ಮಂಗಳವಾರ, ಫೆಬ್ರವರಿ 25, 2020
19 °C
ಸಾಹಿತ್ಯ ಸಮ್ಮೇಳನದ ಸಮಾರೋಪ: ಸಾಹಿತಿ ಚಂದ್ರಶೇಖರ ಪಾಟೀಲ ವಿಷಾದ

ಸಂವಿಧಾನದ ಆಶಯ ನಾಶಪಡಿಸುವ ಕೆಲಸ ನಡೆಯುತ್ತಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ‘ಸಂವಿಧಾನದ ಮೂಲ ಆಶಯಗಳನ್ನು ನಾಶಪಡಿಸುವ ರಾಜಕೀಯ, ಧರ್ಮ, ಸಾಂಸ್ಕೃತಿಕ ರಾಜಕಾರಣ ನಡೆಯುತ್ತಿದೆ’ ಎಂದು ಸಾಹಿತಿ ಚಂದ್ರಶೇಖರ ಪಾಟೀಲ (ಚಂಪಾ) ವಿಷಾದ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಸಂಜೆ ನಡೆದ 5ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ‘ಆಶಯಗಳನ್ನು ನಾಶಪಡಿಸುವ ರಾಜಕಾರಣದ ನಡೆಸುತ್ತಿರುವವರನ್ನು ಅಧಿಕಾರದಿಂದ ಕೆಳಗಿಳಿಸುವ ಕೆಲಸ ಜನರಿಂದ ಅಗಬೇಕು’ ಎಂದು ಅಭಿಪ್ರಾಯಪಟ್ಟರು.

‘ನಾಡಿನ ತುಂಬ ನೆಮ್ಮದಿ ಇಲ್ಲದ ವಾತಾವರಣ, ಕಂಗೆಡಿಸುವ ವಿದ್ಯಮಾನಗಳು ಸುತ್ತ ನಡೆಯುತ್ತಿದೆ. ಇಡೀ ವ್ಯವಸ್ಥೆ ಕೈ ಮೀರಿ ಹೋಗುತ್ತಿದೆಯೇನೋ ಎಂಬ ಆತಂಕ. ವೈಯಕ್ತಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ಅಭದ್ರತೆ ಕಾಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಶಿಕ್ಷಣದ ಮಟ್ಟಿಗೆ ಮಾತೃಭಾಷೆಯಲ್ಲೇ ಅಸ್ಥಿಭಾರ ಬಿದ್ದರೆ ಗಟ್ಟಿ ತಳಪಾಯದ ಮೇಲೆ ವ್ಯಕ್ತಿ ವಿಶ್ವಮಾನವಾಗಿ ಬೆಳೆಯಬಹುದು. ಒಂದು ಭಾಷೆಯ ಮೇಲೆ ಹಿಡಿತ ಸಾಧಿಸಿದರೆ ಜಗತ್ತಿನ ಶೇ.70ರಷ್ಟು ಭಾಷೆಗಳನ್ನು ಕಲಿತಂತೆ, ಎಲ್ಲ ಭಾಷೆಗಳ ತಳಪಾಯದ ಆಳದ ವಿನ್ಯಾಸ ಒಂದೇ’ ಎಂದು ವಿವರಿಸಿದರು.

‘ಶಿಕ್ಷಣದ ಮಟ್ಟಿಗೆ ಆಯಾ ರಾಜ್ಯದ ಭೌಗೋಳಿಕದ ಪರಿಸರದ ಭಾಷೆ ಮಾಧ್ಯಮವಾಗಬೇಕು. ಭಾಷಾ ವಿಜ್ಞಾನದಲ್ಲಿ ಪ್ರಥಮ ಭಾಷೆ ಎಂದರೆ ಆಯಾ ಪರಿಸರದ ಭಾಷೆ. ಮಗು ತನಗೆ ಗೊತ್ತಿರುವ, ತನ್ನ ಅರಿವಿನ ಸ್ಥಿತಿಯನ್ನು ಹೇಳುವ ಭಾಷೆ. ಅದನ್ನು ನಿರಾಕರಿಸುವುದು ಭ್ರೂಣ ಹತ್ಯೆಗೆ ಸಮನಾದ ಪಾಪದ ಕೆಲಸ’ ಎಂದು ಹೇಳಿದರು.

‘ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುವ ಕೆಲಸವಾಗುತ್ತಿದ್ದರೆ, ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಆಯಾ ಭಾಷೆಗಳ ಶಾಲೆಗಳು ಮುಚ್ಚುವ ಕೆಲಸ ಆಗುತ್ತಿದೆ. ಈ ಕತ್ತಲ ಸಾಮ್ರಾಜ್ಯದಲ್ಲಿ ಬೆಳಕು ತರುವ ಚಿಂತನೆ ಮಾಡಬೇಕು’ ಎಂದು ತಿಳಿಸಿದರು.

ಸಮ್ಮೇಳನಾಧ್ಯಕ್ಷ ವಿ.ನಾಗರಾಜ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಾನಂದ ಕೆಂಪರಾಜ್, ಗೌರವ ಕೋಶಾಧ್ಯಕ್ಷ ರತ್ನಪ್ಪ ಮೇಲಾಗಣಿ, ಕೋಲಾರ ತಾಲ್ಲೂಕು ಅಧ್ಯಕ್ಷ ಪ್ರೊ.ಎಂ.ಮುನಿರತ್ನಪ್ಪ, ಕೆಜಿಎಫ್ ತಾಲ್ಲೂಕು ಅಧ್ಯಕ್ಷ ವಿ.ಬಿ.ದೇಶಪಾಂಡೆ, ವಕೀಲ ಪಿ.ನಾರಾಯಣಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು