ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ವರ್ಗಾವಣೆ: ಇಂದು ಕೌನ್ಸೆಲಿಂಗ್‌

Last Updated 31 ಜುಲೈ 2019, 14:15 IST
ಅಕ್ಷರ ಗಾತ್ರ

ಕೋಲಾರ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ 2018-19ನೇ ಸಾಲಿನ ಕೋರಿಕೆ, ಕಡ್ಡಾಯ ವರ್ಗಾವಣೆ ಹಾಗು ಪರಸ್ಪರ ಘಟಕದೊಳಗಿನ ವರ್ಗಾವಣೆ ಕೌನ್ಸೆಲಿಂಗ್‌ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ (ಡಿಡಿಪಿಐ) ಕಚೇರಿಯಲ್ಲಿ ಗುರುವಾರದಿಂದ (ಆ.1) ಆರಂಭವಾಗಲಿದೆ.

‘ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸುಗಮವಾಗಿ ನಡೆಸಲು ಕ್ಷೇತ್ರ ಸಂಪನ್ಮೂಲ ಕಚೇರಿ ಸಿಬ್ಬಂದಿಯನ್ನು ನಿಯೋಜಿಸಲು ಸೂಚಿಸಲಾಗಿದೆ. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಂಬಂಧಿಸಿದ ಶಾಖಾ ಅಧೀಕ್ಷಕರು, ವಿಷಯ ನಿರ್ವಾಹಕರು ಕಡ್ಡಾಯವಾಗಿ ಅಗತ್ಯ ದಾಖಲೆಪತ್ರಗಳೊಂದಿಗೆ ಹಾಜರಿರಬೇಕು’ ಎಂದು ಡಿಡಿಪಿಐ ಕೆ.ರತ್ನಯ್ಯ ತಿಳಿಸಿದ್ದಾರೆ.

ಘಟಕದೊಳಗಿನ ಕೋರಿಕೆ ವರ್ಗಾವಣೆಗೆ ಈಗಾಗಲೇ ಪಟ್ಟಿಯಲ್ಲಿ ಪ್ರಕಟಿಸಿರುವಂತೆ ಕ್ರಮ ಸಂಖ್ಯೆ 1ರಿಂದ 250ರವರೆಗಿನ ಶಿಕ್ಷಕರು ಗುರುವಾರದ ಕೌನ್ಸೆಲಿಂಗ್‌ನಲ್ಲಿ ಹಾಜರಿರಬೇಕು. ಆ.2ರಂದು ಕ್ರಮಸಂಖ್ಯೆ 251ರಿಂದ 750ರವರೆಗಿನ ಶಿಕ್ಷಕರು, ಆ.3ರಂದು ಕ್ರಮಸಂಖ್ಯೆ 751ರಿಂದ 1,400ರವರೆಗಿನ ಶಿಕ್ಷಕರು ಹಾಗೂ ಆ.4ರಂದು ಕ್ರಮಸಂಖ್ಯೆ 1,401ರಿಂದ ಆದ್ಯತಾ ಪಟ್ಟಿಯ ಅಂತ್ಯದವರೆಗೂ ಇರುವ ಶಿಕ್ಷಕರು ಕೌನ್ಸೆಲಿಂಗ್‌ಗೆ ಬರಬೇಕು ಎಂದು ಹೇಳಿದ್ದಾರೆ.

ಮುಖ್ಯ ಶಿಕ್ಷಕರು ಹಾಗೂ ವಿಶೇಷ ಶಿಕ್ಷಕರ ವೃಂದದವರು ಆ.8ರಂದು ಪಟ್ಟಿಯಲ್ಲಿರುವಂತೆ ಕ್ರಮ ಸಂಖ್ಯೆ 1ರಿಂದ ಆದ್ಯತಾ ಪಟ್ಟಿಯ ಅಂತ್ಯದವರೆಗೂ ಕೌನ್ಸೆಲಿಂಗ್‌ನಲ್ಲಿ ಪಾಲ್ಗೊಳ್ಳಬೇಕು. ಆ.13 ಮತ್ತು ಆ.14ರಂದು ಕಡ್ಡಾಯ ವರ್ಗಾವಣೆ ನಿಯಮದಡಿ ಎ ವಲಯದಿಂದ ಬಿ ವಲಯಕ್ಕೆ ಮತ್ತು ಎ ವಲಯದಿಂದ ಸಿ ವಲಯಕ್ಕೆ ಅಂತಿಮ ಆದ್ಯತಾ ಪಟ್ಟಿಯಂತೆ ಪೂರ್ಣಗೊಳ್ಳುವವರೆಗೂ ಎಲ್ಲಾ ಶಿಕ್ಷಕರು ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬೇಕು ಎಂದು ಸೂಚಿಸಿದ್ದಾರೆ.

ಆ.14ರಂದು ಪರಸ್ಪರ ವರ್ಗಾವಣೆ ಬಯಸಿರುವ ಶಿಕ್ಷಕರು ಅಂತಿಮ ಆದ್ಯತಾ ಪಟ್ಟಿ ಪೂರ್ಣಗೊಳ್ಳುವವರೆಗೂ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದು. ಆನ್‌ಲೈನ್‌ ಮೂಲಕ ಕೌನ್ಸೆಲಿಂಗ್‌ ಪ್ರಕ್ರಿಯೆ ನಡೆಯಲಿದ್ದು, ತಾಂತ್ರಿಕ ಸಮಸ್ಯೆ ಎದುರಾದರೆ ಆ ದಿನಕ್ಕೆ ನಿಲ್ಲಿಸಿದ ಕ್ರಮ ಸಂಖ್ಯೆಯಿಂದ ಮುಂದಿನ ದಿನ ಪ್ರಕ್ರಿಯೆ ಮುಂದುವರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಕೋರಿಕೆ ವರ್ಗಾವಣೆಯ ಅಂತಿಮ ಪಟ್ಟಿಯಲ್ಲಿರುವ ಶಿಕ್ಷಕರು ಪ್ರತಿನಿತ್ಯ ಬೆಳಿಗ್ಗೆ 10 ಗಂಟೆಗೆ ಅಂತಿಮ ಆದ್ಯತಾ ಪಟ್ಟಿಯಲ್ಲಿನ ಕ್ರಮಸಂಖ್ಯೆ ಪ್ರಕಾರ ಕೌನ್ಸೆಲಿಂಗ್‌ಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಬಹುದು. ಕೌನ್ಸೆಲಿಂಗ್‌ ಸಂದರ್ಭದಲ್ಲಿ ವರ್ಗಾವಣೆ ಬಯಸಿರುವ ಶಿಕ್ಷಕರು ಮತ್ತು ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಹೊರತುಪಡಿಸಿ ಬೇರೆಯವರು ಯಾವುದೇ ಕಾರಣಕ್ಕೂ ಕಚೇರಿಗೆ ಬರಬಾರದು ಎಂದು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT