ಶುಕ್ರವಾರ, ಸೆಪ್ಟೆಂಬರ್ 20, 2019
21 °C
ತಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ತೀವ್ರ ಆಕ್ರೋಶ

ಸರ್ವೆಯರ್‌ ಅಕ್ರಮ ಮಿತಿ ಮೀರಿದೆ

Published:
Updated:
Prajavani

ಕೋಲಾರ: ‘ತಾಲ್ಲೂಕಿನಲ್ಲಿ ಸರ್ವೆಯರ್‌ಗಳ ದರ್ಬಾರು ಬ್ರಿಟೀಷರ ಆಡಳಿತದಂತಿದೆ. ಲಂಚಬಾಕ ಸರ್ವೆಯರ್‌ಗಳಿಂದ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ದುಡ್ಡಿಲ್ಲದೆ ಯಾವ ಕೆಲಸವೂ ಆಗದ ದುಸ್ಥಿತಿ ನಿರ್ಮಾಣವಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿ ಬುಧವಾರ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರಾದ ಗೋಪಾಲಗೌಡ, ಮಂಜುನಾಥ್ ಹಾಗೂ ಮುನಿಯಪ್ಪ, ‘ಕಂದಾಯ ಇಲಾಖೆಯಲ್ಲಿ ಸರ್ವೆಯರ್‌ಗಳ ಅಕ್ರಮ ಮಿತಿ ಮೀರಿದೆ. ಭ್ರಷ್ಟಾಚಾರ ನಿಗ್ರಹ ದಳದ ದಾಳಿಯಲ್ಲಿ ಸರ್ವೆಯರ್‌ಗಳೇ ಹೆಚ್ಚಾಗಿ ಸಿಕ್ಕಿಬಿದ್ದು ಜೈಲಿಗೆ ಹೋಗುತ್ತಿದ್ದಾರೆ’ ಎಂದು ಆರೋಪಿಸಿದರು.

‘ಇ–ಸ್ವತ್ತು ಮಾಡಿಸಿಕೊಳ್ಳಲು ಜನರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಇ–ಸ್ವತ್ತಿಗೆ ಲಂಚ ಕೊಡಬೇಕು. ಇಲ್ಲದಿದ್ದರೆ ಅಧಿಕಾರಿಗಳು ಕೆಲಸ ಮಾಡಿಕೊಡುವುದಿಲ್ಲ. ನರಸಾಪುರ, ವೇಮಗಲ್ ಭಾಗದಲ್ಲಿ ಹೆಚ್ಚು ಲಂಚ ವಸೂಲಿ ಮಾಡಲಾಗುತ್ತಿದೆ. ಸರ್ವೆಯರ್‌ಗಳಿಗೆ ಇ–ಸ್ವತ್ತು ಪ್ರಕ್ರಿಯೆಯು ಹಣ ಮಾಡುವ ದಂಧೆಯಾಗಿದೆ’ ಎಂದು ಕಿಡಿಕಾರಿದರು.

‘ಅಧಿಕಾರಿಗಳು ಒಂದು ಜಮೀನಿನ ಸರ್ವೆಗೆ ರೈತರಿಂದ ₹ 3 ಸಾವಿರ ತೆಗೆದುಕೊಳ್ಳುತ್ತಿದ್ದಾರೆ. ಬಡ ರೈತರು ಇಷ್ಟೊಂದು ಹಣ ಎಲ್ಲಿಂದ ತರುವುದು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಣ ಕೊಡಬೇಕಿಲ್ಲ: ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಸರ್ವೆ ಅಧಿಕಾರಿ ಸಂಕೀರ್ತನಾ, ‘ಸರ್ವೆ ಕಾರ್ಯಕ್ಕೆ ಯಾರೂ ಹಣ ಕೊಡುವ ಅಗತ್ಯವಿಲ್ಲ. ಮೋಜಣಿ ಶುಲ್ಕ ₹ 800 ಮಾತ್ರ ಕೊಡಬೇಕು. ಅದಕ್ಕಿಂತ ಹೆಚ್ಚಿಗೆ ಹಣ ಕೊಡಬೇಕಿಲ್ಲ. ಅರ್ಜಿ ಸಲ್ಲಿಸಿದ 30 ದಿನದೊಳಗೆ  ಅರ್ಜಿ ವಿಲೇವಾರಿ ಮಾಡಬೇಕೆಂಬ ಕಾನೂನಿದೆ. ಜನ ಸುಮ್ಮನೆ ಯಾಕೆ ಲಂಚ ಕೊಡಬೇಕು’ ಎಂದರು.

ಆಗ ಮಧ್ಯ ಪ್ರವೇಶಿಸಿದ ತಾ.ಪಂ ಅಧ್ಯಕ್ಷ ಎಂ.ಆಂಜಿನಪ್ಪ, ‘ಸರ್ವೆಯರ್‌ಗಳು ಲಂಚ ಪಡೆಯುತ್ತಿರುವ ಬಗ್ಗೆ ಸಾಕಷ್ಟು ದೂರು ಬಂದಿವೆ. ಇದಕ್ಕೆ ಕಡಿವಾಣ ಹಾಕಬೇಕು. ಜನ ಎಚ್ಚರ ವಹಿಸಬೇಕು. ಅಧಿಕಾರಿಗಳಿಗೆ ಅಥವಾ ಸರ್ವೆಯರ್‌ಗಳಿಗೆ ಲಂಚ ಕೊಡಬಾರದು. ಏನಾದರೂ ದೂರುಗಳಿದ್ದರೆ ನಮ್ಮ ಗಮನಕ್ಕೆ ತರಬೇಕು’ ಎಂದು ತಿಳಿಸಿದರು.

ಪಿಡಿಒ ಸಭೆ ಕರೆಯಿರಿ: ‘ಸದಸ್ಯರ ಹೇಳುವ ಸಮಸ್ಯೆಗಳಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಪಂದಿಸುವುದಿಲ್ಲ. ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಪಿಡಿಒಗಳು ಸಹಕರಿಸಿದರೆ ಹಳ್ಳಿಗಳಲ್ಲಿ ಉತ್ತಮ ಕೆಲಸ ಮಾಡಬಹುದು. ಪ್ರತಿ 2 ತಿಂಗಳಿಗೊಮ್ಮೆ ಪಿಡಿಒಗಳ ಸಭೆ ಕರೆಯಬೇಕು’ ಎಂದು ಸದಸ್ಯ ಮಂಜುನಾಥ್ ಒತ್ತಾಯಿಸಿದರು. ಇದಕ್ಕೆ ಇತರೆ ಸದಸ್ಯರೂ ಧ್ವನಿಗೂಡಿಸಿದರು.

‘ತಾ.ಪಂ ವ್ಯಾಪ್ತಿಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲನೆ ಆಗುತ್ತಿಲ್ಲ. ವೇಮಗಲ್ ಬಳಿ ಇತ್ತೀಚೆಗೆ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಆದರೆ, ಆ ಕಾರ್ಯಕ್ರಮಕ್ಕೆ ಅಧಿಕಾರಿಗಳು ಸೌಜನ್ಯಕ್ಕೂ ಸದಸ್ಯರನ್ನು ಆಹ್ವಾನಿಸಲಿಲ್ಲ’ ಎಂದು ಸದಸ್ಯ ಮುನಿಯಪ್ಪ ದೂರಿದರು.

ಇದಕ್ಕೆ ಧ್ವನಿಗೂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ‘ಅಧಿಕಾರಿಗಳು ಮೊದಲು ಸದಸ್ಯರಿಗೆ ಗೌರವ ಕೊಡಬೇಕು. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಜನಪ್ರತಿನಿಧಿಗಳ ಬಗ್ಗೆ ಅಧಿಕಾರಿಗಳಿಗೆ ಗೌರವ ಇಲ್ಲದಿದ್ದರೆ ಹೇಗೆ?’ ಎಂದು ತರಾಟೆಗೆ ತೆಗೆದುಕೊಂಡರು.

ಅಧಿಕಾರಿಗಳೇ ಬರುತ್ತಿಲ್ಲ: ‘ಕಾಟಾಚಾರಕ್ಕೆ ತಾ.ಪಂ ಸಭೆ ನಡೆಸುತ್ತಿದ್ದೇವೆ. ಸಭೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳೇ ಬರುತ್ತಿಲ್ಲ. ಅಧಿಕಾರಿಗಳು ಸಭೆಗೆ ಗೈರಾದರೆ ನಮ್ಮ ಸಮಸ್ಯೆ ಕೇಳುವವರು ಯಾರು ಮತ್ತು ಪರಿಹರಿಸುವವರು ಯಾರು?’ ಎಂದು ಸದಸ್ಯರು ಪ್ರಶ್ನೆ ಮಾಡಿದರು.

‘ಕೆರೆ ಮತ್ತು ಸರ್ಕಾರಿ ಶಾಲೆಗಳಿಗೆ ಸರಿಯಾದ ಭೂದಾಖಲಾತಿಗಳಿಲ್ಲ. ಇದರಿಂದ ಕೆರೆ ಮತ್ತು ಶಾಲೆಗಳ ಜಾಗ ಒತ್ತುವರಿ ಮಾಡಲಾಗುತ್ತಿದೆ. ಹೋಳೂರು ಕೆರೆ ಒತ್ತುವರಿಯಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ ಸರ್ಕಾರಿ ಜಮೀನು ಉಳಿಸಬೇಕು’ ಎಂದು ಸದಸ್ಯ ಗೋಪಾಲಗೌಡ ಸಲಹೆ ನೀಡಿದರು.

ತಾ.ಪಂ ಉಪಾಧ್ಯಕ್ಷೆ ಲಕ್ಷ್ಮೀ, ಕಾರ್ಯ ನಿರ್ವಹಣಾಧಿಕಾರಿ ಬಾಬು ಹಾಜರಿದ್ದರು.

Post Comments (+)