತು ಮಾವು ಉತ್ಪಾದನೆಗೆ ಪ್ರಸಿದ್ಧಿಯಾಗಿದೆ. ಜಿಲ್ಲೆಯಲ್ಲಿ ಕೆಜಿಎಫ್ ಹೊಸ ತಾಲ್ಲೂಕಾಗಿದೆ. ಜಿಲ್ಲೆ ವ್ಯಾಪ್ತಿಯಲ್ಲಿ 27 ಹೋಬಳಿ, 156 ಗ್ರಾ.ಪಂಗಳಿವೆ. 2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 15,36,401 ಜನಸಂಖ್ಯೆಯಿದೆ. ಪ್ರಸ್ತುತ 16.78 ಲಕ್ಷ ಜನಸಂಖ್ಯೆ ಇದೆ’ ಎಂದು ತಿಳಿಸಿದರು.

‘ಚುನಾವಣಾ ನೀತಿಸಂಹಿತೆ ಜಾರಿಯಾದ ದಿನದಿಂದ ಈವರೆಗೆ ₹ 12.30 ಲಕ್ಷ ವಶಪಡಿಸಿಕೊಳ್ಳಲಾಗಿದೆ. ₹ 12.66 ಲಕ್ಷ ಮೌಲ್ಯದ 3,688 ಲೀಟರ್ ಅಕ್ರಮ ಮದ್ಯ ಮತ್ತು 22 ಬೈಕ್‌ ಜಪ್ತಿ ಮಾಡಲಾಗಿದೆ’ ಎಂದು ಹೇಳಿದರು.

ದಾಳಿಯ ಮಾಹಿತಿ: ಮತ್ತೊಬ್ಬ ಪ್ರಧಾನ ಚುನಾವಣಾ ವೀಕ್ಷಕ ವಿಕಾಸ್ ಗಾರ್ಗ್ ನೀತಿಸಂಹಿತೆ ಜಾರಿ ನಂತರ ಜಿಲ್ಲೆಯಲ್ಲಿ ಪೊಲೀಸ್ ಮತ್ತು ಅಬಕಾರಿ ಇಲಾಖೆಯಿಂದ ನಡೆಸಿರುವ ದಾಳಿ ಹಾಗೂ ಚೆಕ್‌ಪೋಸ್ಟ್‌ಗಳಲ್ಲಿ ನಡೆಸಿರುವ ತಪಾಸಣೆ ಕಾರ್ಯದಲ್ಲಿ ವಶಪಡಿಸಿಕೊಂಡಿರುವ ಹಣ, ಮದ್ಯ ಹಾಗೂ ವಾಹನಗಳ ಬಗ್ಗೆ ಮಾಹಿತಿ ಪಡೆದರು.

ಸಭೆ ಬಳಿಕ ಚುನಾವಣಾ ನಿಯಂತ್ರಣ ಕೊಠಡಿ, ಮಾಧ್ಯಮ ಕೇಂದ್ರ ಸೇರಿದಂತೆ ವಿವಿಧ ಚುನಾವಣಾ ಕೋಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌, ಕೆಜಿಎಫ್ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ, ಉಪ ವಿಭಾಗಾಧಿಕಾರಿ ಸೋಮಶೇಖರ್, ಸಹಾಯಕ ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT