ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತಾ ನ್ಯಾಯಾಲಯದ ಪ್ರಯೋಜನೆ ಪಡೆಯಿರಿ: ಸಂಜೀವ್‌ಕುಮಾರ್ ಮನವಿ

Last Updated 2 ಏಪ್ರಿಲ್ 2019, 14:49 IST
ಅಕ್ಷರ ಗಾತ್ರ

ಕೋಲಾರ: ‘ಸಾರ್ವಜನಿಕರ ಅನುಕೂಲಕ್ಕಾಗಿ ಕಾಯಂ ಜನತಾ ನ್ಯಾಯಾಲಯ ರಚಿಸಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು’ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂಜೀವ್‌ಕುಮಾರ್ ಹಂಚಾಟೆ ಮನವಿ ಮಾಡಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಯಂ ಜನತಾ ನ್ಯಾಯಾಲಯ ರಚನೆಯಾಗಿ 6 ವರ್ಷ ಕಳೆದಿದೆ. ಆದರೆ, ಅರಿವಿನ ಕೊರತೆಯಿಂದ ಪ್ರಕರಣಗಳು ದಾಖಲಾಗುತ್ತಿಲ್ಲ. ಜಿಲ್ಲಾ ಮಟ್ಟದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಪ್ರಚಾರ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಕಾಯಂ ಜನತಾ ನ್ಯಾಯಾಲಯ ವ್ಯಾಪ್ತಿಯ ಜಿಲ್ಲೆಗಳಿಂದ ಸಲ್ಲಿಕೆಯಾಗುವ ಪ್ರಕರಣಗಳನ್ನು ಆಧರಿಸಿ ಸರ್ಕಾರ ಆಯಾ ಜಿಲ್ಲಾ ಕೇಂದ್ರದಲ್ಲೇ ಕಾಯಂ ಜನತಾ ನ್ಯಾಯಾಲಯ ಆರಂಭಿಸಬಹುದು. ಆದರೆ, 6 ಕಾಯಂ ಜನತಾ ನ್ಯಾಯಾಲಯಗಳಲ್ಲೇ ದೂರುಗಳ ಸಂಖ್ಯೆ ಕಡಿಮೆಯಿದೆ. ಪ್ರಕರಣಗಳನ್ನು ವಿಲೇವಾರಿ ಮಾಡಲು ಕಾಲಮಿತಿ ಇಲ್ಲದಿದ್ದರೂ ಶೀಘ್ರವಾಗಿ ಇತ್ಯರ್ಥಪಡಿಸಲಾಗುತ್ತದೆ’ ಎಂದು ತಿಳಿಸಿದರು.

‘ಅದಾಲತ್‌ಗಳಿಗೆ ಬರುವ ಪ್ರಕರಣಗಳಲ್ಲಿ ವಿವಾದಕ್ಕೊಳಗಾದ ಸ್ವತ್ತಿನ ಮೌಲ್ಯ, ಹಣಕಾಸು ಸಂಸ್ಥೆಗಳ ವ್ಯವಹಾರಕ್ಕೆ ಸಂಬಂಧಿಸಿದ ಮೌಲ್ಯ ₹ 1 ಕೋಟಿ ಮೀರಿದ್ದರೆ ಅಂತಹ ವಿವಾದಗಳನ್ನು ಇತ್ಯರ್ಥಗೊಳಿಸಲು ಕಾಯಂ ಜನತಾ ನ್ಯಾಯಾಲಯಕ್ಕೆ ಅಧಿಕಾರವಿಲ್ಲ. ಇಲ್ಲಿನ ಯಾವುದೇ ವ್ಯಾಜ್ಯವನ್ನು 30 ದಿನದಲ್ಲಿ ಇತ್ಯರ್ಥಪಡಿಸಲಾಗುವುದು’ ಎಂದು ವಿವರಿಸಿದರು.

ತುಂಬಾ ಸರಳ: ‘ಮೊಕದ್ದಮೆ ಹೂಡುವ ಪ್ರಕ್ರಿಯೆ ತುಂಬಾ ಸರಳ. ಬಿಳಿ ಹಾಳೆಯಲ್ಲಿ ದೂರು ನೀಡಿದರೂ ನ್ಯಾಯಾಲಯ ಪ್ರತಿವಾದಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆಸುತ್ತದೆ. ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಈ ನ್ಯಾಯಾಲಯ ಹೊರಡಿಸುವ ತೀರ್ಪನ್ನು ಸಿವಿಲ್ ನ್ಯಾಯಾಲಯದ ಆದೇಶದಂತೆಯೇ ಪರಿಗಣಿಸಲಾಗುತ್ತದೆ. ತೀರ್ಪಿನ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವಂತಿಲ್ಲ’ ಎಂದು ಮಾಹಿತಿ ನೀಡಿದರು.

6 ನ್ಯಾಯಾಲಯ: ‘ಬೆಂಗಳೂರು, ಬೆಳಗಾವಿ, ಮೈಸೂರು, ಮಂಗಳೂರು, ಧಾರವಾಡ ಹಾಗೂ ಕಲಬುರ್ಗಿ ಜಿಲ್ಲಾ ಕೇಂದ್ರ ಸೇರಿದಂತೆ ಒಟ್ಟು 6 ಕಾಯಂ ಜನತಾ ನ್ಯಾಯಾಲಯ ತೆರೆಯಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಯು ಬೆಂಗಳೂರಿನ ಕಾಯಂ ಜನತಾ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತವೆ’ ಎಂದರು.

‘ಸರಕು ಸಾಗಣೆ ಸೇವೆ, ಅಂಚೆ, ಕೋರಿಯರ್, ಟೆಲಿಗ್ರಾಫ್ ಅಥವಾ ದೂರವಾಣಿ ಸೇವೆ, ವಿದ್ಯುತ್, ಬೆಳಕು ಅಥವಾ ನೀರು ಸರಬರಾಜು, ಸ್ಥಳೀಯ ಸಂಸ್ಥೆಯಲ್ಲಿನ ನೈರ್ಮಲ್ಯ ವ್ಯವಸ್ಥೆ, ಆರೋಗ್ಯ ಸೇವೆ, ವಿಮಾ ಸೇವೆ, ಬ್ಯಾಂಕಿಂಗ್ ಹಾಗೂ ಹಣಕಾಸು ಸಂಸ್ಥೆಗಳು, ವಸತಿ, ರಿಯಲ್ ಎಸ್ಟೇಟ್ ಸೇವೆ, ಶಿಕ್ಷಣ ಸೇವೆಗೆ ಸಂಬಂಧಿಸಿದಂತೆ ಅನ್ಯಾಯವಾದರೆ ಮತ್ತು ತೊಂದರೆಯಾದರೆ ಕಾಯಂ ಜನತಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಪರಿಹಾರ ಪಡೆಯಬಹುದು’ ಎಂದು ವಿವರಿಸಿದರು.

ಲೋಕ ಅದಾಲತ್: ‘ಆಯಾ ಜಿಲ್ಲೆ, ತಾಲ್ಲೂಕು ಕೇಂದ್ರದಲ್ಲಿ ಕಾನೂನು ಸೇವಾ ಪ್ರಾಧಿಕಾರ ತಿಂಗಳಿಗೊಮ್ಮೆ ಲೋಕ ಅದಾಲತ್ ನಡೆಸಿ ರಾಜಿ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸುತ್ತದೆ. ಕಾಯಂ ಜನತಾ ನ್ಯಾಯಾಲಯ ನಿತ್ಯವೂ ಕಾರ್ಯ ನಿರ್ವಹಿಸುತ್ತದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ್‌ ಜಿ.ಶಿರೋಳ್ ಹೇಳಿದರು.

‘ಜಿಲ್ಲಾ ಗ್ರಾಹಕರ ನ್ಯಾಯಾಲಯದ ರೀತಿಯಲ್ಲೇ ಕಾರ್ಯ ನಿರ್ವಹಿಸುವ ಕಾಯಂ ಜನತಾ ನ್ಯಾಯಾಲಯವು ತ್ವರಿತವಾಗಿ ಪ್ರಕರಣ ಇತ್ಯರ್ಥಪಡಿಸುವ ಉದ್ದೇಶ ಹೊಂದಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT