ಭಾನುವಾರ, ಡಿಸೆಂಬರ್ 15, 2019
19 °C
ಜನರ ಮನಸ್ಸಿನಿಂದ ದೂರ

ಮುನಿಯಪ್ಪ ವಿಚಾರ ಮುಗಿದ ಅಧ್ಯಾಯ: ಶಾಸಕ ಶ್ರೀನಿವಾಸಗೌಡ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮಾಜಿ ಸಂಸದ ಕೆ.ಎಚ್.ಮುನಿಯಪ್ಪರ ವಿಚಾರ ಮುಗಿದ ಅಧ್ಯಾಯ. ಅವರ ಬಗ್ಗೆ ಮಾತನಾಡುವುದು ವ್ಯರ್ಥ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ವ್ಯಂಗ್ಯವಾಡಿದರು.

ಇಲ್ಲಿ ಗುರುವಾರ ಇಫ್ಕೋ ಟೋಕಿಯೊ ಸಂಸ್ಥೆ ವತಿಯಿಂದ 14 ಮಂದಿಗೆ ಹಣಕಾಸು ನೆರವಿನ ಚೆಕ್‌ ವಿತರಿಸಿ ಮಾತನಾಡಿ, ‘ಈಗಾಗಲೇ ಚುನಾವಣೆಯಲ್ಲಿ ಸೋತಿರುವ ಮುನಿಯಪ್ಪ ಜನರ ಮನಸ್ಸಿನಿಂದ ಸಾಕಷ್ಟು ದೂರವಾಗಿದ್ದಾರೆ. ಅವರು ಸಂಸದರಾಗಿದ್ದಾಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ತಾಲ್ಲೂಕುಗಳಲ್ಲಿ ಸ್ವಲ್ಪವಾದರೂ ಅಭಿವೃದ್ಧಿ ಕೆಲಸ ಮಾಡಿದ್ದರೆ ತೋರಿಸಲಿ’ ಎಂದು ಸವಾಲು ಹಾಕಿದರು.

‘ಯರಗೋಳ್‌ ಯೋಜನೆ ಜಾರಿಗೆ ನಾನು ಓಡಾಡಿ ₹ 105 ಕೋಟಿ ಮಂಜೂರು ಮಾಡಿಸಿದೆ. ಆದರೆ, ಮುನಿಯಪ್ಪರ ಶಿಷ್ಯ ವರ್ತೂರು ಪ್ರಕಾಶ್‌ ಪೈಪ್‌ಲೈನ್‌ ಕಾಮಗಾರಿಯಲ್ಲಿ ಹಣ ಕೊಳ್ಳೆ ಹೊಡೆದ. ಆಗ ಸುಮ್ಮನಿದ್ದ ಮುನಿಯಪ್ಪ ಈಗ ಯರಗೋಳ್‌ ಯೋಜನೆ ಜಾರಿಗೊಳಿಸಿದ್ದು ತಾನೇ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಸುಳ್ಳು ಹೇಳಲು ಅವರಿಗೆ ನಾಚಿಕೆಯಾಗುವುದಿಲ್ಲವೆ’ ಎಂದು ಟೀಕಿಸಿದರು.

‘ಯರಗೋಳ್‌ ಯೋಜನೆಯ ಕಾಮಗಾರಿ 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಉತ್ತಮ ಮಳೆಯಾದರೆ ಕೋಲಾರ, ಬಂಗಾರಪೇಟೆ, ಮಾಲೂರು ತಾಲ್ಲೂಕುಗಳ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ. ಕೆಆರ್‍ಎಸ್ ಜಲಾಶಯ ನಿರ್ಮಿಸಿದ ವಿಶ್ವೇಶ್ವರಯ್ಯರನ್ನು ಮೈಸೂರು, ಬೆಂಗಳೂರು, ತಮಿಳುನಾಡಿನ ಜನ ನೆನೆಯುತ್ತಾರೆ’ ಎಂದರು.

ರಸ್ತೆ ದುರಸ್ತಿ: ‘ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಸಮಸ್ಯೆಗಳು ಹೆಚ್ಚಿದ್ದು, ಸದ್ಯದಲ್ಲೇ ಹೊಸ ಆಯುಕ್ತರು ಬರುತ್ತಾರೆ. ಬಳಿಕ ನೀರು, ರಸ್ತೆ, ಕಸ ಸೇರಿದಂತೆ ಎಲ್ಲಾ ಸಮಸ್ಯೆ ಬಗೆಹರಿಯಲಿವೆ. ನಗರದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ರಸ್ತೆ ದುರಸ್ತಿಗೆ ಈಗಾಗಲೇ ₹ 30 ಕೋಟಿ ವೆಚ್ಚದ ಟೆಂಡರ್ ಕರೆದು, ಗುತ್ತಿಗೆ ನೀಡಲಾಗಿದೆ’ ಎಂದು ವಿವರಿಸಿದರು.

‘ರಾಜಕಾರಣ ಏನೇ ಇರಲಿ ಡಿ.ಕೆ.ಶಿವಕುಮಾರ್‌ ಒಳ್ಳೆಯ ವ್ಯಕ್ತಿ. ಅವರ ಕೃತಜ್ಞತಾ ಭಾವನೆಯಿದೆ. ರಾಜಕೀಯ ದುರುದ್ದೇಶದಿಂದ ಅವರ ಬಂಧನವಾಗಿದೆಯೇ ಅಥವಾ ಇಲ್ಲವೇ ಎಂಬ ಸಂಗತಿ ನನಗೆ ಗೊತ್ತಿಲ್ಲ’ ಎಂದರು.

‘ಇಫ್ಕೋ ಟೋಕಿಯೊ ಸಂಸ್ಥೆಯು 36 ವರ್ಷಗಳಿಂದ ಬಡ ಜನರಿಗೆ ಹಣಕಾಸು ನೆರವು ನೀಡುತ್ತಿದೆ. ಸಂಸ್ಥೆಯಿಂದ ಸಾಕಷ್ಟು ಮಂದಿಯ ಆರೋಗ್ಯ, ಶಿಕ್ಷಣಕ್ಕೆ ಸಹಾಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ಸೊಣ್ಣೇಗೌಡ ಹಾಜರಿದ್ದರು.

ಪ್ರತಿಕ್ರಿಯಿಸಿ (+)