ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗು ಕೊಂದು ನಾಪತ್ತೆಯಾಗಿದ್ದ ಟೆಕಿ ಬಂಧನ

ಆತ್ಮಹತ್ಯೆಗೆ ಯತ್ನಿಸಿ ವಿಫಲ: ಸ್ಥಳದಿಂದ ಪರಾರಿಯಾಗಿದ್ದ ಆರೋಪಿ
Last Updated 25 ನವೆಂಬರ್ 2022, 18:16 IST
ಅಕ್ಷರ ಗಾತ್ರ

ಕೋಲಾರ: ಪುಟಾಣಿ ಮಗಳನ್ನು ಎದೆಗಪ್ಪಿಕೊಂಡು ಕೊಂದು ಕೆರೆಗೆಸೆದು ತಲೆಮರೆಸಿಕೊಂಡಿದ್ದ ರಾಹುಲ್‌ ಎಂಬ ಗುಜರಾತ್‌ ಮೂಲದ ಐ.ಟಿ ಉದ್ಯೋಗಿಯನ್ನು ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಪೊಲೀಸ ವಿಚಾರಣೆಗೆ ಹೆದರಿ ಬೆಂಗಳೂರಿನ ಯಲಹಂಕ ಬಳಿಯ ಬಾಗಲೂರಿನ ತಮ್ಮ ನಿವಾಸದಿಂದ ನ.15ರಂದು ರಾಹುಲ್‌, ಮಗು ಜೊತೆ ಪರಾರಿಯಾಗಿದ್ದರು. ಅಂದು ಸಂಜೆ ಕೋಲಾರ ತಾಲ್ಲೂಕಿನ ಕೆಂದಟ್ಟಿ ಕೆರೆಯಲ್ಲಿ ಮಗು ಜಿಯಾ (ಎರಡೂವರೆ ವರ್ಷ) ಶವ ಪತ್ತೆಯಾಗಿತ್ತು. ಕೆರೆಯ ದಡದಲ್ಲಿ ರಾಹುಲ್‌ ಅವರ ಐ–20 ನೀಲಿ ಬಣ್ಣದ ಕಾರು, ಅದರೊಳಗೆ ಪರ್ಸ್‌ ಹಾಗೂ ಮೊಬೈಲ್‌ ಸಿಕ್ಕಿತ್ತು.

‘ರಾಹುಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಮಗುವನ್ನು ಕೊಂದು ತಲೆ‌‌ಮರೆಸಿಕೊಂಡಿದ್ದಾರೆಯೇ’ ಎಂಬ ಆಯಾಮಗಳಲ್ಲೂ ಪೊಲೀಸರು ತನಿಖೆ ಆರಂಭಿಸಿ, ಶೋಧ ಕಾರ್ಯಾಚರಣೆ ನಡೆಸಿದ್ದರು.

‘ಹಣಕಾಸಿನ ತೊಂದರೆಗೆ ಸಿಲುಕಿದ್ದ ಆರೋಪಿ ರಾಹುಲ್‌, ತಾವೇ ನೀಡಿದ್ದ ದೂರಿನ ವಿಚಾರವಾಗಿ ಪೊಲೀಸರು ವಿಚಾರಣೆಗೆ ಕರೆದಿದ್ದಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಲು ಮಗು ಜೊತೆ ಕೆಂದಟ್ಟಿ ಕೆರೆಯತ್ತ ಬಂದಿದ್ದರು. ಆತ್ಮಹತ್ಯೆ ಮಾಡಿಕೊಂಡು ಮಗು ಬದುಕುಳಿದರೆ ಕಷ್ಟವೆಂದು ಮೊದಲು ಮಗುವನ್ನು ಉಸಿರುಗಟ್ಟಿಸಿ ಕೊಂದು ಕೆರೆಗೆ ಎಸೆದಿದ್ದಾರೆ. ಬಳಿಕ ಆತ್ಮಹತ್ಯೆಗೆ ಯತ್ನಿಸಿ ವಿಫಲರಾಗಿದ್ದಾರೆ. ಬಂಗಾರಪೇಟೆ ರೈಲು ನಿಲ್ದಾಣಕ್ಕೆ ತೆರಳಿ ಅಲ್ಲಿಂದ ತಮಿಳುನಾಡಿಗೆ ಪರಾರಿಯಾಗಿದ್ದರು. ಅಲ್ಲಿಂದ ಆಂಧ್ರ, ಮಹಾರಾಷ್ಟ್ರ, ದೆಹಲಿಗೂ ತೆರಳಿದ್ದಾರೆ. ಕೆಲ ದಿನಗಳ ಬಳಿಕ ಕುಟುಂಬದವರಿಗೆ ಕರೆ ಮಾಡಿ ತಮ್ಮನ್ನು ಅಪಹರಿಸಿರುವ ನಾಟಕವನ್ನೂ ಕಟ್ಟಿದ್ದಾರೆ. ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿ ಕರೆತಂದೆವು. ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಗ್ರಾಮಾಂತರ ಪೊಲೀಸರು ಆರೋಪಿಯನ್ನು ಕೆರೆಯ ಬಳಿ ಕರೆದುಕೊಂಡು ಹೋಗಿ ಮಾಹಿತಿ ಸಂಗ್ರಹಿಸಿದ್ದಾರೆ.

ಹಿನ್ನೆಲೆ ಏನು?: ಒಡವೆ ಅಡವಿಟ್ಟಿದ್ದ ರಾಹುಲ್‌, ಮನೆಯಲ್ಲಿ ಕಳ್ಳತನವಾಗಿದೆ ಎಂದು ಬಾಗಲೂರು ಪೊಲೀಸ್‌ ಠಾಣೆಗೆ ಸುಳ್ಳು ದೂರು ನೀಡಿದ್ದರು‌. ವಿಚಾರಣೆಗೆ ಠಾಣೆಗೆ ಬರುವಂತೆ ಪೊಲೀಸರು ಕರೆದಿದ್ದರು. ಮಗುವನ್ನು ಶಾಲೆಗೆ ಬಿಟ್ಟು ಠಾಣೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿದ್ದರು. ಬಳಿಕ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.

ವಿಚಾರಣೆಗೆ ಹೆದರಿ ನಾಪತ್ತೆಯಾಗಿದ್ದ ಅವರಿಗಾಗಿ ಬಾಗಲೂರು ಪೊಲೀಸರು ಹುಡುಕಾಟ ಆರಂಭಿಸಿದ್ದರು. ಮೊಬೈಲ್ ನೆಟ್‍ವರ್ಕ್ ಲೊಕೇಶನ್ ಆಧಾರದ ಮೇರೆಗೆ ಕೆಂದಟ್ಟಿ ಬಳಿಗೆ ಬಂದಾಗ ಜಿಯಾ ಶವ ಪತ್ತೆಯಾಗಿತ್ತು.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ದೇವರಾಜ್‌, ಗ್ರಾಮಾಂತರ ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ಐಯ್ಯಣ್ಣ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದರು. ಆ ಬಳಿಕ ರಾಹುಲ್‌ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಕಾರ್ಯಾಚರಣೆ ಮುಂದುವರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT