ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆ: ದೂಳಿನಿಂದ ನಿತ್ಯವೂ ನಾಗರಿಕರಿಗೆ ಕಿರಿಕಿರಿ

Last Updated 14 ಡಿಸೆಂಬರ್ 2021, 5:25 IST
ಅಕ್ಷರ ಗಾತ್ರ

ಕೆಜಿಎಫ್‌: ಮಳೆಯಿಂದ ರಸ್ತೆಯಲ್ಲಿ ಉಂಟಾದ ಗುಂಡಿಗಳನ್ನು ಮುಚ್ಚಲು ಲೋಕೋಪಯೋಗಿ ಇಲಾಖೆಯು ವೆಟ್‌ಮಿಕ್ಸ್‌ಗಳನ್ನು ಹಾಕಿರುವುದರಿಂದ ನಗರದ ರಸ್ತೆಗಳು ದೂಳುಮಯವಾಗಿವೆ.

ರಸ್ತೆಗಳನ್ನು ದುರಸ್ತಿಪಡಿಸಲು ಸಾರ್ವಜನಿಕರು ಒತ್ತಡ ಹೇರುತ್ತಿರುವುದರಿಂದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ರಸ್ತೆಯಲ್ಲಿ ವೆಟ್‌ಮಿಕ್ಸ್‌ ಹಾಕುತ್ತಿದ್ದಾರೆ. ಕಲ್ಲು ಮತ್ತು ಮರಳುಮಿಶ್ರಿತ ಮಿಕ್ಸ್‌ ಗುಂಡಿಗಳಲ್ಲಿ ಸರಿಯಾಗಿ ಕುಳಿತುಕೊಳ್ಳದೆ ರಸ್ತೆಯಿಡೀ ಹರಡಿರುವುದರಿಂದ ರಸ್ತೆ ದೂಳುಮಯವಾಗಿದೆ.

ದೊಡ್ಡ ವಾಹನ ಹೋದರೆ ಹಿಂಭಾಗದಲ್ಲಿ ಬರುವ ವಾಹನ ಸವಾರರು ದೂಳಿನ ಸೇವನೆ ಮಾಡಬೇಕಾಗಿದೆ. ಕಣ್ಣುಗಳಲ್ಲಿ ದೂಳು ತುಂಬಿಕೊಂಡು ಕಣ್ಣುರಿ ಮಾಡಿಕೊಳ್ಳಬೇಕಾಗಿದೆ. ಪಕ್ಕದಲ್ಲಿಯೇ ಇರುವ ಸೈನೈಡ್ ಗುಡ್ಡದ ದೂಳು ಕೂಡ ಇದರೊಂದಿಗೆ ಮಿಶ್ರಿತವಾಗುತ್ತಿದೆ. ಇದರಿಂದ ದೂಳಿನ ಪ್ರಮಾಣ ಮಿತಿ ಮೀರಿದೆ.

ನಗರದ ಬಹುತೇಕ ಪ್ರಮುಖ ರಸ್ತೆಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ. ದೊಡ್ಡ ಗುಂಡಿಗಳು ರಸ್ತೆ ಮಧ್ಯದಲ್ಲಿಯೇ ಇವೆ. ಹಳ್ಳಗಳನ್ನು ದಾಟಲು ಅಡ್ಡಾದಿಡ್ಡಿ ಸಂಚರಿಸುವ ವಾಹನ ಸವಾರರು ಅಪಘಾತಕ್ಕೆ ಒಳಗಾಗುತ್ತಿದ್ದಾರೆ.

ಭಾನುವಾರ ಸುಂದರಪಾಳ್ಯದ ಶಾಲೆಗೆ ಹೊರಟಿದ್ದ ಶಿಕ್ಷಕಿಯೊಬ್ಬರು ಕೋಟಿಲಿಂಗೇಶ್ವರ ದೇವಾಲಯದ ಬಳಿ ರಸ್ತೆಯಲ್ಲಿರುವ ಗುಂಡಿಯನ್ನು ಗಮನಿಸದೆ ಚಾಲನೆ ಮಾಡಿದಾಗ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಇದೇ ರೀತಿಯಲ್ಲಿ ಪ್ರತಿದಿನ ಹಲವಾರು ಅಪಘಾತ ಪ್ರಕರಣಗಳು ವರದಿಯಾಗುತ್ತಿವೆ.

ಬೆಮಲ್ ಐಟಿಐನಿಂದ ಫೈಲೈಟ್ಸ್‌, ಊರಿಗಾಂ ರೈಲ್ವೆ ನಿಲ್ದಾಣದಿಂದ ಸೂರಜ್‌ಮಲ್‌ ವೃತ್ತ, ಸಲ್ಡಾನ ವೃತ್ತದಿಂದ ರಾಜೇಶ್ ಕ್ಯಾಂಪ್‌, ಸ್ವರ್ಣ ನಗರದಿಂದ ಪಾರಾಂಡಹಳ್ಳಿ ಹೊರ ವಲಯದವರೆವಿಗೂ ರಸ್ತೆಗಳು ತೀರಾ ಹದಗೆಟ್ಟಿವೆ.

ಲೋಕೋಪಯೋಗಿ ಇಲಾಖೆಯು ಈ ರಸ್ತೆಗಳ ದುರಸ್ತಿಗೆ ಈಗಾಗಲೇ ಸರ್ವೆ ನಡೆಸಿ ಅಂದಾಜು ವೆಚ್ಚದ ಪಟ್ಟಿ ತಯಾರಿಸಿದೆ. ಆದರೆ, ಅದಕ್ಕೆ ಸರ್ಕಾರದ ಅನುಮತಿ ಇನ್ನೂ ದೊರೆತಿಲ್ಲ. ಎಸ್‌ಎಸ್‌ಡಿಪಿ ಯೋಜನೆಯಡಿ ರಸ್ತೆಗಳ ಅಭಿವೃದ್ಧಿಗೆ ₹ 16 ಕೋಟಿ ಮಂಜೂರಾಗಿತ್ತು. ಈ ಪೈಕಿ ಕೇವಲ ₹ 10 ಕೋಟಿ ಬಿಡುಗಡೆಯಾಗಿದ್ದು, ಉಳಿದ ₹ 6 ಕೋಟಿಯನ್ನು ಸರ್ಕಾರ ವಾಪಸ್‌ ಪಡೆದಿದೆ.

ಸಲ್ಡಾನ ವೃತ್ತದಿಂದ ರಾಜೇಶ್‌ ಕ್ಯಾಂಪ್‌ವರೆವಿಗೂ ₹ 6 ಕೋಟಿ, ಊರಿಗಾಂ ರೈಲ್ವೆ ನಿಲ್ದಾಣದಿಂದ ರಾಬರ್ಟಸನ್‌ಪೇಟೆವರೆವಿಗೂ
₹ 2 ಕೋಟಿ ಮತ್ತು ಫೈವ್ ಲೈಟ್ಸ್‌ ಬಳಿ ರಸ್ತೆಗೆ ₹ 2 ಕೋಟಿ ಅಂದಾಜು ಪಟ್ಟಿ ತಯಾರಾಗಿದೆ. ಆದರೆ, ಇನ್ನೂ ಟೆಂಡರ್ ಪ್ರಕ್ರಿಯೆ ಶುರುವಾಗದೆ ಇರುವುದರಿಂದ ರಸ್ತೆಗಳ ದುರಸ್ತಿ ಯಾವಾಗ ನಡೆಯುತ್ತದೆ ಎಂಬುದು ಅನಿಶ್ಚಿತವಾಗಿದೆ.

‘ರಸ್ತೆಗಳು ಹಾಳಾಗಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಮಂಜೂರಾದ ಹಣವನ್ನು ವಾಪಸ್‌ ಪಡೆಯಲಾಗಿದೆ. ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕು’ ಎಂದು ಶಾಸಕಎಂ. ರೂಪಕಲಾ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT