ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ‘ರೈತರ ಕಟ್ಟೆ ಪ್ರಯೋಜನ ಪಡೆಯಿರಿ’

ಮಾವು ಬೆಳೆಗಾರರಿಗೆ ಅನುಕೂಲ
Last Updated 2 ಜೂನ್ 2022, 5:23 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ‘ಮಾವು ಬೆಳೆಗಾರರು ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿನ ರೈತರ ಕಟ್ಟೆಯ ಪ್ರಯೋಜನ ಪಡೆದುಕೊಳ್ಳಬೇಕು. ತಮ್ಮ ಉತ್ಪನ್ನವನ್ನು ಈ ಕಟ್ಟೆಯಲ್ಲಿ ರಾಶಿ ಹಾಕಿ ಕಮಿಷನ್ ರಹಿತವಾಗಿ ಮಾರಾಟ ಮಾಡಬಹುದಾಗಿದೆ’ ಎಂದು ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಹೇಳಿದರು.

ಪಟ್ಟಣ ಹೊರವಲಯದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಿಸಿರುವ ರೈತರ ಕಟ್ಟೆ ವಹಿವಾಟಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ರೈತರ ಹಿತದೃಷ್ಟಿಯಿಂದ ಮಾರುಕಟ್ಟೆಯಲ್ಲಿ ರೈತರ ಕಟ್ಟೆ ನಿರ್ಮಿಸಲಾಗಿತ್ತು. ಆದರೆ, ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಆ ಸ್ಥಳದಲ್ಲಿ ಹೋಟೆಲ್ ನಡೆಸಲಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ ಎಂದು ಹೇಳಿದರು.

ಶಾಸಕ ಕೆ.ಆರ್. ರಮೇಶ್ ಕುಮಾರ್ ಹಾಗೂ ಎಪಿಎಂಸಿ ಅಧಿಕಾರಿಗಳನ್ನು ಭೇಟಿಯಾಗಿ ರೈತರ ಕಟ್ಟೆಗೆ ಜೀವ ಕೊಡುವಂತೆ ಕೋರಲಾಗಿತ್ತು. ಸಂಘದ ಮನವಿಗೆ ಮನ್ನಣೆ ನೀಡಿ ಈ ಬಾರಿ ರೈತರ ಕಟ್ಟೆಯನ್ನು ಉದ್ದೇಶಿತ ಕಾರ್ಯ ನಿರ್ವಹಣೆಗೆ ಬಿಟ್ಟುಕೊಡಲಾಗಿದೆ. ಇನ್ನು ಮುಂದೆ ಆ ಸ್ಥಳವನ್ನು ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳ ಮಾರಾಟಕ್ಕೆ ಮಾತ್ರ ಬಳಸಲಾಗುವುದು ಎಂದು ಹೇಳಿದರು.

ಮಾವು ಬೆಳೆಗಾರರು ಕೊಯ್ಲು ಮಾಡಿದ ಮಾವನ್ನು ತಂದು ಮಂಡಿಗಳಲ್ಲಿ ಸುರಿಯುತ್ತಿದ್ದಾರೆ. ಮಂಡಿ ನಿಬಂಧನೆಗೆ ಒಳಪಟ್ಟು ಕಾಯಿ ಮಾರಾಟ ಮಾಡಲಾಗುತ್ತಿದೆ. ರೈತರ ಕಟ್ಟೆ ಬಳಸಿಕೊಂಡು ವ್ಯಾಪಾರ ವಹಿವಾಟು ನಡೆಸಿದರೆ ಯಾವುದೇ ರೀತಿಯ ಶೋಷಣೆಗೆ ಅವಕಾಶ ಇರುವುದಿಲ್ಲ. ಗ್ರಾಹಕರಿಂದ ನೇರವಾಗಿ ಹಣ ಪಡೆದುಕೊಳ್ಳಬಹುದು. ಹಣಕ್ಕಾಗಿ ಕಾಯುವ ಅಗತ್ಯ ಇರುವುದಿಲ್ಲ ಎಂದು ಹೇಳಿದರು.

ಮಾವು ಬೆಳೆಗಾರರ ಸಂಘದ ಹೋರಾಟದ ಫಲವಾಗಿ ರೈತರ ಕಟ್ಟೆ ನಿರ್ಮಿಸಲಾಯಿತು. ರೈತರು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ವಿಫಲರಾದ ಪರಿಣಾಮ ಅದನ್ನು ಅನ್ಯ ವ್ಯವಹಾರಕ್ಕೆ ನೀಡಲಾಗಿತ್ತು. ಮುಂದೆ ಹಾಗಾಗದಂತೆ ಎಚ್ಚರವಹಿಸಬೇಕು. ಸೌಲಭ್ಯ ಕೈಜಾರಿ ಹೋಗದಂತೆ ನೋಡಿಕೊಳ್ಳಬೇಕು ಎಂದು
ಹೇಳಿದರು.

ಎಪಿಎಂಸಿ ಕಾರ್ಯದರ್ಶಿ ಉಮಾ, ಎಫ್ಎಂಒಸಿ ನಿರ್ದೇಶಕರಾದ ಬೆಲ್ಲಂ ಶ್ರೀನಿವಾಸರೆಡ್ಡಿ, ರೆಡ್ಡಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ರೆಡ್ಡಿ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಂ. ಶ್ರೀನಿವಾಸನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT