ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರು ಅಧ್ಯಯನಶೀಲರಾಗಿ: ಜಿ.ಪಂ ಅಧ್ಯಕ್ಷ

Last Updated 10 ಫೆಬ್ರುವರಿ 2021, 16:54 IST
ಅಕ್ಷರ ಗಾತ್ರ

ಕೋಲಾರ: ‘ಶಿಕ್ಷಕರು ಅಧ್ಯಯನಶೀಲರಾದರೆ ಮಾತ್ರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್‌ ಅಭಿಪ್ರಾಯಪಟ್ಟರು.

ಇಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ‘ಅನಿತಾ ಕೌಲ್’ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಕೆ.ಶ್ರೀನಿವಾಸ್ ಅವರನ್ನು ಸನ್ಮಾನಿಸಿ ಮಾತನಾಡಿದರು.

‘ಶಿಕ್ಷಕರು ಬಿಡುವಿನ ವೇಳೆಯಲ್ಲಿ ಹಾಗೂ ರಜಾ ದಿನಗಳಲ್ಲಿ ಇಷ್ಟವಾದ ವಿಷಯ ಕಲಿಯುತ್ತಾರೆ. ಸಂಪನ್ಮೂಲ ವ್ಯಕ್ತಿಗಳನ್ನು ಹುಡುಕಿಕೊಂಡು ಹೋಗುವುದಕ್ಕಿಂತ ನಮ್ಮ ನಡುವೆ ಇರುವ ಪರಿಣತ ಶಿಕ್ಷಕರನ್ನು ಬಳಸಿಕೊಂಡು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ವಿಜ್ಞಾನದ ವಿಚಾರಗಳಿಗೆ ಸಂಬಂಧಿಸಿದ ಜಾಗೃತಿ ಜಾಥಾ, ಪವಾಡ ರಹಸ್ಯ ಬಯಲು ಮೂಲಕ ಜನರಲ್ಲಿ ವಿಜ್ಞಾನದ ಅರಿವು ಮೂಡಿಸಬೇಕು’ ಎಂದು ಹೇಳಿದರು.

‘ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಸರ್ಕಾರ ಹಾಗೂ ಸಾರ್ವಜನಿಕರ ನೆರವಿನಿಂದ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಸ್ವಾಗತಾರ್ಹ. ಶಿಕ್ಷಣ ಸಾರ್ವತ್ರಿಕರಣಕ್ಕೆ ಅಗತ್ಯ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯ. ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವಲ್ಲಿ ಹಾಗೂ ಸಮುದಾಯವನ್ನು ಶಾಲಾ ಚಟುವಟಿಕೆಗಳಲ್ಲಿ ಪರಿಣಾಮಕಾರಿ ತೊಡಗಿಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ನಿರ್ಣಾಯಕ’ ಎಂದರು.

ಶಿಕ್ಷಕರ ಜವಾಬ್ದಾರಿ: ‘ಜಗತ್ತು ನಿರಂತರ ಬದಲಾವಣೆಯಿಂದ ಕೂಡಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿವೆ. ಈ ಬದಲಾವಣೆಗಳು ಸಮಾಜದ ಮೇಲೆ ಪರಿಣಾಮ ಬೀರುತ್ತಿವೆ. ಬದಲಾದ ಕಾಲಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ದಾರಿ. ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಶಿಕ್ಷಣಾಸಕ್ತರು ಆಗಾಗ್ಗೆ ಚಿಂತನ ಮಂಥನ ನಡೆಸಬೇಕು’ ಎಂದು ಸಲಹೆ ನೀಡಿದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಜಿ.ಶ್ರೀನಿವಾಸ್, ಸಹ ಕಾರ್ಯದರ್ಶಿ ಸಿ.ಪದ್ಮಾವತಿ, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT