ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್ ಬೆಂಬಲಿಸಿ ವಿವಿಧೆಡೆ ಪ್ರತಿಭಟನೆ

ಮರಾಠ ಅಭಿವೃದ್ಧಿ ನಿಗಮ ರಚನೆಗೆ ವ್ಯಾಪಕ ವಿರೋಧ
Last Updated 5 ಡಿಸೆಂಬರ್ 2020, 13:55 IST
ಅಕ್ಷರ ಗಾತ್ರ

ಕೋಲಾರ: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ನಡೆದ ‘ಕರ್ನಾಟಕ ಬಂದ್‌’ ಬೆಂಬಲಿಸಿ ವಿವಿಧ ಸಂಘಟನೆಗಳ ಸದಸ್ಯರು ಜಿಲ್ಲಾ ಕೇಂದ್ರದಲ್ಲಿ ಶನಿವಾರ ಬೀದಿಗಿಳಿದು ಪ್ರತಿಭಟನೆ ಮಾಡಿದರು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ವೃತ್ತದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಭೂತ ದಹನ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಮರಾಠ ನಿಗಮ ರಚಿಸಿರುವ ಮುಖ್ಯಮಂತ್ರಿ ಮತ್ತು ಬಿಜೆಪಿ ಸರ್ಕಾರದ ನಿಲುವು ಸರಿಯಿಲ್ಲ. ನಾಡದ್ರೋಹಿ ಬಿಜೆಪಿ ಸರ್ಕಾರ ಕನ್ನಡ ಭಾಷೆಯನ್ನು ಅವಹೇಳನ ಮಾಡುತ್ತಿದೆ. ಮರಾಠ ಮತದಾರರ ಓಲೈಕೆಗಾಗಿ ಬಿಜೆಪಿ ಸರ್ಕಾರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ರಾಘವೇಂದ್ರ ಟೀಕಿಸಿದರು.

‘ಶಾಸಕ ಯತ್ನಾಳ ಅವರು ಕನ್ನಡಪರ ಹೋರಾಟಗಾರರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಜಾತಿಗೊಂದು ನಿಗಮ, ಧರ್ಮಕ್ಕೊಂದು ಪ್ರಾಧಿಕಾರ ಸ್ಥಾಪನೆ ಮಾಡುತ್ತಾ ಹೋದರೆ ಜಾತ್ಯಾತೀತ ಸರ್ಕಾರ ಅಥವಾ ರಾಜ್ಯದ ಪರಿಕಲ್ಪನೆ ಏನಾಗುತ್ತದೆ?’ ಎಂದು ಪ್ರಶ್ನಿಸಿದರು.

‘ಮರಾಠ ನಿಗಮ ರಚಿಸಿ ಕನ್ನಡಿಗರು ಮತ್ತು ಮರಾಠರ ನಡುವೆ ಕಂದಕ ಸೃಷ್ಟಿಸಿರುವ ರಾಜ್ಯ ಸರ್ಕಾರಕ್ಕೆ ಹಾಗೂ ಕನ್ನಡ ಚಳವಳಿಗಾರರನ್ನು ಅಪಮಾನಿಸಿರುವ ಯತ್ನಾಳ ಅವರಿಗೆ ತಕ್ಕ ಪಾಠ ಕಲಿಸುತ್ತೇವೆ. ಮರಾಠ ನಿಗಮ ರದ್ದುಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ’ ಎಂದು ಪ್ರತಿಭಟನಾಕಾರರು ಗುಡುಗಿದರು.

ಮನವಿ ಸಲ್ಲಿಕೆ: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಶೆಟ್ಟಿ) ಸದಸ್ಯರು ಗಾಂಧಿವನದ ಬಳಿ ಪ್ರತಿಭಟನೆ ಮಾಡಿ ಮರಾಠಿ ನಿಗಮ ರದ್ದುಪಡಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಅವರಿಗೆ ಮನವಿ ಸಲ್ಲಿಸಿದರು.

‘ಮರಾಠ ಸಮುದಾಯದಲ್ಲಿ 32 ಪಂಗಡಗಳಿದ್ದು, ಇದರಲ್ಲಿ ಅತಿ ಹಿಂದುಳಿದ ವರ್ಗದವರಿಗೆ ಉಪಯೋಗವಾಗುವಂತೆ ಸರ್ಕಾರ ಕ್ರಮ ವಹಿಸಬೇಕು. ಮರಾಠ ನಿಗಮ ರಚನೆಯಿಂದ ಮರಾಠ ಸಮುದಾಯದ ಯಾವ ಪಂಗಡಕ್ಕೆ ಅನುಕೂಲವಾಗುತ್ತದೆ ಎಂಬುದನ್ನು ಸರ್ಕಾರ ತಿಳಿಸಬೇಕು’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ್ ಆಗ್ರಹಿಸಿದರು.

‘ರಾಜ್ಯದಲ್ಲಿ ಮರಾಠಿ ಭಾಷಿಕರು ಮತ್ತು ಕನ್ನಡಿಗರು ಸಹಬಾಳ್ವೆ ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಕನ್ನಡಿಗರು ಮತ್ತು ಮರಾಠರ ನಡುವಿನ ಬಾಂಧವ್ಯ ಕದಡುತ್ತಿದೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡಿಗರ ತೆರಿಗೆ ಹಣದಲ್ಲಿ ಮರಾಠ ನಿಗಮ ರಚಿಸಿರುವ ಬಿಜೆಪಿ ಸರ್ಕಾರ ನಾಡ ದ್ರೋಹಿ’ ಎಂದು ಕಿಡಿಕಾರಿದರು.

ದೊಡ್ಡ ಶಾಪ: ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಜಯ ಕರ್ನಾಟಕ ಸಂಘಟನೆ ಸದಸ್ಯರು, ‘ಮರಾಠ ನಿಗಮ ರಚನೆಯ ನಡೆ ರಾಜ್ಯವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ. ಕನ್ನಡ ಭಾಷೆಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡದ ಸರ್ಕಾರ ಅನ್ಯರ ಪಾಲಿಗೆ ಅನ್ನ ಹಾಕುವ ಕೆಲಸ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರಿ ಶಾಲಾ ಕಾಲೇಜುಗಳ ಉಳಿವಿಗೆ ಅನುದಾನ ಬಿಡುಗಡೆ ಮಾಡಲು ಮೀನಮೇಷ ಎಣಿಸುವ ಸರ್ಕಾರ ಮರಾಠ ನಿಗಮಕ್ಕೆ ಹಣ ನೀಡಿರುವುದು ರಾಜ್ಯಕ್ಕೆ ಒದಗಿ ಬಂದ ದೊಡ್ಡ ಶಾಪ. ಕನ್ನಡ ಭಾಷೆ ನೆಲಕಚ್ಚುವ ಹೊತ್ತಿನಲ್ಲಿ ಅನ್ಯ ಭಾಷೆಗಳ ಉದ್ಧಾರಕ್ಕಾಗಿ ಹಣ ಬಿಡುಗಡೆ ಮಾಡಿರುವುದು ನೋವಿನ ಸಂಗತಿ’ ಎಂದು ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್‌.ತ್ಯಾಗರಾಜ್ ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT