ಜಿಲ್ಲೆಯ ವಿದ್ಯಾರ್ಥಿಗಳಿಗಿಲ್ಲ ಪಠ್ಯಪುಸ್ತಕ ಭಾಗ್ಯ

7
ಶೈಕ್ಷಣಿಕ ವರ್ಷ ಆರಂಭವಾಗಿ ಒಂದು ತಿಂಗಳು

ಜಿಲ್ಲೆಯ ವಿದ್ಯಾರ್ಥಿಗಳಿಗಿಲ್ಲ ಪಠ್ಯಪುಸ್ತಕ ಭಾಗ್ಯ

Published:
Updated:
ಸಾಂದರ್ಭಿಕ ಚಿತ್ರ

ಕೋಲಾರ: ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆದರೂ ಜಿಲ್ಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಭಾಗ್ಯವಿಲ್ಲ. ಪಠ್ಯಪುಸ್ತಕವಿಲ್ಲದೆ ಒಂದೆಡೆ ಶಿಕ್ಷಕರ ಬೋಧನೆಗೆ ಸಮಸ್ಯೆಯಾಗಿದ್ದರೆ ಮತ್ತೊಂದೆಡೆ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದೆ.

ಜಿಲ್ಲೆಯಲ್ಲಿ ಆರು ಶೈಕ್ಷಣಿಕ ವಲಯಗಳಿದ್ದು, ಎಲ್ಲೆಡೆ ಮೇ 28ರಿಂದ ಶಾಲೆ ಆರಂಭವಾಗಿವೆ. 1ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಒಟ್ಟಾರೆ 572 ನಮೂನೆಯ ಪಠ್ಯಪುಸ್ತಕಗಳಿವೆ. ಈ ಪೈಕಿ ಕೆಲ ಪುಸ್ತಕಗಳು ವಿದ್ಯಾರ್ಥಿಗಳ ಕೈಸೇರಿದ್ದರೆ ಮತ್ತೆ ಕೆಲ ಪುಸ್ತಕಗಳು ಈವರೆಗೂ ಬಂದಿಲ್ಲ.

ಪಠ್ಯಪುಸ್ತಕಗಳನ್ನು ‘ಪಾರ್ಟ್‌ 1’ ಮತ್ತು ‘ಪಾರ್ಟ್‌ 2’ ಎಂದು ವಿಂಗಡಿಸಲಾಗಿದೆ. ಇದರಲ್ಲಿ ಪಾರ್ಟ್‌ 1ರ ಪುಸ್ತಕಗಳು ಶೈಕ್ಷಣಿಕ ವರ್ಷದ ಆರಂಭದಲ್ಲೇ ಬೇಕಿದ್ದು, ಇವುಗಳನ್ನು ಬೇಗನೆ ವಿದ್ಯಾರ್ಥಿಗಳಿಗೆ ತಲುಪಿಸಬೇಕು. 260 ಪುಟಗಳಿಗಿಂತ ಹೆಚ್ಚಿನ ಪಠ್ಯವಿರುವ ಪುಸ್ತಕಗಳನ್ನು ಪಾರ್ಟ್‌ 2ರಲ್ಲಿ ಸೇರಿಸಲಾಗಿದ್ದು, ಇವುಗಳನ್ನು ಶೈಕ್ಷಣಿಕ ವರ್ಷ ಆರಂಭವಾಗಿ ಕೆಲ ತಿಂಗಳು ಕಳೆದ ನಂತರ ವಿತರಣೆ ಮಾಡಬೇಕು.

ಕೆಟಿಬಿಎಸ್ ಎಡವಟ್ಟು: ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳು ಹಾಗೂ ಖಾಸಗಿ ಶಾಲೆಗಳಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕ ಕೊಡಲಾಗುತ್ತದೆ. ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆಡಳಿತ ಮಂಡಳಿಯಿಂದ ಹಣ ಪಡೆದು ಪಠ್ಯಪುಸ್ತಕ ಒದಗಿಸಲಾಗುತ್ತದೆ.

ಕರ್ನಾಟಕ ಪಠ್ಯಪುಸ್ತಕ ಸಂಘವು (ಕೆಟಿಬಿಎಸ್) ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕ ಪೂರೈಸುವ ಹೊಣೆ ಹೊತ್ತಿದೆ. ಪ್ರತಿ ಬಾರಿ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ (ಡಿಡಿಪಿಐ) ಕಚೇರಿಯಿಂದ ಜಿಲ್ಲೆಯ ಪಠ್ಯಪುಸ್ತಕ ಬೇಡಿಕೆ ಸಂಬಂಧ ಕೆಟಿಬಿಎಸ್‌ಗೆ ಪ್ರಸ್ತಾವ ಸಲ್ಲಿಸಲಾಗುತ್ತಿತ್ತು. ಈ ಪ್ರಸ್ತಾವಕ್ಕೆ ಅನುಗುಣವಾಗಿ ಜಿಲ್ಲೆಗೆ ಪಠ್ಯಪುಸ್ತಕ ಪೂರೈಕೆಯಾಗುತ್ತಿದ್ದವು.

ಆದರೆ, ಈ ಬಾರಿ ಕೆಟಿಬಿಎಸ್‌ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಿಂದ ಮಾಹಿತಿ ಪಡೆಯುವ ಬದಲು ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್‌ ವ್ಯವಸ್ಥೆಯ (ಸ್ಯಾಟ್ಸ್‌) 2017ರ ನವೆಂಬರ್‌ ಅಂತ್ಯದವರೆಗಿನ ಅಂಕಿ ಅಂಶ ಆಧರಿಸಿ ಜಿಲ್ಲೆಗೆ ಪಠ್ಯಪುಸ್ತಕ ಪೂರೈಕೆ ಮಾಡಿದೆ. ಕೆಟಿಬಿಎಸ್‌, ಸ್ಯಾಟ್ಸ್‌ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೂ ಮುಂಚಿನ ವಿದ್ಯಾರ್ಥಿಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡಿದೆ. ಈ ಅಂಕಿ ಅಂಶಕ್ಕೆ ಹೋಲಿಸಿದರೆ ವಾಸ್ತವದಲ್ಲಿ ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಕೆಟಿಬಿಎಸ್‌, ಸ್ಯಾಟ್ಸ್‌ ಅಂಕಿ ಅಂಶ ಆಧರಿಸಿ ಮಾಡಿದ ಎಡವಟ್ಟಿನಿಂದ ಪಠ್ಯಪುಸ್ತಕಗಳ ಕೊರತೆ ಎದುರಾಗಿದೆ.

ಆಮೆ ಗತಿಯ ಮುದ್ರಣ: ಕೆಟಿಬಿಎಸ್‌ ಖಾಸಗಿ ಮುದ್ರಣಾಲಯಗಳಿಗೆ ಪಠ್ಯಪುಸ್ತಕ ಮುದ್ರಿಸುವ ಟೆಂಡರ್‌ ನೀಡಿದ್ದು, ಮುದ್ರಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಕೆಲ ತರಗತಿಗಳ ಪಠ್ಯಕ್ರಮ ಪರಿಷ್ಕರಣೆ ಹಾಗೂ ಕಾಗದ ಕೊರತೆಯಿಂದಾಗಿ ಪಠ್ಯಪುಸ್ತಕ ಮುದ್ರಣ ಪ್ರಕ್ರಿಯೆ ಆಮೆ ಗತಿಯಲ್ಲಿ ಸಾಗಿದೆ. ಪಠ್ಯಪುಸ್ತಕಗಳಿಲ್ಲದೆ ಶಾಲೆಗಳಲ್ಲಿ ಪಾಠ ಪ್ರವಚನ ಶೈಕ್ಷಣಿಕ ವೇಳಾಪಟ್ಟಿಯಂತೆ ನಡೆಯುತ್ತಿಲ್ಲ.

ಬಹುಪಾಲು ಶಿಕ್ಷಕರು ಹಿಂದಿನ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳ ನೆರವಿನಿಂದ ಬೋಧನೆ ಮಾಡುತ್ತಿದ್ದಾರೆ. ಮತ್ತೆ ಕೆಲ ಶಿಕ್ಷಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಡಕ ಮಾಡಿರುವ ಪಠ್ಯ ವಿಷಯವನ್ನು ಡೌನ್‌ಲೋಡ್‌ ಮಾಡಿಕೊಂಡು ಬೋಧನಾ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪಠ್ಯಪುಸ್ತಕ ಬೇಡಿಕೆ: ಜಿಲ್ಲೆಯಲ್ಲಿ 1,267 ಕಿರಿಯ ಪ್ರಾಥಮಿಕ ಶಾಲೆ, 944 ಹಿರಿಯ ಪ್ರಾಥಮಿಕ ಶಾಲೆ ಹಾಗೂ 356 ಪ್ರೌಢ ಶಾಲೆ ಸೇರಿದಂತೆ ಒಟ್ಟಾರೆ 2,567 ಶಾಲೆಗಳಿವೆ. ಜಿಲ್ಲೆಯ ಪಠ್ಯಪುಸ್ತಕ ಬೇಡಿಕೆ 14,50,019 ಇದ್ದು, ಈ ಪೈಕಿ 14,03,646 ಪುಸ್ತಕಗಳು ಪೂರೈಕೆಯಾಗಿವೆ.

ಇದರಲ್ಲಿ 13,34,607 ಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲಾಗಿದೆ. ಇನ್ನೂ 1,15,412 ಪುಸ್ತಕಗಳು ವಿದ್ಯಾರ್ಥಿಗಳ ಕೈಸೇರಿಲ್ಲ. ಕೆಟಿಬಿಎಸ್‌ನಿಂದ ಪುಸ್ತಕಗಳು ಪೂರೈಕೆಯಾದಂತೆ ಅವುಗಳನ್ನು ಶಾಲೆಗಳಿಗೆ ತಲುಪಿಸಲಾಗುತ್ತಿದೆ. ಈ ಪ್ರಕ್ರಿಯೆ ಒಂದು ತಿಂಗಳಿನಿಂದ ನಡೆಯುತ್ತಲೇ ಇದೆ.

ಪುಸ್ತಕಕ್ಕೆ ಅಲೆದಾಟ: ಕೆಲ ಖಾಸಗಿ ಶಾಲೆಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಪಠ್ಯಪುಸ್ತಕಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿವೆ. ಮತ್ತೆ ಕೆಲ ಖಾಸಗಿ ಶಾಲೆಗಳು ಪಠ್ಯಪುಸ್ತಕಗಳು ಬರುವುದನ್ನೇ ಎದುರು ನೋಡುತ್ತಿವೆ. ಪಠ್ಯಪುಸ್ತಕಗಳಿಗೆ ಹಣ ಪಾವತಿಸಿರುವ ವಿದ್ಯಾರ್ಥಿಗಳು ಪುಸ್ತಕ ಕೇಳುತ್ತಿದ್ದು, ಅವರಿಗೆ ಉತ್ತರಿಸುವುದು ಆಡಳಿತ ಮಂಡಳಿ ಸದಸ್ಯರಿಗೆ ಹಾಗೂ ಶಿಕ್ಷಕರಿಗೆ ದೊಡ್ಡ ತಲೆ ನೋವಾಗಿದೆ.

ಇನ್ನು ಸರ್ಕಾರಿ ಶಾಲಾ ಶಿಕ್ಷಕರಿಗೆ ಪ್ರತಿನಿತ್ಯ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿ ಬಳಿ ಬಂದು ಪಠ್ಯಪುಸ್ತಕ ವಿಚಾರಿಸುವುದೇ ಕೆಲಸವಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಪಠ್ಯಪುಸ್ತಕಗಳನ್ನು ಹುಡುಕಿಕೊಂಡು ಪುಸ್ತಕ ಮಾರಾಟ ಮಳಿಗೆಗಳಿಗೆ ಅಲೆಯುವಂತಾಗಿದೆ.

ಪತ್ರ ಬರೆಯಲಾಗಿದೆ
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಶಾಲೆಗಳಿಗೆ ಶೇ 95.08ರಷ್ಟು ಪಠ್ಯಪುಸ್ತಕ ವಿತರಣೆ ಮಾಡಲಾಗಿದೆ. ಕೆಲ ಶಾಲೆಗಳಿಗೆ ಪಠ್ಯಪುಸ್ತಕಗಳು ಬಂದಿಲ್ಲ. ಪಠ್ಯಕ್ರಮ ಪರಿಷ್ಕರಣೆ, ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳ ಸೇರಿದಂತೆ ವಿವಿಧ ಕಾರಣದಿಂದ ಪಠ್ಯಪುಸ್ತಕಗಳ ಕೊರತೆ ಎದುರಾಗಿದೆ. ಈ ಸಂಬಂಧ ಇಲಾಖೆಯ ಆಯುಕ್ತರ ಕಚೇರಿಗೆ ಪತ್ರ ಬರೆದು ಶೀಘ್ರವೇ ಪಠ್ಯಪುಸ್ತಕ ಸರಬರಾಜು ಮಾಡುವಂತೆ ಕೋರಲಾಗಿದೆ.
ವಿಕ್ಟರ್‌, ಸಾರ್ವಜನಿಕ ಶಿಕ್ಷಣ ಇಲಾಖೆ (ಪ್ರಭಾರ) ಉಪ ನಿರ್ದೇಶಕ

                                  ಶೈಕ್ಷಣಿಕ ವಲಯವಾರು ಪುಠ್ಯಪುಸ್ತಕ ವಿವರ
ವಲಯ ಬೇಡಿಕೆ ಪೂರೈಕೆ ವಿತರಣೆ
ಬಂಗಾರಪೇಟೆ 2,43,433 2,36,795 2,22,878
  ಕೆಜಿಎಫ್‌ 1,78,911  1,73,693  1,66,487
ಕೋಲಾರ 3,78,374  3,57,255  3,35,461
ಮಾಲೂರು 2,21,601  2,18,704 2,10,745
ಮುಳಬಾಗಿಲು 2,33,056 2,25,826  2,15,650
ಶ್ರೀನಿವಾಸಪುರ 1,94,644  1,91,373   1,83,386

 
 * 2,567 ಶಾಲೆಗಳು
* 14,50,019 ಪಠ್ಯಪುಸ್ತಕ ಬೇಡಿಕೆ
* 14,03,646 ಪೂರೈಕೆಯಾದ ಪುಸ್ತಕ
* 13,34,607 ಪುಸ್ತಕಗಳ ವಿತರಣೆ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !