ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಹಕರಿಸಿ: ಜಿಲ್ಲಾಧಿಕಾರಿ ಮಂಜುನಾಥ್ ಮನವಿ

ಸಭೆಯಲ್ಲಿ ಕೈಗಾರಿಕೆಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಮಂಜುನಾಥ್ ಮನವಿ
Last Updated 21 ಜನವರಿ 2020, 10:47 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೈಗಾರಿಕೆಗಳವರು ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮನವಿ ಮಾಡಿದರು.

ಉದ್ಯೋಗ ಮೇಳ ಆಯೋಜನೆ ಸಂಬಂಧ ಇಲ್ಲ ಸೋಮವಾರ ನಡೆದ ಕೈಗಾರಿಕೆಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿ, ‘ಫೆ.11 ಮತ್ತು 12ರಂದು ಬೃಹತ್ ಉದ್ಯೋಗ ಮೇಳ ಹಾಗೂ ಕೌಶಲ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರತಿ ಕಂಪನಿ ಪ್ರತಿನಿಧಿಗಳು ಮೇಳದಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

‘ಜಿಲ್ಲೆಯ ಪರಿಸ್ಥಿತಿ ಪ್ರತಿಯೊಬ್ಬರಿಗೂ ತಿಳಿದಿದೆ. ಶೇ 60ಕ್ಕೂ ಹೆಚ್ಚು ವಿದ್ಯಾವಂತರು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದಾರೆ. ಪದವಿ ಪೂರೈಸಿದರೂ ಕೌಶಲ ತರಬೇತಿ ಕೊರತೆಯಿಂದ ಉದ್ಯೋಗದಿಂದ ವಂಚಿತರಾಗಿದ್ದಾರೆ. ಅವರಿಗೆ ಉದ್ಯೋಗದ ಜತೆಗೆ ತಮ್ಮ ಕಂಪನಿಯ ಕೆಲಸದ ಬಗ್ಗೆ ಕೌಶಲ ತರಬೇತಿ ನೀಡಿದರೆ ಉತ್ತಮ ಕೆಲಸ ಮಾಡುತ್ತಾರೆ’ ಎಂದು ಹೇಳಿದರು.

‘ಜಿಲ್ಲೆಯ ಮಾಲೂರು, ನರಸಾಪುರ ಹಾಗೂ ವೇಮಗಲ್ ಭಾಗದಲ್ಲಿ ಅನೇಕ ಕೈಗಾರಿಕೆಗಳಿವೆ. ಇಲ್ಲಿನ ಕೈಗಾರಿಕೆಗಳು ನಿರೀಕ್ಷಿತ ಮಟ್ಟದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿಲ್ಲ ಎಂಬ ಆರೋಪವಿದೆ. ಸ್ಥಳೀಯ ಸೌಕರ್ಯ ಪಡೆದುಕೊಂಡು ಸ್ಥಳೀಯರಿಗೆ ಅನುಕೂಲ ಕಲ್ಪಿಸದಿದ್ದರೆ ಮೋಸ ಮಾಡಿದಂತೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶೈಕ್ಷಣಿಕ ಅರ್ಹತೆಯಿಲ್ಲ: ‘ಜಿಲ್ಲೆಯಲ್ಲಿ ಶೇ 80ರಷ್ಟು ಕೈಗಾರಿಕೆಗಳು ಸ್ಥಾಪನೆಯಾಗಿವೆ. ಸ್ಥಳೀಯ ಅಭಿವೃದ್ಧಿ ಜತೆಗೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ. ಕಂಪನಿಗಳಿಗೆ ಬೇಕಾದ ಶೈಕ್ಷಣಿಕ ಅರ್ಹತೆ ಇಲ್ಲದ ಕಾರಣ ಕೆಲವರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಆಗುತ್ತಿಲ್ಲ’ ಎಂದು ಮಾಲೂರು ತಾಲ್ಲೂಕು ಕೈಗಾರಿಕೆಗಳ ಸಂಘದ ಅಧ್ಯಕ್ಷ ಶ್ರೀಪ್ರಕಾಶ್ ಸ್ಪಷ್ಟಪಡಿಸಿದರು.

‘ಈ ಹಿಂದೆ ಉದ್ಯೋಗ ಮೇಳ ನಡೆಸಿದಾಗ ನಾವೆಲ್ಲಾ ಸಹಕಾರ ನೀಡಿದ್ದೆವು. ವಿದ್ಯಾರ್ಹತೆ ತಕ್ಕಂತೆ ಅಭ್ಯರ್ಥಿಗಳನ್ನು ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಈ ಬಾರಿ ಅದೇ ರೀತಿ ಸಹಕಾರ ನೀಡುತ್ತವೆ’ ಎಂದರು.

ಪತ್ರ ಕಳುಹಿಸಿ: ‘ಉದ್ಯೋಗ ಮೇಳದ ಬಗ್ಗೆ ಪತ್ರದ ಮೂಲಕ ಒಕ್ಕೂಟಕ್ಕೆ ಮಾಹಿತಿ ನೀಡಿದರೆ ಕೈಗಾರಿಕೆಗಳ ಮುಖ್ಯಸ್ಥರಿಗೆ ಕಳುಹಿಸುತ್ತೇವೆ. ಜತೆಗೆ ಮೇಳದಲ್ಲಿ ಪಾಲ್ಗೊಳ್ಳುವಂತೆ ಕೈಗಾರಿಕೆಗಳ ಮುಖ್ಯಸ್ಥರಿಗೆ ತಿಳಿಸುತ್ತೇವೆ’ ಎಂದು ಜಿಲ್ಲಾ ವಿಶ್ವೇಶ್ವರಯ್ಯ ಇಂಡಸ್ಟ್ರೀಸ್ ಅಸೋಸಿಯೇಷನ್‌ ಕಾರ್ಯದರ್ಶಿ ಬಾಲಸುಬ್ರಮಣ್ಯಂ ಭರವಸೆ ನೀಡಿದರು.

‘ಈ ಹಿಂದೆ ಜಿಲ್ಲೆಯಲ್ಲಿ ಉದ್ಯೋಗ ಮೇಳ ನಡೆದಾಗ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳವರು ಪಾಲ್ಗೊಂಡು ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಜತೆಗೆ ಆ ಅಭ್ಯರ್ಥಿಗಳಿಗೆ ಕೌಶಲ ತರಬೇತಿ ನೀಡಿ ಉದ್ಯೋಗ ಕಲ್ಪಿಸಿದರು’ ಎಂದು ವಿವರಿಸಿದರು.

ಯಶಸ್ವಿಯಾಗಿ ನಡೆಸಿ: ‘ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್‌ ಅವರೇ ಉದ್ಯೋಗ ಮತ್ತು ಕೌಶಲ ಅಭಿವೃದ್ಧಿ ತರಬೇತಿ ಸಚಿವರಾಗಿರುವುದರಿಂದ ಜಿಲ್ಲೆಯಲ್ಲಿ ಉದ್ಯೋಗ ಮೇಳ ಆರಂಭಿಸಲು ಸೂಚಿಸಿದ್ದಾರೆ. ಜಿಲ್ಲೆಯಿಂದಲೇ ಮೇಳ ಯಶಸ್ವಿಯಾಗಿ ನಡೆಸಬೇಕು’ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ಹೋಂಡಾ, ಜಿಎಸ್‌ಕೆ, ಟಾಟಾ, ಶಿವಂ, ಮಹೀಂದ್ರ, ಸ್ಕ್ಯಾನಿಯಾ ಸೇರಿದಂತೆ ಅನೇಕ ಪ್ರತಿಷ್ಠಿತ ಕಂಪನಿಗಳು ಸ್ಥಾಪನೆಯಾಗಿವೆ. ತಮ್ಮಲ್ಲಿ ಖಾಲಿಯಿರುವ ಹುದ್ದೆಗಳ ಮಾಹಿತಿಯನ್ನು ವೆಬ್, ಆ್ಯಪ್‌ನಲ್ಲಿ ದಾಖಲು ಮಾಡಿದರೆ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

‘ಜಿಲ್ಲಾ ಕೇಂದ್ರದ ಹೊರ ವಲಯದ ಸಿಬಿಐಟಿ ಕಾಲೇಜಿನಲ್ಲಿ ಉದ್ಯೋಗ ಮೇಳ ನಡೆಸಲು ಚಿಂತಿಸಲಾಗಿದೆ. ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಜಾಗ ಪರಿಶೀಲಿಸಲಾಗಿದೆ. ಐಟಿಐ, ಎಂಜಿನಿಯರಿಂಗ್, ಡಿಪ್ಲೊಮಾ ಸೇರಿದಂತೆ ವಿವಿಧ ಪದವಿ ವಿದ್ಯಾರ್ಥಿಗಳಿಗೆ ಮೇಳದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು’ ಎಂದರು.

ಜಿಲ್ಲಾ ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಸಿದ್ದಲಿಂಗ ಪೂಜಾರ್, ಸಹಾಯಕ ನಿರ್ದೇಶಕ ರವಿಚಂದ್ರನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT