ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ತಡೆಗೆ ಕಾರ್ಯಪಡೆ ರಚನೆ

ಸ್ವಚ್ಛತೆ ಕಾಪಾಡಿ: ಸಭೆಯಲ್ಲಿ ಬಿಇಒ ನಾಗರಾಜಗೌಡ ಸೂಚನೆ
Last Updated 6 ಜೂನ್ 2020, 15:25 IST
ಅಕ್ಷರ ಗಾತ್ರ

ಕೋಲಾರ: ‘ಮಕ್ಕಳ ಆರೋಗ್ಯ ರಕ್ಷಣೆಯೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆಸಲು ಪ್ರತಿ 2 ಪರೀಕ್ಷಾ ಕೇಂದ್ರಗಳಿಗೆ ಒಂದರಂತೆ ಕಾರ್ಯಪಡೆ ರಚಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ತಿಳಿಸಿದರು.

ಇಲ್ಲಿ ಶನಿವಾರ ನಡೆದ ಬಿಆರ್‌ಪಿಗಳು, ಇಸಿಒಗಳು, ಸಿಆರ್‌ಪಿಗಳು ಹಾಗೂ ಬಿಐಇಆರ್‌ಸಿಗಳ ಸಭೆಯಲ್ಲಿ ಮಾತನಾಡಿ, ‘ಶಿಕ್ಷಣ ಸಚಿವರ ನೀಡಿರುವ ಸೂಚನೆ ಮತ್ತು ಇಲಾಖೆ ಸುತ್ತೋಲೆಯಂತೆ ಮಕ್ಕಳನ್ನು ಕೊರೊನಾ ಸೋಂಕಿನಿಂದ ರಕ್ಷಿಸುವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು’ ಎಂದು ಸೂಚಿಸಿದರು.

‘ಬಿಆರ್‌ಪಿ ಹಾಗೂ ಇಸಿಒಗಳ ನೇತೃತ್ವದ 5 ಮಂದಿ ಸದಸ್ಯರ ಕಾರ್ಯಪಡೆಯು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸುತ್ತದೆ. ಶಿಕ್ಷಣ ಸಚಿವರ ಸೂಚನೆಯಂತೆ ಪರೀಕ್ಷಾ ಕೇಂದ್ರಗಳಲ್ಲಿ ಸ್ವಚ್ಚತೆ ಕಾಪಾಡಬೇಕು. ಶಾಲಾ ಆವರಣ, ಕೊಠಡಿಗಳು, ಶೌಚಾಲಯ, ಕಚೇರಿಯನ್ನು ಸ್ಯಾನಿಟೈಸ್ ಮಾಡಬೇಕು’ ಎಂದು ಸೂಚನೆ ನೀಡಿದರು.

‘ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಹುಡುಕಾಟದ ವೇಳೆ ವಿದ್ಯಾರ್ಥಿಗಳ ನೂಕುನುಗ್ಗಲು ಉಂಟಾಗಬಹುದು. ಇದನ್ನು ತಪ್ಪಿಸಲು ಮಕ್ಕಳಿಗೆ ಅವರು ಕೂರಬೇಕಾದ ಕೊಠಡಿ ಸಂಖ್ಯೆಯ ವಿವರವನ್ನು ಮೊಬೈಲ್‌ ಸಂಖ್ಯೆಗೆ ಕಳುಹಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಥರ್ಮಲ್ ಸ್ಕ್ರೀನಿಂಗ್: ‘ಕೇಂದ್ರಕ್ಕೆ ಬರುವ ಮಕ್ಕಳು ಸರದಿ ಸಾಲಿನಲ್ಲಿ ಬರುವಾಗ ಅಂತರ ಕಾಯ್ದುಕೊಳ್ಳಲು ಪ್ರವೇಶದ್ವಾರದ ಬಳಿ ಬಣ್ಣದಲ್ಲಿ ಬಾಲಕರು, ಬಾಲಕಿಯರಿಗೆ ಪ್ರತ್ಯೇಕ ಸಾಲಿನ ನಿಲ್ಲಲು ವೃತ್ತಾಕಾರ ಅಥವಾ ಚೌಕಾಕಾರದ ಪಟ್ಟಿ ಹಾಕಬೇಕು. ಮಕ್ಕಳು ಆ ಪಟ್ಟಿಯಲ್ಲಿ ನಿಂತು ಮುಂದೆ ಸಾಗುವಂತೆ ನೋಡಿಕೊಳ್ಳಿ. ಜತೆಗೆ ಬಾಗಿಲಲ್ಲೇ ಪ್ರತಿ ವಿದ್ಯಾರ್ಥಿಯ ಥರ್ಮಲ್ ಸ್ಕ್ರೀನಿಂಗ್ ಮಾಡಿ’ ಎಂದು ಹೇಳಿದರು.

‘ಮಕ್ಕಳು ಮನೆಯಿಂದಲೇ ಕುಡಿಯುವ ನೀರು ತರಬೇಕು. ಮಕ್ಕಳು ಕೇಂದ್ರಕ್ಕೆ ಬಂದು ಹೋಗಲು ಜಿಲ್ಲಾಧಿಕಾರಿ ಮತ್ತು ಜಿ.ಪಂ ಸಿಇಒ ಅವರ ಸೂಚನೆಯಂತೆ ಕೆಎಸ್‌ಆರ್‌ಟಿಸಿ ಉಚಿತವಾಗಿ ಬಸ್ ವ್ಯವಸ್ಥೆ ಮಾಡಲಿದೆ’ ಎಂದು ವಿವರಿಸಿದರು.

ಪ್ರತ್ಯೇಕ ಕೊಠಡಿ: ‘ಜ್ವರ, ಶೀತ, ಕೆಮ್ಮಿನ ಸಮಸ್ಯೆಯಿರುವ ಮಕ್ಕಳನ್ನು ಸ್ಯಾನಿಟೈಸ್ ಮಾಡಿದ ಪ್ರತ್ಯೇಕ ಕೊಠಡಿಯಲ್ಲಿ ಕೂರಿಟಿ ಪರೀಕ್ಷೆ ಬರೆಸಲಾಗುತ್ತದೆ’ ಎಂದು ಕ್ಷೇತ್ರ ಸಮನ್ವಯಾಕಾರಿ ರಾಮಕೃಷ್ಣಪ್ಪ ತಿಳಿಸಿದರು.

ಬಿಆರ್‌ಸಿ ರಾಮಕೃಷ್ಣಪ್ಪ, ಬಿಆರ್‌ಪಿಗಳಾದ ಪ್ರವೀಣ್, ನಾಗರಾಜ್, ಸವಿತಾ, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ರಾಘವೇಂದ್ರ, ಆರ್.ಶ್ರೀನಿವಾಸನ್, ವೆಂಕಟಾಚಲಪತಿ, ಮುನಿರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT