ಗುರುವಾರ , ಡಿಸೆಂಬರ್ 3, 2020
18 °C
ಕೋಚಿಮುಲ್‌ ನಿರ್ದೇಶಕ ಹರೀಶ್‌ ಮೆಚ್ಚುಗೆ

ಬೋನಸ್‌ ನೀಡಿಕೆ ಶ್ಲಾಘನೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕಾಳಹಸ್ತಿಪುರ ಹಾಲು ಉತ್ಪಾದಕರ ಸಹಕಾರ ಸಂಘವು ಪ್ರಸಕ್ತ ವರ್ಷದಲ್ಲಿ ಹೆಚ್ಚು ಲಾಭ ಗಳಿಸಿ ಹಾಲು ಉತ್ಪಾದಕರಿಗೆ ಶೇ 3.65ರಷ್ಟು ಬೋನಸ್‌ ನೀಡುತ್ತಿರುವುದು ಶ್ಲಾಘನೀಯ’ ಎಂದು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಾಳಹಸ್ತಿಪುರದಲ್ಲಿ ಶನಿವಾರ ನಡೆದ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ‘ಸಂಘವು ಪ್ರಸಕ್ತ ಸಾಲಿನಲ್ಲಿ ಸುಮಾರು 40 ಲಕ್ಷ ಲೀಟರ್‌ ಹಾಲು ಖರೀದಿಸಿ ಶೇ 12ರಷ್ಟು ಲಾಭ ಗಳಿಸಿದೆ. ಇದರಲ್ಲಿ ಆಡಳಿತಾತ್ಮಕ ವೆಚ್ಚ ಕಳೆದು ಶೇ 7.75ರಷ್ಟು ನಿವ್ವಳ ಲಾಭ ಗಳಿಸಿದೆ’ ಎಂದು ಹೇಳಿದರು.

‘ಹಾಲು ಉತ್ಪಾದಕರು ಕೋಚಿಮುಲ್‌ನಿಂದ ದೊರೆಯುವ ಎಲ್ಲಾ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು. ಕೋವಿಡ್‌–19 ಕಾರಣಕ್ಕೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಕುಸಿದಿದೆ. ಹೀಗಾಗಿ ಹಾಲು ಖರೀದಿ ದರ ಇಳಿಕೆ ಮಾಡಲಾಗಿದೆ. ದರ ಇಳಿಕೆ ತಾತ್ಕಾಲಿಕವಾಗಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಉತ್ತಮ ದರ ಕೊಡುತ್ತೇವೆ’ ಎಂದು ಭರವಸೆ ನೀಡಿದರು.

‘ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿ ಅವರು ಹೊಳಲಿ ಗ್ರಾಮದ ಬಳಿ ನೀಡಿದ 50 ಎಕರೆ ಜಮೀನಿನಲ್ಲಿ ಮೇವು ಮತ್ತು ಮೇವಿನ ಬೀಜ ಬೆಳೆಯಲಾಗುತ್ತದೆ. ಈಗಾಗಲೇ ಹೊಳಲಿ ಕೆರೆ ಕೋಡಿ ಹರಿದಿರುವುದರಿಂದ ಮೇವು ಬೆಳೆಯಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

‘ರೈತರು ತಪ್ಪದೇ ರಾಸುಗಳಿಗೆ ಗುಂಪು ವಿಮೆ ಮಾಡಿಸಬೇಕು. ಜಾನುವಾರುಗಳಿಗೆ ಕಾಲ ಕಾಲಕ್ಕೆ ಲಸಿಕೆ ಕೊಡಿಸಬೇಕು ಹಾಗೂ ಪಶು ಆಹಾರ ನೀಡಬೇಕು. ಒಕ್ಕೂಟದಿಂದ ಉತ್ಪಾದಕರಿಗೆ ರಿಯಾಯಿತಿ ದರದಲ್ಲಿ ಹಾಲು ಕರೆಯುವ ಯಂತ್ರ, ಮೇವಿನ ಬೀಜ ನೀಡಲಾಗುತ್ತದೆ. ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ದರ ನೀಡಬೇಕು’ ಎಂದು ಕೋಚಿಮುಲ್‌ ಶಿಬಿರ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ ಸೂಚಿಸಿದರು.

ಸಂಘದ ಅಧ್ಯಕ್ಷ ವಿಶ್ವನಾಥ, ಉಪಾಧ್ಯಕ್ಷ ಮೋಹನ್, ಕಾರ್ಯದರ್ಶಿ ಕೃಷ್ಣಪ್ಪ, ವಿಸ್ತರಣಾಧಿಕಾರಿಗಳಾದ ಎಸ್.ನಾಗಪ್ಪ, ಮಾರ್ಕಂಡಪ್ಪ ಹಾಗೂ ಹಾಲು ಉತ್ಪಾದಕರು ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.