ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸುರಕ್ಷತೆಗೆ ಕಾಳಜಿ ವಹಿಸಿ: ನಿರ್ದೇಶಕಿ ಸುಜಾತಾ

ಶಿಕ್ಷಕರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಜಿಲ್ಲಾ ಉಸ್ತುವಾರಿ ವೀಕ್ಷಕಿ ಸುಜಾತಾ ಸೂಚನೆ
Last Updated 14 ಜುಲೈ 2021, 15:51 IST
ಅಕ್ಷರ ಗಾತ್ರ

ಕೋಲಾರ: ‘ಕೋವಿಡ್‌ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುತ್ತಿದ್ದೇವೆ. ಶಿಕ್ಷಕರ ಮೇಲೆ ಹೆಚ್ಚಿನ ಹೊಣೆಗಾರಿಕೆಯಿದ್ದು, ಮಕ್ಕಳ ಸುರಕ್ಷತೆಗೆ ಕಾಳಜಿ ವಹಿಸಿ’ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಜಿಲ್ಲಾ ಉಸ್ತುವಾರಿ ವೀಕ್ಷಕಿ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಜಂಟಿ ನಿರ್ದೇಶಕಿ ಸುಜಾತಾ ಸೂಚನೆ ನೀಡಿದರು.

ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಬುಧವಾರ ಭೇಟಿ ನೀಡಿ ಪರೀಕ್ಷಾ ಸಿದ್ಧತೆ ಹಾಗೂ ಅಣಕು ಪರೀಕ್ಷೆ ವೀಕ್ಷಿಸಿ ಮಾತನಾಡಿ, ‘ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಆರೋಗ್ಯ ಇಲಾಖೆಯ ಸಹಕಾರ ಪಡೆಯಿರಿ, ಪರೀಕ್ಷಾ ಸಮಯದಲ್ಲಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಿ’ ಎಂದು ತಾಕೀತು ಮಾಡಿದರು.

‘ಎಲ್ಲೆಡೆ ಮೋಡ ಕವಿದ ವಾತಾವರಣವಿದ್ದು, ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್ ವ್ಯವಸ್ಥೆ ಸಮರ್ಪಕವಾಗಿರಬೇಕು. ಅಂಗವಿಕಲ ಮಕ್ಕಳಿಗೆ ನೆಲ ಮಹಡಿಯಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ. ಪರೀಕ್ಷಾ ಕೇಂದ್ರಗಳಲ್ಲಿ ಮೂಲಸೌಕರ್ಯ ಸಮಸ್ಯೆ ಇರಬಾರದು. ಜಿಲ್ಲೆಯ 117 ಕೇಂದ್ರಗಳಲ್ಲೂ ಪರಿಶೀಲನೆ ಮಾಡಿ’ ಎಂದು ಬಿಇಒ ಹಾಗೂ ಪರೀಕ್ಷಾ ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.

‘ಕುಳಿತ ಕಡೆಯಿಂದಲೇ ಪರೀಕ್ಷಾ ಸಿದ್ಧತೆ ಕೇಳಿ ತಿಳಿದುಕೊಳ್ಳುವುದಲ್ಲ. ಆಯಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿ ಪರೀಕ್ಷಾ ಕೇಂದ್ರಕ್ಕೂ ಖುದ್ದು ಭೇಟಿ ಕೊಟ್ಟು ಪರಿಶೀಲನೆ ಮಾಡಬೇಕು. ಪ್ರತಿ ಕೊಠಡಿಯಲ್ಲೂ ವಿದ್ಯುತ್ ದೀಪ ಅಳವಡಿಸಿರಬೇಕು’ ಎಂದು ಸಲಹೆ ನೀಡಿದರು.

ಬೈಕ್‌ ಬಳಸಬೇಡಿ: ‘ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ಮತ್ತು ಒಎಂಆರ್ ಶೀಟ್ ಸಾಗಿಸಲು ಅಗತ್ಯ ಮಾರ್ಗ ಯೋಜಿಸಿ. ಈ ಕಾರ್ಯಕ್ಕೆ ಬೈಕ್‌ ಬಳಸಬಾರದು. ಸಕಾಲಕ್ಕೆ ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆಪತ್ರಿಕೆ ಮತ್ತು ಒಎಂಆರ್ ಶೀಟ್ ತಲುಪಿಸುವ ವ್ಯವಸ್ಥೆ ಮಾಡಿ. ಗೊಂದಲಕ್ಕೆ ಅವಕಾಶ ನೀಡಬೇಡಿ. ಒಂದು ಹೆಚ್ಚುವರಿ ಮಾರ್ಗ ವಾಹನ ಕಾಯ್ದಿರಿಸಿಕೊಳ್ಳಿ’ ಎಂದು ತಿಳಿಸಿದರು.

‘ಪರೀಕ್ಷಾ ಕೇಂದ್ರಕ್ಕೆ ಬರುವ ಎಲ್ಲಾ ಸಿಬ್ಬಂದಿ, ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಶಾಲೆಯಲ್ಲಿ ಹಾಜರಿದ್ದು, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಲುಪಲು ತೊಂದರೆಯಾಗದಂತೆ ಎಚ್ಚರ ವಹಿಸಬೇಕು’ ಎಂದು ಹೇಳಿದರು.

ಗೊಂದಲವಿಲ್ಲ: ಜಿಲ್ಲಾ ಕೇಂದ್ರದ ಸೆಂಟ್‌ ಆನ್ಸ್ ಶಾಲೆಯ ಕೇಂದ್ರದಲ್ಲಿ ನಡೆದ ಅಣಕು ಪರೀಕ್ಷೆ ವೀಕ್ಷಿಸಿ ಮಕ್ಕಳೊಂದಿಗೆ ಮಾತನಾಡಿ, ‘ಪರೀಕ್ಷೆ ಸಂಬಂಧ ಏನಾದರೂ ಗೊಂದಲವಿದೆಯೇ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಕ್ಕಳು, ‘ಪರೀಕ್ಷೆ ವಿಧಾನ ಹೊಸ ಬಗೆಯದಾಗಿದೆ. ಆದರೂ ಯಾವುದೇ ಗೊಂದಲವಿಲ್ಲ’ ಎಂದರು.

ಡಿಡಿಪಿಐ ಕೃಷ್ಣಮೂರ್ತಿ ಸುಗಮ ಪರೀಕ್ಷೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಡಿವೈಪಿಸಿ ಗಂಗರಾಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆಂಪಯ್ಯ, ಕೃಷ್ಣಮೂರ್ತಿ, ಉಮಾದೇವಿ, ರಾಮಕೃಷ್ಣಪ್ಪ, ಚಂದ್ರಶೇಖರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT