ಸೋಮವಾರ, ಜನವರಿ 20, 2020
21 °C
ಸಮಾವೇಶದಲ್ಲಿ ರೈತರಿಗೆ ರೇಷ್ಮೆ ಇಲಾಖೆ ಉಪ ನಿರ್ದೇಶಕ ಪ್ರಭಾಕರ್ ಕಿವಿಮಾತು

ಚೀನಾ ರೇಷ್ಮೆ ಆಮದು ತಡೆಗೆ ಕೈಜೋಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಚೀನಾ ರೇಷ್ಮೆ ಆಮದು ತಡೆಗೆ ರೈತರು ಗುಣಮಟ್ಟದ ದ್ವಿತಳಿ ರೇಷ್ಮೆ ಗೂಡು ಉತ್ಪಾದನೆ ಸವಾಲು ಸ್ವೀಕರಿಸಬೇಕು’ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ಪ್ರಭಾಕರ್ ಹೇಳಿದರು.

ರೇಷ್ಮೆ ಇಲಾಖೆಯು ತಾಲ್ಲೂಕಿನ ಜಂಗಾಲಹಳ್ಳಿಯಲ್ಲಿ ರೇಷ್ಮೆ ಬೆಳೆಗಾರರಿಗೆ ಬುಧವಾರ ಹಮ್ಮಿಕೊಂಡಿದ್ದ ತಾಂತ್ರಿಕ ಸಮಾವೇಶದಲ್ಲಿ ಮಾತನಾಡಿ, ‘ರೈತರು ಗುಣಮಟ್ಟದ ರೇಷ್ಮೆ ಗೂಡು ಉತ್ಪಾದಿಸಿದರೆ ಚೀನಾ ರೇಷ್ಮೆ ಆಮದು ನಿಲ್ಲುತ್ತದೆ. ನೂಲು ಬಿಚ್ಚಾಣಿಕೆದಾರರು ಗುಣಮಟ್ಟದ ಕೊರತೆಯ ನೆಪ ಮಾಡಿಕೊಂಡು ಚೀನಾ ರೇಷ್ಮೆಗೆ ಬೇಡಿಕೆಯೊಡ್ಡುತ್ತಾರೆ’ ಎಂದರು.

‘ರೇಷ್ಮೆ ಉತ್ಪಾದನೆಯಲ್ಲಿ ದೇಶವು ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯ ರೇಷ್ಮೆಗೂಡಿಗೆ ಹೆಚ್ಚಿನ ಬೇಡಿಕೆಯಿದೆ. ರೇಷ್ಮೆ ಇಲಾಖೆಯಲ್ಲಿ ಹಲವು ಯೋಜನೆಗಳಿದ್ದು, ರೈತರು ಇವುಗಳನ್ನು ಸದ್ಬಳಕೆ ಮಾಡಿಕೊಂಡು ಗುಣಮಟ್ಟದ ಹಿಪ್ಪುನೇರಳೆ ಬೆಳೆಯಬೇಕು. ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಂಡು ದ್ವಿತಳಿ ರೇಷ್ಮೆ ಗೂಡು ಉತ್ಪಾದಿಸಬೇಕು’ ಎಂದು ಸಲಹೆ ನೀಡಿದರು.

‘ಚೀನಾ ರೇಷ್ಮೆ ಆಮದಿನಿಂದ ದೇಶದ ರೇಷ್ಮೆ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದೇಶಿ ಮಾರುಕಟ್ಟೆ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ದ್ವಿತಳಿ ರೇಷ್ಮೆಗೂಡು ಉತ್ಪಾದಿಸಬೇಕು. ವೈಜ್ಞಾನಿಕ ಪದ್ಧತಿ ಅನುಸರಿಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದು’ ಎಂದು ತಿಳಿಸಿದರು.

ಬಹುವಾರ್ಷಿಕ ಬೆಳೆ: ‘ಜಿಲ್ಲೆಯ ರೈತರು ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂದಿದ್ದಾರೆ. ಹಿಪ್ಪುನೇರಳೆಯು ಬಹುವಾರ್ಷಿಕ ಬೆಳೆಯಾಗಿದೆ. ಮಣ್ಣಿನ ಫಲವತ್ತತೆ ಕಾಪಾಡಲು ಆಗಾಗ್ಗೆ ಮಣ್ಣು ಪರೀಕ್ಷೆ ಮಾಡಿಸಬೇಕು. ಪೋಷಕಾಂಶ ನಿರ್ವಹಣೆಯಲ್ಲಿ ಮಣ್ಣು ಪರೀಕ್ಷೆ ಪ್ರಮುಖ ಪಾತ್ರ ವಹಿಸುತ್ತದೆ. ಸುಣ್ಣಕಟ್ಟು ರೋಗ ಮತ್ತು ಎಲೆ ಸುರುಳಿ ರೋಗ ನಿಯಂತ್ರಿಸಿದರೆ ಹೆಚ್ಚು ಇಳುವರಿ ಪಡೆಯಬಹುದು’ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಎಂ.ಮಂಜುನಾಥ್ ಸಲಹೆ ನೀಡಿದರು.

‘ಚಳಿಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚುವುದರಿಂದ ಸುಣ್ಣಕಟ್ಟು ಹಾಗೂ ಶಿಲೀಂಧ್ರ ರೋಗಗಳು ಬರುತ್ತವೆ. ಆದ್ದರಿಂದ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಿಸಲು ಹುಳು ಸಾಕಾಣಿಕೆ ಕೊಠಡಿಯಲ್ಲಿ ಆಧುನಿಕ ಸಲಕರಣೆ ಬಳಸಬೇಕು’ ಎಂದು ತಿಳಿಸಿದರು.

ಮಾಹಿತಿ ನೀಡಿಕೆ: ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಮಾರಿಸನ್ ಅವರು ದ್ವಿತಳಿ ರೇಷ್ಮೆಗೂಡು ಉತ್ಪಾದಿಸಲು ಅನುಸರಿಸಬೇಕಾದ ತಾಂತ್ರಿಕ ಕ್ರಮ, ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು ಬೆಳೆಯುವುದು, ಸೋಂಕು ನಿವಾರಣೆ, ರೇಷ್ಮೆ ಹುಳು ಸಾಕಾಣಿಕೆ ಮನೆಯಲ್ಲಿ ಉಷ್ಣಾಂಶ ಹಾಗೂ ತೇವಾಂಶ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಮಣ್ಣಿನ ಸಂರಕ್ಷಣೆ, ಕಾಂಪೋಸ್ಟ್ ತಯಾರಿಕೆ, ಮಣ್ಣು ಪರೀಕ್ಷೆ ಬಗ್ಗೆ ವಿಜ್ಞಾನಿ ಶಶಿಧರ್ ವಿವರಣೆ ನೀಡಿದರು.

ರೇಷ್ಮೆ ಇಲಾಖೆ ಬಂಗಾರಪೇಟೆ ತಾಲ್ಲೂಕು ಸಹಾಯಕ ನಿರ್ದೇಶಕ ಎಸ್.ಎನ್.ಶ್ರೀನಿವಾಸ್, ಶಿಢ್ಲಘಟ್ಟ ರೀಲಿಂಗ್ ವಲಯ ಸಹಾಯಕ ನಿರ್ದೇಶಕ ರಾಮಕುಮಾರ್, ವಿಸ್ತರಣಾಧಿಕಾರಿಗಳಾದ ಬೈರೇಗೌಡ, ಜಯಶಂಕರ್, ವಲಯಾಧಿಕಾರಿ ಶಿವಪ್ರಕಾಶ್, ರೇಷ್ಮೆ ನಿರೀಕ್ಷಕ ಶ್ರೀನಿವಾಸಗೌಡ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು