ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಗುರೊಡೆದ ಸ್ವಾಭಿಮಾನಿ ಆಂದೋಲನ

ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡರಿಂದ ಚಾಲನೆ
Last Updated 7 ಜುಲೈ 2022, 4:32 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಸೇರಿ ಸ್ಥಾಪಿಸಿರುವ ‘ಸ್ವಾಭಿಮಾನಿ ಕೋಲಾರ ಆಂದೋಲನ’ಕ್ಕೆ ಬುಧವಾರ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಚಾಲನೆ ನೀಡಿದರು.

‘ಜನರ ಪಾಲ್ಗೊಳ್ಳುವಿಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹಳ ಮುಖ್ಯ. ದೇಶದ ಪ್ರಜಾಪ್ರಭುತ್ವ ನಶಿಸುತ್ತಿದ್ದು, ಪ್ರಸ್ತುತ ಕಾಲಘಟ್ಟದಲ್ಲಿ ಇಂಥ ಆಂದೋಲನಗಳ ಅವಶ್ಯವಿದೆ. ಇದನ್ನು ಯಶಸ್ವಿಗೊಳಿಸುವುದು ನಿಮ್ಮ ಕೈಯಲ್ಲೇ ಇದೆ’ ಎಂದು ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ‘ನಮ್ಮ ಸ್ವಾಭಿಮಾನವನ್ನು ಅಗ್ನಿಪರೀಕ್ಷೆಗೆ ಒಳಪಡಿಸುವ ಕಾಲವಿದು. ಇಟ್ಟ ಹೆಜ್ಜೆಯನ್ನು ಹಿಂದೆ ಇಡಲ್ಲ’ ಎಂದರು.

‘ಸ್ವಾಭಿಮಾನಿ ಆಂದೋಲನ ಈ ನೆಲದ ತುಡಿತ, ನೆಲದ ಸಂಸ್ಕೃತಿ. ಈ ಪರಿಕಲ್ಪನೆ ಹಿಂದಿನಿಂದ ಇದ್ದರೂ ಈಗ ಚಿಗುರೊಡೆದಿದೆ. ಸಾಂಸ್ಕೃತಿಕ ಸ್ಮೃತಿಕೋಶವನ್ನು ಜೀವಂತವಾಗಿಟ್ಟುಕೊಳ್ಳುವುದು, ನ್ಯಾಯಯತ ಹೆಜ್ಜೆ ಇಡುವುದು, ಪ್ರಬಲ ಪ್ರತಿರೋಧ ಹುಟ್ಟುಹಾಕುವುದೇ ಇದರ ಉದ್ದೇಶ’ ಎಂದು ನುಡಿದರು.

ಮಹಿಳಾ ಹೋರಾಟಗಾರರಾದ ವಿ.ಗೀತಾ ಮಾತನಾಡಿ, ‘ಎಂ.ವಿ.ಕೃಷ್ಣಪ್ಪ, ಟಿ.ಚನ್ನಯ್ಯ ಬಳಿಕ ಯಾವುದೇ ರಾಜಕಾರಣಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿಲ್ಲ. ಕಮ್ಯೂನಿಸ್ಟ್‌ ಹಾಗೂ ದಲಿತ ಚಳವಳಿಗಳು ಕೋಲಾರ ಬೆಳೆಸಿವೆ, ಕಟ್ಟಿವೆ. ಆದರೆ, ಈಗಿನವರು ಗಮನ ಹರಿಸುತ್ತಿಲ್ಲ, ಕೋಲಾರದಿಂದ ರೈಲು ಸಂಚಾರಕ್ಕೆ ಸರಿಯಾದ ವ್ಯವಸ್ಥೆ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕೀಲ ಎಸ್‌.ಸತೀಶ್‌ ಮಾತನಾಡಿ, ‘ಸಮಾಜದಲ್ಲಿ ಬದಲಾವಣೆ ಉಂಟು ಮಾಡಲು ನಮ್ಮ ಪಾತ್ರವೂ ಇರಬೇಕು. ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕು. ಪ್ರಪಂಚಕ್ಕೆ ಚಿನ್ನ ನೀಡಿದ ಜಿಲ್ಲೆ ನಮ್ಮದು. ಆದರೆ, ಸರಿಯಾಗಿ ನೀರು ನಮಗೆ ಸಿಗಲಿಲ್ಲ. ಈ ನಿಟ್ಟಿನಲ್ಲಿ ಜನರನ್ನು ಜಾಗೃತಗೊಳಿಸಬೇಕು’ ಎಂದು ಕರೆ ನೀಡಿದರು.

ಗೋಪಾಲಕೃಷ್ಣ ಮಾತನಾಡಿ, ‘ಇದರಲ್ಲಿ ಜಾತಿಯಾಗಲಿ, ರಾಜಕಾರಣವಾಗಲಿ ಇರಲ್ಲ. ಸ್ವಾಭಿಮಾನಿಗಳಾಗಿ ಕೋಲಾರದ ಜನಜೊತೆಗೂಡಬೇಕು ಎಂಬುದುಇದರ ಉದ್ದೇಶ’ ಎಂದರು.

ಪತ್ರಕರ್ತ ಕೆ.ಎಸ್‌.ಗಣೇಶ್‌, ‘ಇದು ದೇಶಕ್ಕೆ ಮಾದರಿಯಾದ ಆಂದೋಲನವಾಗಬೇಕು, ರಾಜಕೀಯ ಶುದ್ಧೀಕರಣಕ್ಕೆ ಮುನ್ನುಡಿ ಬರೆಯಬೇಕು. ರಾಜಕೀಯ ಮಲಿನಗೊಳ್ಳುವುದಕ್ಕೆ ರಾಜಕಾರಣಿಗಳು ಮಾತ್ರವಲ್ಲ; ಎಲ್ಲರೂ ಕಾರಣ. ನಾವು ನೀಡಿದ ಸಲುಗೆಯಿಂದ ವ್ಯವಸ್ಥೆ ಕೆಟ್ಟು ಹೋಗಿದೆ’ ಎಂದು ಹೇಳಿದರು.

ಶ್ರೀಕೃಷ್ಣ ಮಾತನಾಡಿ, ‘ಹಣ ಪಡೆಯುವವರನ್ನು ಹಾಗೂ ಹಣ ನೀಡುವವರನ್ನು ಮತಪಟ್ಟಿಯಿಂದ ತೆಗೆದುಹಾಕಬೇಕು’ ಎಂದು ಆಗ್ರಹಿಸಿದರು.

ಉದಯ್‌ ಕುಮಾರ್‌ ಮಾತನಾಡಿ, ‘ಕೋಲಾರದಲ್ಲಿ ಸರಿಯಾದ ವಿದ್ಯಾಸಂಸ್ಥೆಗಳಿಲ್ಲ. ಕಾರ್ಖಾನೆಗಳಿಲ್ಲ, ಇದ್ದರೂ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಈ ಬಗ್ಗೆ ಸ್ಥಳೀಯ ರಾಜಕಾರಣಿಗಳು ಯಾವುದೇ ಪ್ರಯತ್ನ ನಡೆಸಿಲ್ಲ. ಹೀಗಾಗಿ, ಎಲ್ಲರನ್ನೂ ಒಳಗೊಂಡು ಸೊಸೈಟಿ ಕಟ್ಟಬೇಕಿದೆ’ ಎಂದು ಸಲಹೆ ನೀಡಿದರು.

ಡಿಎಸ್‌ಎಸ್‌ ಮುಖಂಡ ವಿಜಯಕುಮಾರ್‌, ‘ದೇಶ, ಮನಸ್ಸು ಕಟ್ಟಬೇಕು. ಸ್ವಾಭಿಮಾನದಿಂದ ನಡೆದುಕೊಳ್ಳಬೇಕು’ ಎಂದರು.

ಸಣ್ಣೇಗೌಡ ಕಾರ್ಯಕ್ರಮ ನಿರೂಪಿಸಿದರು. ಸಲಾವುದ್ದೀನ್‌, ವಿವಿಧ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT