ಗುರುವಾರ , ಮಾರ್ಚ್ 30, 2023
24 °C

ತೆರೆದ ದೇವಾಲಯ: ಭಕ್ತರ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಲಾಕ್‌ಡೌನ್‌ ಕಾರಣಕ್ಕೆ ಬಂದ್‌ ಆಗಿದ್ದ ಜಿಲ್ಲೆಯ ದೇವಾಲಯಗಳಲ್ಲಿ ಸೋಮವಾರದಿಂದ ಪೂಜೆ ಆರಂಭವಾಗಿದ್ದು, ಭಕ್ತರ ದಂಡೇ ಹರಿದುಬಂದಿತು.

ಕೋವಿಡ್‌ 2ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಲಾಕ್‌ಡೌನ್‌ ಜಾರಿಗೊಳಿಸಿದ ಕಾರಣ ಏ.22ರಿಂದ ಜಿಲ್ಲೆಯ ಎಲ್ಲಾ ದೇವಾಲಯಗಳನ್ನು ಬಂದ್‌ ಮಾಡಲಾಗಿತು. ಇದೀಗ ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ದೇವಾಲಯಗಳನ್ನು ತೆರೆದು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬಂದ್‌ ಆಗಿದ್ದ ಚರ್ಚ್‌ ಹಾಗೂ ಮಸೀದಿಗಳನ್ನು ಸಹ ತೆರೆಯಲಾಯಿತು.

ಭಕ್ತರು ದೇವಾಲಯಗಳಲ್ಲಿ ತೀರ್ಥ ಪ್ರಸಾದವಿಲ್ಲದೆ ಮಂಗಳಾರತಿ, ಕುಂಕುಮ, ವಿಭೂತಿ ಪ್ರಸಾದ ಪಡೆದು ಕೃತಾರ್ಥರಾದರು. ನಗರದ ಕೋಲಾರಮ್ಮ, ಸೋಮೇಶ್ವರ, ಕೆಇಬಿ ಗಣಪತಿ ದೇವಾಲಯ, ನಂಜುಂಡೇಶ್ವರ, ವೆಂಕಟರಮಣಸ್ವಾಮಿ, ಪಂಚಮುಖಿ ಹನುಮ, ಶನೇಶ್ವರಸ್ವಾಮಿ, ಕಿಲಾರಿಪೇಟೆಯ ವೇಣುಗೋಪಾಲಸ್ವಾಮಿ, ಸತ್ಯಮ್ಮದೇವಿ, ಕೊಂಡರಾಜನಹಳ್ಳಿಯ ಆಂಜನೇಯ, ಸೀತಿ ಬೆಟ್ಟದ ಶ್ರೀಪತೇಶ್ವರಸ್ವಾಮಿ ದೇವಾಲಯ ಸೇರಿದಂತೆ ಬಹುತೇಕ ದೇವಾಲಯಗಳಲ್ಲಿ ಪ್ರತಿನಿತ್ಯದಂತೆ ಪೂಜಾ ಕೈಂಕರ್ಯ ನೆರವೇರಿತು.

ದೇವಾಲಯಗಳ ಆಡಳಿತ ಮಂಡಳಿಯು ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಭಕ್ತರಿಗೆ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ದೇವಾಲಯಗಳ ಆವರಣದಲ್ಲಿ ಚೌಕಾಕಾರದಲ್ಲಿ ಮತ್ತು ವೃತ್ತಾಕಾರದಲ್ಲಿ ಪಟ್ಟಿ ಹಾಕಿತ್ತು. ಭಕ್ತರಿಗೆ ಕೈ ಸ್ವಚ್ಛ ಮಾಡಿಕೊಳ್ಳಲು ಪ್ರವೇಶ ಭಾಗದಲ್ಲೇ ಸ್ಯಾನಿಟೈಸರ್‌ನ ವ್ಯವಸ್ಥೆ ಮಾಡಲಾಗಿತ್ತು.

ದೇವಾಲಯಗಳಿಗೆ ಬರುವ ಭಕ್ತರಿಗೆ ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳ ಬಿಡಲಾಯಿತು. ಮಾಸ್ಕ್‌ ಧರಿಸಿ ಬಂದಿದ್ದ ಭಕ್ತರು ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆದರು. ಸಣ್ಣಪುಟ್ಟ ದೇವಾಲಯಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಇಲ್ಲದಿದ್ದರೂ ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಂಡುಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು