ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲಕ್ಕೆ ಆಸ್ಪದ ಬೇಡ: ಹೆಚ್ಚುವರಿ ಜಿಲ್ಲಾಧಿಕಾರಿ

25ಕ್ಕೆ ಜಿಲ್ಲೆಯಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ: ಕೇಂದ್ರದ ಸುತ್ತ ನಿಷೇಧಾಜ್ಞೆ
Last Updated 21 ಮೇ 2019, 15:32 IST
ಅಕ್ಷರ ಗಾತ್ರ

ಕೋಲಾರ: ‘ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಮತ್ತು ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆಸಿ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪುಷ್ಪಲತಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿಕ್ಷಕರ ನೇಮಕಾತಿ ಪರೀಕ್ಷೆ ಸಂಬಂಧ ಇಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಮೇ 25 ಮತ್ತು 26ರಂದು ನೇಮಕಾತಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಮೂಲಸೌಕರ್ಯ ಕಲ್ಪಿಸಿ. ಯಾವುದೇ ಅಭ್ಯರ್ಥಿ ನೆಲದಲ್ಲಿ ಕುಳಿತು ಪರೀಕ್ಷೆ ಬರೆಯಬಾರದು. ಸೂಕ್ತ ಆಸನ ವ್ಯವಸ್ಥೆ ಮಾಡಿ’ ಎಂದು ತಿಳಿಸಿದರು.

‘ಪರೀಕ್ಷೆ ಕೇಂದ್ರಗಳ ಸುತ್ತಮುತ್ತ ಮುನ್ನೆಚ್ಚರಿಕೆ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ. ಜತೆಗೆ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಬಂದ್ ಮಾಡಿಸಬೇಕು. ನಿಯಮಾನುಸಾರ ಪರೀಕ್ಷಾ ಕಾರ್ಯಕ್ಕೆ ಎ ಮತ್ತು ಬಿ ದರ್ಜೆ ಅಧಿಕಾರಿಗಳನ್ನೇ ಮುಖ್ಯ ಅಧೀಕ್ಷಕರು ಹಾಗೂ ಸ್ಥಾನಿಕ ಜಾಗೃತ ದಳದ ಸಿಬ್ಬಂದಿಯಾಗಿ ನೇಮಿಸಬೇಕು’ ಎಂದು ಆದೇಶಿಸಿದರು.

‘ಪ್ರಶ್ನೆಪತ್ರಿಕೆ ಸೇರಿದಂತೆ ಗೋಪ್ಯ ವಸ್ತುಗಳ ಠೇವಣಿ ಹಾಗೂ ಪರೀಕ್ಷಾ ಕೇಂದ್ರಗಳಿಗೆ ಆ ವಸ್ತುಗಳ ರವಾನೆಯನ್ನು ಸುವ್ಯವಸ್ಥಿತವಾಗಿ. ಪ್ರಶ್ನೆಪತ್ರಿಕೆಗಳು ಜಿಲ್ಲಾ ಖಜಾನೆಯಲ್ಲಿದ್ದು, ಅಲ್ಲಿಂದ ಪರೀಕ್ಷೆ ಆರಂಭವಾಗುವ ಒಂದು ತಾಸಿಗೂ ಮುನ್ನ ಮಾರ್ಗಾಧಿಕಾರಿಗಳು ಕೇಂದ್ರಗಳಿಗೆ ತಲುಪಿಸುತ್ತಾರೆ’ ಎಂದು ವಿವರಿಸಿದರು.

1,440 ಅಭ್ಯರ್ಥಿಗಳು: ‘ಜಿಲ್ಲಾ ಕೇಂದ್ರದ ಸರ್ಕಾರಿ ಬಾಲಕರ ಜೂನಿಯರ್ ಕಾಲೇಜು, ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜು, ಮಹಿಳಾ ಸಮಾಜ ಮತ್ತು ಚಿನ್ಮಯ ವಿದ್ಯಾಲಯದಲ್ಲಿ ನೇಮಕಾತಿ ಪರೀಕ್ಷೆ ನಡೆಯಲಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಮಾಹಿತಿ ನೀಡಿದರು.

‘ಮೇ 25ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಾಮಾನ್ಯ ಪತ್ರಿಕೆ ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಇಂಗ್ಲೀಷ್‌ ಭಾಷೆ ಪತ್ರಿಕೆಯ ಪರೀಕ್ಷೆ ನಡೆಯುತ್ತದೆ. ಮೊದಲ ದಿನ ಪರೀಕ್ಷೆಗೆ 1,440 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದಾರೆ’ ಎಂದು ಹೇಳಿದರು.

‘ಮೇ 26ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಗಣಿತ ಮತ್ತು ವಿಜ್ಞಾನ ಪತ್ರಿಕೆ ಪರೀಕ್ಷೆ, ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ಭಾಷಾ ಸಾಮರ್ಥ್ಯ ಪತ್ರಿಕೆಯ ಪರೀಕ್ಷೆ ನಡೆಯುತ್ತದೆ. ಎರಡನೇ ದಿನದ ಪರೀಕ್ಷೆಗೆ ಪ್ರತಿ ವಿಷಯಕ್ಕೆ 1,114 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಪೊಲೀಸ್‌ ಭದ್ರತೆ: ‘ನಾಲ್ಕು ಕೇಂದ್ರಗಳಿಗೂ ಸ್ಥಾನಿಕ ಜಾಗೃತ ದಳ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ತಲುಪಿಸಲು ಮಾರ್ಗಾಧಿಕಾರಿಗಳ ತಂಡ ರಚಿಸಲಾಗಿದೆ. ಪ್ರಶ್ನೆಪತ್ರಿಕೆ ಸಾಗಿಸುವ ವಾಹನಗಳಿಗೆ ಪೊಲೀಸ್‌ ಭದ್ರತೆ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಗೌಡ, ಜಿಲ್ಲಾ ಖಜಾನಾಧಿಕಾರಿ ರಾಮಮೂರ್ತಿ, ಡಿವೈಪಿಸಿ ಶ್ರೀನಿವಾಸಮೂರ್ತಿ, ಎವೈಪಿಸಿ ಸಿದ್ದೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT