ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರಿಗೆ ಅನ್ಯಾಯವಾಗದಂತೆ ಕ್ರಮವಹಿಸಿ

ಎಸ್‌ಸಿ, ಎಸ್‌ಟಿ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ಸೂಚನೆ
Last Updated 24 ಸೆಪ್ಟೆಂಬರ್ 2022, 5:19 IST
ಅಕ್ಷರ ಗಾತ್ರ

ಮಾಲೂರು: ‘ಪರಿಶಿಷ್ಟರ ಮೇಲೆ ದೌರ್ಜನ್ಯ ಹಾಗೂ ಜಾತಿ ನಿಂದನೆ ಪ್ರಕರಣಕಂಡುಬಂದಲ್ಲಿ ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ಕ್ರಮವಹಿಸಬೇಕು’ ಎಂದು ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ ಸೂಚಿಸಿದರು.

ತಾಲ್ಲೂಕಿನ ಟೇಕಲ್ ಹೋಬಳಿಯ ಉಳ್ಳೇರಹಳ್ಳಿ ಗ್ರಾಮದಲ್ಲಿ ಸಂತ್ರಸ್ತ ಬಾಲಕನ ಕುಟುಂಬದವರಿಗೆ ದಂಡ ವಿಧಿಸಿರುವ ಕುರಿತು ಶುಕ್ರವಾರಘಟನಾ ಸ್ಥಳಕ್ಕೆ ಭೇಟಿ ನೀಡಿ, ಬಳಿಕ ಪಟ್ಟಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

‘ಸಂತ್ರಸ್ತರ ಕುಟುಂಬವು ಭಯದ ವಾತಾವರಣದಲ್ಲಿದ್ದು, ಸೂಕ್ತ ರಕ್ಷಣೆ ಒದಗಿಸಲು ಈಗಾಗಲೇ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರದಿಂದ ಸಂತ್ರಸ್ತರಿಗೆ ನಿಯಮಾನುಸಾರ ಲಭ್ಯವಾಗಬೇಕಾದ ಸೌಲಭ್ಯ ಒದಗಿಸಲು ಕೂಡಲೇ ಕ್ರಮವಹಿಸಬೇಕು’ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

‘ತಪ್ಪಿತಸ್ಥರ ವಿರುದ್ಧ ಈಗಾಗಲೇ ಕಾನೂನು ಕ್ರಮಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು’ ಎಂದು ಪೊಲೀಸ್‌ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಕುಟುಂಬಕ್ಕೆ ರಕ್ಷಣೆ ಭರವಸೆ

‘ಸಮಿತಿ ಮುಂದೆ ಮಹಿಳೆ ನೋವು ಹೇಳಿಕೊಂಡರು. ನಿರಂತರ ರಕ್ಷಣೆ, ಮನೆ ಸೇರಿದಂತೆ ಮೂಲಸೌಲಭ್ಯವನ್ನು ಸಂತ್ರಸ್ತ ಕುಟುಂಬಕ್ಕೆ ನೀಡಲಾಗುವುದು. ಇಂಥ ಘಟನೆ ಪುನರಾವರ್ತನೆ ಆಗಲು ಅವಕಾಶ ಕೊಡಬಾರದು’ ಎಂದು ಸಮಿತಿ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿತಿಳಿಸಿದರು.

ಸದಸ್ಯ ಹಾಗೂ ಶಾಸಕಎಚ್‌.ಕೆ.ಕುಮಾರಸ್ವಾಮಿ ಮಾತನಾಡಿ, ‘ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಸಾಮರಸ್ಯ, ಸಹಬಾಳ್ವೆಯಿಂದ ಬದುಕಬೇಕು. ಪ್ರತಿ ಹಳ್ಳಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು’ ಎಂದು ಸೂಚಿಸಿದರು.

ಶಾಸಕ ಎನ್‌. ಮಹೇಶ್‌, ‘ಟೇಕಲ್‌ ಹೋಬಳಿಯಲ್ಲಿ ನಡೆದ ಎರಡನೇ ಘಟನೆ ಇದು. 41 ವರ್ಷಗಳ ಬಳಿಕ ಇದೇ ಹೋಬಳಿಯಲ್ಲಿ ಮತ್ತೊಂದು ದೌರ್ಜನ್ಯ ಪ್ರಕರಣ ನಡೆದಿರುವುದು ದುರಂತ’ ಎಂದರು.

ನಿವಾಸಕ್ಕೆ ತೆರಳಿ ಮಹಿಳೆ ಹಾಗೂ ಬಾಲಕನಿಂದ ಮಾಹಿತಿ ಪಡೆದರು. ಸಾಂತ್ವನ ಹೇಳಿ ಧೈರ್ಯ ತುಂಬಿದರು. ಆರ್ಥಿಕ ನೆರವು ಕೂಡ ನೀಡಿದರು.

‘ಈ ರೀತಿ ದೌರ್ಜನ್ಯ ನಡೆದರೆ ಪರಿಶಿಷ್ಟರು ಏಕಾಂಗಿಯಾಗಿ ಬದುಕುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ಸಂಬಂಧ ಮನಪರಿವರ್ತನೆಯಾಗಬೇಕು’ ಎಂದು ಹೇಳಿದರು.

ಸಮಿತಿ ಸದಸ್ಯರಾದ ಎನ್‌.ಮಹೇಶ್, ಎಚ್‌.ಕೆ.ಕುಮಾರಸ್ವಾಮಿ, ಬಿ.ಹರ್ಷವರ್ಧನ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್, ಜಿಲ್ಲಾ ‍ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ, ಮಾಲೂರು ತಾಲ್ಲೂಕು ತಹಶೀಲ್ದಾರ್ ಮಲ್ಲಿಕಾರ್ಜುನ ಇದ್ದರು.

ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಿ.ಆರ್.ಜಯಶ್ರೀ, ಉಳ್ಳೇರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಬಳಿಕ ಮಾಲೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮುದ್ದಣ್ಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT