ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟ್ಪಾ ಕಾಯ್ದೆ ಆಟಕ್ಕುಂಟು ಲೆಕ್ಕಕ್ಕಿಲ್ಲ

ಜಿಲ್ಲೆಯ ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಅಬಾಧಿತ
Last Updated 11 ಏಪ್ರಿಲ್ 2021, 7:21 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶಾಲಾ ಕಾಲೇಜುಗಳ ಸಮೀಪ ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಬಳಕೆ ಎಗ್ಗಿಲ್ಲದೆ ಸಾಗಿದ್ದು, ಸರ್ಕಾರದ ಆದೇಶ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ಬೀದಿ ಬದಿಯ ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ವಾಣಿಜ್ಯ ಮಳಿಗೆಗಳವರೆಗೆ ವ್ಯಾಪಾರಿಗಳು ಹಣ ಸಂಪಾದನೆಗಾಗಿ ಸಿಗರೇಟು, ಬೀಡಿ, ಗುಟ್ಕಾದಂತಹ ತಂಬಾಕು ಉತ್ಪನ್ನಗಳನ್ನು ರಾಜಾರೋಷವಾಗಿ ಮಾರುವುದರ ಜತೆಗೆ ಮಳಿಗೆಗಳ ಬಳಿಯೇ ಅವುಗಳ ಬಳಕೆಗೆ ಅವಕಾಶ ಕಲ್ಪಿಸಿದ್ದಾರೆ.

ಕಾಫಿ ಮತ್ತು ಟೀ ಮಾರಾಟ ಮಳಿಗೆಗಳು, ತಳ್ಳು ಗಾಡಿಗಳು, ಪೆಟ್ಟಿಗೆ ಅಂಗಡಿಗಳು, ಹೋಟೆಲ್‌, ಬಾರ್‌ ಮತ್ತು ಮದ್ಯದಂಗಡಿಯ ಅಕ್ಕಪಕ್ಕದ ಅಂಗಡಿಗಳು, ಪಾನ್‌ ಬೀಡಾ ಮಳಿಗೆಗಳು, ಚಿತ್ರಮಂದಿರ, ಆಸ್ಪತ್ರೆಗಳು, ಕಲ್ಯಾಣ ಮಂಟಪ, ಸರ್ಕಾರಿ ಕಚೇರಿಗಳ ಬಳಿ, ಮಾರುಕಟ್ಟೆಗಳು ಹಾಗೂ ಬಸ್‌ ನಿಲ್ದಾಣ ಆವರಣದಲ್ಲಿನ ಅಂಗಡಿಗಳಲ್ಲಿ ಗ್ರಾಹಕರು ತಂಬಾಕು ಉತ್ಪನ್ನಗಳನ್ನು ಖರೀದಿಸಿ ಅಲ್ಲಿಯೇ ಬಳಸುತ್ತಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯ ತಡೆಗಾಗಿ ಸರ್ಕಾರ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ರಚಿಸಿದೆ. ಮತ್ತೊಂದೆಡೆ ಪೊಲೀಸರು, ನಗರಸಭೆ ಆರೋಗ್ಯ ವಿಭಾಗದ ಅಧಿಕಾರಿಗಳು ಈ ಅಕ್ರಮಕ್ಕೆ ಕಡಿವಾಣ ಹಾಕಲು ಟೊಂಕ ಕಟ್ಟಿ ನಿಂತಿದ್ದಾರೆ. ಆದರೆ, ವ್ಯಾಪಾರಿಗಳು ಅಧಿಕಾರಿಗಳ ಕಣ್ತಪ್ಪಿಸಿ ಸಾರ್ವಜನಿಕ ಸ್ಥಳಗಳಲ್ಲೇ ತಂಬಾಕು ಉತ್ಪನ್ನಗಳ ಬಳಕೆಗೆ ದಾರಿ ಮಾಡಿಕೊಟ್ಟಿದ್ದಾರೆ.

ಕ್ಯಾನ್ಸರ್‌ಕಾರಕ: ಧೂಮಸಹಿತ ತಂಬಾಕು ಉತ್ಪನ್ನಗಳಾದ ಸಿಗರೇಟ್‌, ಬೀಡಿ, ಸಿಗಾರ್‌ನಲ್ಲಿ ಸುಮಾರು 4 ಸಾವಿರ ಬಗೆಯ ರಾಸಾಯನಿಕ ವಸ್ತುಗಳಿದ್ದು, ಇವು ಶೇ 69ರಷ್ಟು ಕ್ಯಾನ್ಸರ್‌ಕಾರಕ ಅಂಶಗಳನ್ನು ಒಳಗೊಂಡಿವೆ. ಧೂಮರಹಿತ ತಂಬಾಕು ಉತ್ಪನ್ನಗಳಲ್ಲಿ (ಜಗಿಯುವ ಮಾದರಿಯವು) 3,095 ಬಗೆಯ ರಾಸಾಯನಿಕ ವಸ್ತುಗಳಿದ್ದು, ಇವು ಶೇ 28ರಷ್ಟು ಕ್ಯಾನ್ಸರ್‌ಕಾರಕ ಅಂಶಗಳನ್ನು ಒಳಗೊಂಡಿವೆ.

ತಂಬಾಕು ಉತ್ಪನ್ನಗಳ ಬಳಕೆಯಿಂದ ಹೃದ್ರೋಗ, ಕ್ಯಾನ್ಸರ್‌, ಪಾರ್ಶ್ವವಾಯು ಬರುತ್ತದೆ. ಅಲ್ಲದೇ, ಶ್ವಾಸಕೋಶ ಹಾಗೂ ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಧೂಮಪಾನದಿಂದ ಮನುಷ್ಯನ ಆಯಸ್ಸು ಕಡಿಮೆಯಾಗುತ್ತದೆ ಎಂಬ ಸಂಗತಿ ವೈಜ್ಞಾನಿಕ ಸಂಶೋಧನೆಯಿಂದ ದೃಢಪಟ್ಟಿದೆ.

ಕಾಯ್ದೆ ಏನು ಹೇಳುತ್ತದೆ: ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆಯು (ಕೋಟ್ಪಾ) ತಂಬಾಕು ಉತ್ಪನ್ನಗಳ ಉತ್ಪಾದನೆ, ಜಾಹೀರಾತು, ಸರಬರಾಜು, ಮಾರಾಟ ಮತ್ತು ಬಳಕೆಗೆ ಸಂಬಂಧಪಟ್ಟಂತೆ ಸಾಕಷ್ಟು ನಿರ್ಬಂಧ ವಿಧಿಸಿದೆ. ಈ ಕಾಯ್ದೆಯ ಸೆಕ್ಷನ್‌ 4ರ ಪ್ರಕಾರ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಹೋಟೆಲ್‌, ಚಿತ್ರಮಂದಿರದಂತಹ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವಂತಿಲ್ಲ. ಸೆಕ್ಷನ್‌ 5ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಕಾಣುವಂತೆ ತಂಬಾಕು ಉತ್ಪನ್ನಗಳ ಬಗ್ಗೆ ಪ್ರಚಾರ ಮಾಡುವಂತಿಲ್ಲ ಮತ್ತು ಅಂಗಡಿಗಳ ಬಳಿ ಜಾಹೀರಾತು ಫಲಕಗಳನ್ನು ಹಾಕುವಂತಿಲ್ಲ.

ಕಾಯ್ದೆಯ ಸೆಕ್ಷನ್‌ 6ಎ ಪ್ರಕಾರ 18 ವರ್ಷಕ್ಕಿಂತ ಕೆಳಗಿನವರಿಗೆ ತಂಬಾಕು ಉತ್ಪನ್ನಗಳನ್ನು ಮಾರುವಂತಿಲ್ಲ. ಸೆಕ್ಷನ್‌ 6ಬಿ ಅನ್ವಯ ಶಾಲಾ ಕಾಲೇಜುಗಳ ಬಳಿ 100 ಮೀಟರ್‌ ಅಂತರದಲ್ಲಿ ಈ ಉತ್ಪನ್ನಗಳ ಮಾರಾಟ ಮತ್ತು ಬಳಕೆ ನಿರ್ಬಂಧಿಸಲಾಗಿದೆ. ಸೆಕ್ಷನ್‌ 7ರ ಪ್ರಕಾರ ತಂಬಾಕು ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆ ಸಂದೇಶ ಒಳಗೊಂಡ ಫಲಕಗಳನ್ನು ಅಂಗಡಿಗಳಲ್ಲಿ ಗ್ರಾಹಕರಿಗೆ ಕಾಣಿಸುವಂತೆ ಅಳವಡಿಸಬೇಕು.

ಈ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಬಹುದು. ಜತೆಗೆ ₹ 200ರಿಂದ ₹ 5 ಸಾವಿರದವರೆಗೆ ದಂಡ, 2 ವರ್ಷದಿಂದ ಗರಿಷ್ಠ 5 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ನ್ಯಾಯಾಧೀಶರಿಗೆ ಅವಕಾಶವಿದೆ. ಕಾಯ್ದೆಯ ಒಂದೊಂದು ಸೆಕ್ಷನ್‌ಗಳ ಉಲ್ಲಂಘನೆಗೂ ದಂಡ ಮತ್ತು ಶಿಕ್ಷೆಯ ಪ್ರಮಾಣ ಬೇರೆ ಇದೆ.

1,016 ಪ್ರಕರಣ: ಜಿಲ್ಲೆಯಲ್ಲಿ ಕೋಟ್ಪಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ತಂಬಾಕು ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆಯ ಸಂದೇಶ ಒಳಗೊಂಡ ಫಲಕಗಳನ್ನು ಬಹುಪಾಲು ಅಂಗಡಿಗಳಲ್ಲಿ ಹಾಕಿಲ್ಲ. ಬದಲಿಗೆ ತಂಬಾಕು ಉತ್ಪನ್ನಗಳ ಜಾಹೀರಾತು ಫಲಕಗಳನ್ನು ಹಾಕಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ.

ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಿಬ್ಬಂದಿ ಹಾಗೂ ಪೊಲೀಸರು ಜನವರಿಯಿಂದ ಮಾರ್ಚ್‌ ಅಂತ್ಯದವರೆಗೆ ಮೂರು ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ಕಾರ್ಯಾಚರಣೆ ನಡೆಸಿ ಕೋಟ್ಪಾ ಕಾಯ್ದೆ ಉಲ್ಲಂಘನೆ ಸಂಬಂಧ 1,016 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ₹ 93 ಸಾವಿರ ದಂಡ ಸಂಗ್ರಹಿಸಿದ್ದಾರೆ.

ಆದರೂ ತಂಬಾಕು ಉತ್ಪನ್ನಗಳ ಅಕ್ರಮ ಮಾರಾಟ ಮತ್ತು ಬಳಕೆ ಕದ್ದುಮುಚ್ಚಿ ನಡೆಯುತ್ತಲೇ ಇದೆ. ಇದರಿಂದ ಒಂದೆಡೆ ತಂಬಾಕು ಉತ್ಪನ್ನಗಳ ಬಳಕೆದಾರರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. ಮತ್ತೊಂದೆಡೆ ಈ ಉತ್ಪನ್ನಗಳ ಬಳಕೆದಾರರಲ್ಲದ ಸಾರ್ವಜನಿಕರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT