ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ: ದೂರು ದಾಖಲಿಸಲು ತಹಶೀಲ್ದಾರ್‌ ಆದೇಶ

ಉಮ್ರಾ ಪ್ರತಿಷ್ಠಾನದ ಕಾರ್ಯಕ್ರಮ
Last Updated 22 ಸೆಪ್ಟೆಂಬರ್ 2021, 14:21 IST
ಅಕ್ಷರ ಗಾತ್ರ

ಕೋಲಾರ: ಉಮ್ರಾ ಚಾರಿಟಬಲ್‌ ಪ್ರತಿಷ್ಠಾನವು ನಗರದ ಆಲ್‌ ಅಮೀನ್‌ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮದಲ್ಲಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆಯಾಗಿದ್ದು, ಪ್ರತಿಷ್ಠಾನದ ಅಧ್ಯಕ್ಷರು ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ದೂರು ದಾಖಲಿಸುವಂತೆ ತಹಶೀಲ್ದಾರ್ ಕಂದಾಯ ನಿರೀಕ್ಷಕರಿಗೆ ಆದೇಶಿಸಿದ್ದಾರೆ.

ಕಾರ್ಯಕ್ರಮಕ್ಕೆ ಅನುಮತಿ ಕೋರಿ ಉಮ್ರಾ ಪ್ರತಿಷ್ಠಾನದ ವತಿಯಿಂದ ತಹಶೀಲ್ದಾರ್‌ ಕಚೇರಿಗೆ ಅರ್ಜಿ ಸಲ್ಲಿಸಲಾಗಿತ್ತು. ಇದೇ ಪ್ರತಿಷ್ಠಾನವು ಸೆ.6ರಂದು ಜೂನಿಯರ್‌ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮದಲ್ಲಿ ಸಾವಿರಾರು ಜನರನ್ನು ಸೇರಿಸಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿತ್ತು.

ಹೀಗಾಗಿ ತಹಶೀಲ್ದಾರ್‌ ವಿಲಿಯಮ್‌ ಅವರು ಮಂಗಳವಾರದ (ಸೆ.21) ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಮತ್ತು ಆಲ್‌ ಅಮೀನ್‌ ಕಾಲೇಜಿನ ಪ್ರಾಂಶುಪಾಲರಿಂದ ಒಪ್ಪಿಗೆ ಪತ್ರ ತರುವಂತೆ ಸೂಚಿಸಿ ಅನುಮತಿ ನಿರಾಕರಿಸಿದ್ದರು. ಆದರೆ, ಪ್ರತಿಷ್ಠಾನದವರು ತಹಶೀಲ್ದಾರ್‌ರ ಅನುಮತಿ ಪಡೆಯದೆ ನಿಯಮಬಾಹಿರವಾಗಿ ಆಲ್‌ ಅಮೀನ್‌ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಸಿದ್ದಾರೆ. ಅಲ್ಲದೇ, ಕೋವಿಡ್‌ ಆತಂಕದ ನಡುವೆಯೂ ನೂರಾರು ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಲಡ್ಡು ವಿತರಿಸಿದ್ದಾರೆ.

ಕಾರ್ಯಕ್ರಮದ ವೇದಿಕೆಯಲ್ಲಿದ್ದ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆಜಿಎಫ್‌ ಬಾಬು, ಇತರೆ ಗಣ್ಯರು ಮಾಸ್ಕ್‌ ಧರಿಸದೆ ಮತ್ತು ಅಂತರ ಕಾಯ್ದುಕೊಳ್ಳದೆ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ. ಕೋವಿಡ್‌ ಆತಂಕದ ನಡುವೆಯೂ ಸರ್ಕಾರದ ಆದೇಶ ಧಿಕ್ಕರಿಸಿ ಕಾರ್ಯಕ್ರಮ ನಡೆಸಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

ಹಿಂದೆಯೂ ಉಲ್ಲಂಘನೆ: ‘ಉಮ್ರಾ ಪ್ರತಿಷ್ಠಾನದವರು ಸೆ.21ರ ಕಾರ್ಯಕ್ರಮಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರತಿಷ್ಠಾನದವರು ಸೆ.6ರ ಕಾರ್ಯಕ್ರಮದಲ್ಲಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ ಕಾರಣಕ್ಕೆ ಇಲಾಖೆ ಸಿಬ್ಬಂದಿ ಆ ಕಾರ್ಯಕ್ರಮಕ್ಕೆ ತಡೆಯೊಡ್ಡಿದ್ದರು. ಮಂಗಳವಾರದ ಕಾರ್ಯಕ್ರಮಕ್ಕೆ ಅನುಮತಿ ಕೊಡದಿದ್ದರೂ ಪ್ರತಿಷ್ಠಾನದವರು ಕದ್ದುಮುಚ್ಚಿ ಕಾರ್ಯಕ್ರಮ ನಡೆಸಿದ್ದಾರೆ’ ಎಂದು ತಹಶೀಲ್ದಾರ್‌ ವಿಲಿಯಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಉಮ್ರಾ ಪ್ರತಿಷ್ಠಾನದ ಅಧ್ಯಕ್ಷ ಕೆಜಿಎಫ್‌ ಬಾಬು ಅವರಿಗೆ ‘ಪ್ರಜಾವಾಣಿ’ ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT