ಕೋಲಾರ: ಕೃಷಿ ಇಲಾಖೆಯಲ್ಲಿ ನಡೆದಿರುವ ಸುಮಾರು ₹ 1.25 ಕೋಟಿ ಅಕ್ರಮದ ಸಂಬಂಧ ಇಲಾಖೆಯ ಹಿಂದಿನ ಜಂಟಿ ನಿರ್ದೇಶಕ ಎಚ್.ಕೆ.ಶಿವಕುಮಾರ್ ಸೇರಿದಂತೆ 3 ಮಂದಿ ವಿರುದ್ಧ ನಗರದ ಗಲ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಬೆಂಗಳೂರಿನಲ್ಲಿ ಕೃಷಿ ಇಲಾಖೆ ವಿಚಕ್ಷಣ ದಳದಲ್ಲಿರುವ ಶಿವಕುಮಾರ್ ಈ ಹಿಂದೆ 2017ರಿಂದ 2020ರವರೆಗೆ ಜಿಲ್ಲೆಯಲ್ಲಿ ಸೇವೆಯಲ್ಲಿದ್ದರು. ಆ ಅವಧಿಯಲ್ಲಿ ಇಲಾಖೆಯ ದೈನಂದಿನ ಹಣಕಾಸು ವ್ಯವಹಾರದಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಪಟ್ಟಂತೆ ಶಿವಕುಮಾರ್, ಪ್ರಥಮ ದರ್ಜೆ ಸಹಾಯಕ ಮಂಜುನಾಥ್ ಮತ್ತು ಹೊರ ಗುತ್ತಿಗೆ ನೌಕರ ಆದರ್ಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
2020ರಲ್ಲಿ ಅಕ್ರಮ ಬೆಳಕಿಗೆ ಬಂದಾಗ ಶಿವಕುಮಾರ್ ಅವರು ಇಲಾಖೆಯ ನಿವೃತ್ತ ಸೂಪರಿಂಟೆಂಡೆಂಟ್ ಸತ್ಯನಾರಾಯಣ ಪ್ರಸಾದ್ ಮತ್ತು ಹೊರ ಗುತ್ತಿಗೆ ನೌಕರ ನಯಾಜ್ ಅಹಮ್ಮದ್ ಅವರು ತಮ್ಮ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ ಕೀ (ಡಿಎಸ್‌ಇ) ದುರ್ಬಳಕೆ ಮಾಡಿಕೊಂಡು ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಗಲ್‌ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪೊಲೀಸರು ಸತ್ಯನಾರಾಯಣ ಪ್ರಸಾದ್ ಮತ್ತು ನಯಾಜ್ ಅಹಮ್ಮದ್‌ರನ್ನು ಬಂಧಿಸಿದ್ದರು.
ಆ ನಂತರ ಇಲಾಖೆ ಉನ್ನತ ಅಧಿಕಾರಿಗಳ ತಂಡವು ಪ್ರಕರಣ ಸಂಬಂಧ ವಿಶೇಷ ಲೆಕ್ಕ ತಪಾಸಣೆ ನಡೆಸಿದಾಗ ಅಕ್ರಮದಲ್ಲಿ ಶಿವಕುಮಾರ್, ಮಂಜುನಾಥ್ ಮತ್ತು ಆದರ್ಶ್ ಭಾಗಿಯಾಗಿರುವ ಸಂಗತಿ ಬಯಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆಯಾದ ಸತ್ಯನಾರಾಯಣ ಪ್ರಸಾದ್ ಅವರು ಉನ್ನತ ಅಧಿಕಾರಿಗಳ ತಂಡದ ವಿಶೇಷ ಲೆಕ್ಕ ತಪಾಸಣಾ ವರದಿಯೊಂದಿಗೆ ಶಿವಕುಮಾರ್ ಸೇರಿದಂತೆ ಮೂವರ ವಿರುದ್ಧ ನೀಡಿದ ದೂರು ಆಧರಿಸಿ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.