ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಸಮಾಜ ನಿರ್ಮಾಣಕ್ಕೆ ಸಹಕರಿಸಿ

Last Updated 26 ಅಕ್ಟೋಬರ್ 2020, 6:08 IST
ಅಕ್ಷರ ಗಾತ್ರ

ಕೋಲಾರ: ‘ಜನಿಸಿದ ಪ್ರತಿ ಮಗುವಿಗೂ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಆರೋಗ್ಯ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್‌.ವಿಜಯ್‌ಕುಮಾರ್‌ ಹೇಳಿದರು.

ಇಲ್ಲಿ ಇತ್ತೀಚೆಗೆ ನಡೆದ ಪೋಲಿಯೊ ಲಸಿಕೆ ಕುರಿತ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ‘ರೋಗ ಮುಕ್ತ ಸಮಾಜ ನಿರ್ಮಾಣಕ್ಕಾಗಿ ತಾಯಂದಿರು 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಬೇಕು’ ಸಲಹೆ ನೀಡಿದರು.

‘ದೇಶದಲ್ಲಿ 2011ರ ನಂತರ ಪೋಲಿಯೊ ಪ್ರಕರಣ ವರದಿಯಾಗಿಲ್ಲ. ವಿಶ್ವಸಂಸ್ಥೆಯು 2016ರಲ್ಲೇ ಭಾರತವನ್ನು ಪೋಲಿಯೊ ಮುಕ್ತ ರಾಷ್ಟ್ರವಾಗಿ ಘೋಷಿಸಿದೆ. ಮಕ್ಕಳ ಆರೋಗ್ಯಕರ ಬೆಳವಣಿಗೆ ಹಾಗೂ ಬಾಲ್ಯಾವಸ್ಥೆಯಲ್ಲಿ ಯಾವುದೇ ದೈಹಿಕ ನ್ಯೂನತೆ ಬಾರದಂತೆ ತಡೆಯಲು ಉಚಿತವಾಗಿ ಪೋಲಿಯೊ ಲಸಿಕೆ ಹಾಕಲಾಗುತ್ತದೆ. 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಬೇಕು’ ಎಂದರು.

‘ದೇಶವನ್ನು ಪೋಲಿಯೊ ರಹಿತ ದೇಶವಾಗಿ ಮಾಡಲು ವಿದೇಶಾಂಗ ಸಚಿವಾಲಯವು ನಿಯಮಾವಳಿಗೆ ತಿದ್ದುಪಡಿ ತಂದಿದೆ. ದೇಶದಲ್ಲಿ ಪ್ರತಿ ವರ್ಷ ಜನಿಸುವ 2.70 ಕೋಟಿ ಶಿಶುಗಳಿಗೆ ಪೋಲಿಯೊದಿಂದ ರಕ್ಷಣೆ ನೀಡುವುದು ದೊಡ್ಡ ಸವಾಲು. ಪೋಲಿಯೊ ಸಮಸ್ಯೆ ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು. ಪೋಲಿಯೊ ಕಾಯಿಲೆಗೆ ತುತ್ತಾದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ’ ಎಂದು ವಿವರಿಸಿದರು.

ನಿರ್ಲಕ್ಷ್ಯ ಬೇಡ: ‘ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಆದರೂ ಜನ ನಿರ್ಲಕ್ಷ್ಯ ತೋರದೆ ಸರ್ಕಾರದ ಕೋವಿಡ್ ಸುರಕ್ಷತಾ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು. ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು’ ಎಂದು ಸಲಹೆ ನೀಡಿದರು.

ಭಾರತ ಸೇವಾ ದಳ ಜಿಲ್ಲಾ ಅಧ್ಯಕ್ಷ ಕೆ.ಎಸ್‌.ಗಣೇಶ್‌, ರೋಟೇರಿಯನ್ ಸೆಂಟ್ರಲ್ ಅಧ್ಯಕ್ಷ ಎ.ಸುಧಾಕರ್, ರೋಟೇರಿಯನ್‌ಗಳಾದ ವಿ.ಪಿ.ಸೋಮಶೇಖರ್, ಗೋಪಾಲ್‌ಗೌಡ, ಆರ್‌.ಶ್ರೀನಿವಾಸ್, ಮಹೇಶ್‌ಬಾಬು, ಸಂಪತ್, ಭುವನೇಶ್ವರಿ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಆರ್.ತ್ಯಾಗರಾಜ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT