ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ಜನಜಂಗುಳಿ: ಭರ್ಜರಿ ವಹಿವಾಟು

ಗೌರಿ–ಗಣೇಶ ಹಬ್ಬ: ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ
Last Updated 21 ಆಗಸ್ಟ್ 2020, 10:36 IST
ಅಕ್ಷರ ಗಾತ್ರ

ಕೋಲಾರ: ಗೌರಿ–ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರು ಪೂಜಾ ಸಾಮಗ್ರಿ, ಗಣೇಶ ಮೂರ್ತಿ ಖರೀದಿಸಲು ಶುಕ್ರವಾರ ನಗರದ ಮಾರುಕಟ್ಟೆಗಳಿಗೆ ಮುಗಿಬಿದ್ದರು. ವಸ್ತುಗಳ ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ವಹಿವಾಟು ಜೋರಾಗಿತ್ತು.

ಎಂ.ಜಿ.ರಸ್ತೆ, ಹಳೆ ಬಸ್‌ ನಿಲ್ದಾಣ, ದೊಡ್ಡಪೇಟೆ, ಹೊಸ ಬಸ್‌ ನಿಲ್ದಾಣ, ವಾಸವಿ ದೇವಸ್ಥಾನ ರಸ್ತೆ, ಕಾಳಮ್ಮ ಗುಡಿ ರಸ್ತೆ, ಅಮ್ಮವಾರಿಪೇಟೆ ಸೇರಿದಂತೆ ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿ ಜನಜಂಗುಳಿಯೇ ಕಂಡುಬಂತು. ಟಿ.ಚನ್ನಯ್ಯ ರಂಗಮಂದಿರ ರಸ್ತೆ ಅಕ್ಕಪಕ್ಕದ ಮಳಿಗೆಗಳು ಗ್ರಾಹಕರಿಂದ ಗಿಜಿಗುಡುತ್ತಿದ್ದವು. ವರ್ತಕರ ಮೊಗದಲ್ಲಿ ಸಂತಸ ಮನೆ ಮಾಡಿತ್ತು.

ಪ್ರಮುಖ ರಸ್ತೆಗಳ ಬದಿಯಲ್ಲಿ ಹಾಗೂ ಪಾದಚಾರಿ ಮಾರ್ಗದಲ್ಲಿ ವರ್ತಕರು ಹೂವು, ಹಣ್ಣು, ಬಳೆ, ಬಾಳೆ ದಿಂಡು, ತುಳಸಿ, ಮೊರ, ತೆಂಗಿನ ಕಾಯಿ, ಮಾವಿನ ಸೊಪ್ಪು ಮಾರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಗ್ರಾಹಕರು ಬಿಸಿಲ ಝಳ ಲೆಕ್ಕಿಸದೆ ಖರೀದಿಯಲ್ಲಿ ತೊಡಗಿದ್ದರು. ಕೆಲ ವ್ಯಾಪಾರಿಗಳು ತಳ್ಳು ಗಾಡಿಗಳಲ್ಲಿ ಹಬ್ಬದ ಸಾಮಗ್ರಿ ಮಾರುತ್ತಿದ್ದ ದೃಶ್ಯ ಬಡಾವಣೆಗಳಲ್ಲಿ ಕಂಡುಬಂತು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಕ್ಕದ ರಸ್ತೆಯಲ್ಲಿ, ದೊಡ್ಡಪೇಟೆ, ಟೇಕಲ್‌ ರಸ್ತೆ, ಹೊಸ ಬಸ್‌ನಿಲ್ದಾಣದ ಬಳಿಯ ಗೌರಿ–ಗಣೇಶ ಮೂರ್ತಿ ಮಾರಾಟ ಮಳಿಗೆಗಳು ಗ್ರಾಹಕರಿಂದ ತುಂಬಿ ಹೋಗಿದ್ದವು. ವಿಶೇಷವಾಗಿ ಮಹಿಳೆಯರು ಹೊಸ ಬಟ್ಟೆ ಹಾಗೂ ಬಳೆ ಖರೀದಿಯಲ್ಲಿ ತೊಡಗಿದ್ದರು.

ಗಗನಕ್ಕೇರಿದ ಬೆಲೆ: ಹಬ್ಬದ ಹಿನ್ನೆಲೆಯಲ್ಲಿ ವಸ್ತುಗಳ ಬೆಲೆ ಗಗನಕ್ಕೇರಿದ್ದವು. ಏಲಕ್ಕಿ ಬಾಳೆ ಕೆ.ಜಿಗೆ ₹ 70, ಸೀಬೆ ಹಣ್ಣು ₹ 50, ಸಪೋಟ ₹ 80, ಪಚ್ಚ ಬಾಳೆ ₹ 30, ಕಿತ್ತಳೆ ₹ 150, ಸೇಬು 220 ಹಾಗೂ ದಾಳಿಂಬೆ ₹ 120, ಮೋಸಂಬಿ ₹ 80, ಕಪ್ಪು ದ್ರಾಕ್ಷಿ ₹ 120, ಬಿಳಿ ದ್ರಾಕ್ಷಿ ₹ 200 ಇತ್ತು. ತೆಂಗಿನಕಾಯಿ ಒಂದಕ್ಕೆ ₹ 30, ಅನಾನಸ್‌ ಜೋಡಿಗೆ ₹ 70 ಇತ್ತು. ಹಬ್ಬಕ್ಕೆ ಮುಖ್ಯವಾಗಿ ಬೇಕಾದ ಮಾವು ಸೊಪ್ಪಿನ ಬೆಲೆ ಒಂದು ಕಟ್ಟಿಗೆ ₹ 20, ಬಾಳೆ ದಿಂಡು ಜೋಡಿಗೆ ₹ 40ರಿಂದ ₹ 60 ಇತ್ತು.

ಮಲ್ಲಿಗೆ ಬಿಡಿ ಹೂವು ಕೆ.ಜಿಗೆ ₹ 1,200, ಕನಕಾಂಬರ ₹ 1,500, ಗುಲಾಬಿ ಹಾಗೂ ಸೇವಂತಿಗೆ ₹ 200, ಚೆಂಡು ಹೂವು ₹ 80, ಮಾರಿ ಗೋಲ್ಡ್‌ ಹೋವು ₹ 180, ಸೂಜಿ ಮಲ್ಲಿಗೆ ₹ 600, ಕಾಕಡ ₹ 800 ಇತ್ತು. ಹೂವು, ಹಣ್ಣಿನ ಜತೆಗೆ ಸಕ್ಕರೆ, ಬೆಲ್ಲ, ಮೈದಾ, ಕಡಲೆ ಬೇಳೆಯಂತಹ ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗಿದ್ದವು. ಮತ್ತೊಂದೆಡೆ ತರಕಾರಿ ಬೆಲೆಗಳು ಗಗನಮುಖಿಯಾಗಿದ್ದವು. ಮಾರುಕಟ್ಟೆಗೆ ಬಂದಿದ್ದ ಗ್ರಾಹಕರಿಗೆ ವಸ್ತುಗಳ ಬೆಲೆ ಏರಿಕೆ ಬಿಸಿ ತಟ್ಟಿತು.

ವಾಹನ ದಟ್ಟಣೆ: ಸಂಜೆಯಾದಂತೆ ಮಾರುಕಟ್ಟೆಗೆ ಬರುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಾ ಹೋಯಿತು.

ಇದರಿಂದ ವಾಣಿಜ್ಯ ಸ್ಥಳಗಳಲ್ಲಿ ವಾಹನ ದಟ್ಟಣೆ ಉಂಟಾಯಿತು. ಚನ್ನಯ್ಯ ರಂಗಮಂದಿರ ಮುಂಭಾಗದ ರಸ್ತೆ, ಎಂ.ಜಿ ರಸ್ತೆಯಲ್ಲಿ ವಾಹನಗಳು ಕಿಲೋ ಮೀಟರ್‌ಗಟ್ಟಲೇ ಸಾಲುಗಟ್ಟಿ ನಿಂತಿದ್ದವು.

ಮುನ್ನೆಚ್ಚರಿಕೆ ಕ್ರಮವಾಗಿ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ಭಾರಿ ವಾಹನಗಳ ಓಡಾಟ ನಿರ್ಬಂಧಿಸಲಾಗಿತ್ತು. ವಾಹನ ಸಂಚಾರ ನಿಯಂತ್ರಿಸಲು ಪೊಲೀಸರು ಹಾಗೂ ಗೃಹರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT