ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭದಲ್ಲೇ ಮೃತಪಟ್ಟ ಮಗು: ತಾಯಿ ನರಳಾಟ

Last Updated 11 ಜೂನ್ 2021, 15:22 IST
ಅಕ್ಷರ ಗಾತ್ರ

ಕೋಲಾರ: ಗರ್ಭದಲ್ಲೇ ಮೃತಪಟ್ಟ ಮಗುವನ್ನು ಹೊರ ತೆಗೆಯಲು ವೈದ್ಯರು ನಿರಾಕರಿಸಿದ್ದರಿಂದ ತಾಯಿಯು ನಾಲ್ಕೈದು ತಾಸು ನರಳಾಡಿದ ಘಟನೆ ನಗರದ ಎಸ್‌ಎನ್ಆರ್‌ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ನಡೆಯಿತು.

ತಾಲ್ಲೂಕಿನ ಸೀಸಂದ್ರ ಗ್ರಾಮದ ಸುಬ್ರಮಣಿ ಅವರ ಪತ್ನಿ ಸುಮಾ ಅವರನ್ನು ಹೆರಿಗೆಗಾಗಿ ಶುಕ್ರವಾರ ಬೆಳಿಗ್ಗೆ ಎಸ್‌ಎನ್‌ಆರ್‌ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗಕ್ಕೆ ಕರೆತರಲಾಗಿತ್ತು. ಸುಮಾ ಅವರನ್ನು ಪರೀಕ್ಷಿಸಿದ ವೈದ್ಯರು ಮಗು ಹೊಟ್ಟೆಯಲ್ಲೇ ಮೃತಪಟ್ಟಿರುವುದಾಗಿ ಹೇಳಿದರು. ಬಳಿಕ ಕುಟುಂಬ ಸದಸ್ಯರು ಶಸ್ತ್ರಚಿಕಿತ್ಸೆ ಮೂಲಕ ಮೃತ ಮಗುವನ್ನು ಹೊಟ್ಟೆಯಿಂದ ಹೊರ ತೆಗೆಯುವಂತೆ ವೈದ್ಯರಿಗೆ ಮನವಿ ಮಾಡಿದರು.

ಸುಮಾ ಅವರಿಗೆ ಈ ಹಿಂದೆ 2 ಬಾರಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಹೀಗಾಗಿ ವೈದ್ಯರು, ‘ಸುಮಾ ಅವರಿಗೆ 3ನೇ ಬಾರಿಗೆ ಶಸ್ತ್ರಚಿಕಿತ್ಸೆ ಮಾಡಿದರೆ ಪ್ರಾಣಕ್ಕೆ ಅಪಾಯಾಗುವ ಸಾಧ್ಯತೆಯಿದೆ. ಜತೆಗೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಬೇಕಾದ ವೈದ್ಯಕೀಯ ಸವಲತ್ತು ಮತ್ತು ಸಿಬ್ಬಂದಿಯಿಲ್ಲ. ಆದ ಕಾರಣ ಅವರನ್ನು ಜಾಲಪ್ಪ ಆಸ್ಪತ್ರೆಗೆ ಕರೆದೊಯ್ಯಿರಿ’ ಎಂದು ಕುಟುಂಬ ಸದಸ್ಯರಿಗೆ ತಿಳಿಸಿ ಶಸ್ತ್ರಚಿಕಿತ್ಸೆ ಮಾಡಲು ನಿರಾಕರಿಸಿದರು.

ಸುಬ್ರಮಣಿ ಮತ್ತು ಕುಟುಂಬ ಸದಸ್ಯರು ಪರಿಪರಿಯಾಗಿ ಮನವಿ ಮಾಡಿದರೂ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಒಪ್ಪಲಿಲ್ಲ. ಕುಟುಂಬ ಸದಸ್ಯರೊಂದಿಗೆ ನಾಲ್ಕೈದು ತಾಸು ಆಸ್ಪತ್ರೆಯಲ್ಲೇ ಕಾದು ಕುಳಿತ ಸುಮಾ ಅವರು ನರಳಾಡಿದರು. ಬಳಿಕ ವೈದ್ಯರ ಸಲಹೆಯಂತೆ ಸುಮಾ ಅವರನ್ನು ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ಹೊರ ತೆಗೆಸಲಾಯಿತು.

‘ಎಸ್‌ಎನ್‌ಆರ್‌ ಆಸ್ಪತ್ರೆಗೆ ಬರುವ ವೇಳೆಗಾಗಲೇ ಮಗು ಪತ್ನಿಯ ಹೊಟ್ಟೆಯಲ್ಲೇ ಮೃತಪಟ್ಟಿತ್ತು. ಇದರಲ್ಲಿ ವೈದ್ಯರ ನಿರ್ಲಕ್ಷ್ಯವಿಲ್ಲ. ಆದರೆ, ಮೃತ ಮಗುವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊಟ್ಟೆಯಿಂದ ಹೊರ ತೆಗೆಯಲು ವೈದ್ಯರು ನಿರಾಕರಿಸಿದ್ದರಿಂದ ಪತ್ನಿ ತೀವ್ರ ನೋವು ಅನುಭವಿಸಬೇಕಾಯಿತು’ ಎಂದು ಸುಬ್ರಮಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT