ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜಾರ ಸಮುದಾಯದ ಸಂಸ್ಕೃತಿ ಶ್ರೀಮಂತ: ಪರಮೇಶ್ವರ್‌ ನಾಯಕ್‌

ಅಖಿಲ ಭಾರತ ಬಂಜಾರ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಪರಮೇಶ್ವರ್‌ ನಾಯಕ್‌ ಅಭಿಪ್ರಾಯ
Last Updated 15 ಫೆಬ್ರುವರಿ 2021, 13:34 IST
ಅಕ್ಷರ ಗಾತ್ರ

ಕೋಲಾರ: ‘ಬಂಜಾರ ಜನಾಂಗವು ವಿಶಿಷ್ಟ ಭಾಷೆ ಹಾಗೂ ಸಂಸ್ಕೃತಿಯಿಂದ ಗುರುತಿಸಿಕೊಂಡಿದೆ. ಸದಾ ಒಳಿತು ಬಯಸುವ ಬಂಜಾರ ಸಮುದಾಯದ ಚಿಂತನೆ ಅನುಕರಣೀಯ’ ಎಂದು ಅಖಿಲ ಭಾರತ ಬಂಜಾರ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಪರಮೇಶ್ವರ್‌ ನಾಯಕ್‌ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತವು ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿಯಲ್ಲಿ ಮಾತನಾಡಿ, ‘ಬಂಜಾರ ಸಮುದಾಯದ ಸಂಸ್ಕೃತಿ ಶ್ರೀಮಂತವಾಗಿದೆ. ಸಂಸ್ಕೃತಿಯ ವಿಚಾರದಲ್ಲಿ ಯಾವ ಸಮುದಾಯವು ಈ ಜನಾಂಗದ ಸಂಸ್ಕೃತಿಯನ್ನು ತಲುಪಲು ಸಾಧ್ಯವಿಲ್ಲ. ಸಮುದಾಯದ ಸಂತ ಸೇವಾಲಾಲ್ ಅವರು ಸಮಾಜ ಸುಧಾರಕರಾಗಿ ಜನಾಂಗದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದರು’ ಎಂದು ಸ್ಮರಿಸಿದರು.

‘ಸೇವಾಲಾಲ್ ಸಮುದಾಯವನ್ನು ಸತ್ಯದ ಹಾದಿಯಲ್ಲಿ ಮುನ್ನಡೆಸಿದರು. ಅವರು ಸಮಾಜದ ಏಳಿಗೆಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾನ್ ಸಂತರು. ಸ್ವಂತಕ್ಕೆ ಆಸ್ತಿ ಮಾಡದೆ ಬಡವರ ಉದ್ಧಾರಕ್ಕಾಗಿ ಶ್ರಮಿಸಿ ನಿಸ್ವಾರ್ಥ ಸೇವೆ ಸಲ್ಲಿಸಿದ ದಾರ್ಶನಿಕರು. ಸಮಾಜದ ಉದ್ಧಾರಕ್ಕಾಗಿ ಜನ್ಮ ತಳೆದ ದೈವಿಪುರುಷರಾದ ಅವರ ಸತ್ಯ, ಅಹಿಂಸೆಯ ಮಾರ್ಗದಲ್ಲಿ ಸಾಗಿದರು’ ಎಂದು ಬಣ್ಣಿಸಿದರು.

‘ಬಂಜಾರ ಸಮುದಾಯದ ಪವಾಡ ಪುರುಷರಾದ ಸೇವಾಲಾಲ್‌್ ಸಮಾಜದಲ್ಲಿನ ಮೌಢ್ಯತೆ ತೊಡೆದು ಹಾಕಿದ ಸಂತರು. ಪ್ರಕೃತಿಯಲ್ಲಿನ ಪ್ರಾಣಿ ಪಕ್ಷಿಗಳೊಂದಿಗೆ ಸಂಭಾಷಣೆ ನಡೆಸುತ್ತಿದ್ದ ಅವರು ಸಕಲ ಜೀವಜಂತುಗಳಿಗೆ ಒಳ್ಳೆಯದಾಗಲಿ ಎಂಬ ಸಂದೇಶ ಸಾರಿದರು. ಪ್ರತಿ ಜೀವಿಯೂ ಸುರಕ್ಷಿತವಾಗಿರಲಿ ಎಂಬುದು ಸೇವಾಲಾಲ್‌ರ ಆಶಯವಾಗಿತ್ತು’ ಎಂದು ವಿವರಿಸಿದರು.

ಮುಖ್ಯವಾಹಿನಿಗೆ ಬರಬೇಕು: ‘ಭಾರತವು ಜಾತ್ಯಾತೀತ ರಾಷ್ಟ್ರವಾಗಿದೆ. ದೇಶದಲ್ಲಿ ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗಬೇಕು. ಜತೆಗೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು. ಬಂಜಾರ ಸಮುದಾಯದ ಜನ ವಿದ್ಯಾವಂತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಕಿವಿಮಾತು ಹೇಳಿದರು.

‘ಜಿಲ್ಲೆಯ 81 ತಾಂಡಾದಲ್ಲಿ ಬಂಜಾರ ಜನಾಂಗದವರು ನೆಲೆಸಿದ್ದಾರೆ. ಸುಕಾಲಿ, ಚವಾನ್, ಲಂಬಾಣಿ ಎಂಬ ಹೆಸರುಗಳಿಂದ ಈ ಸಮುದಾಯದವರನ್ನು ಗುರುತಿಸಲಾಗುತ್ತಿದೆ. ಗೋರ್ಬಾಯಿ ಸಂಸ್ಕೃತಿ ಮತ್ತು ಪರಂಪರೆ ಇಂದು ನಿನ್ನೆಯದಲ್ಲ. ಬಂಜಾರ ಸಮುದಾಯದವರು ವೈಶಿಷ್ಟ ಪೂರ್ಣ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಬದುಕು ಕಟ್ಟಿಕೊಂಡವರು’ ಎಂದು ಮಾಹಿತಿ ನೀಡಿದರು.

ಮಾನವತಾವಾದಿ: ‘ದೇಶದ ಸಂಸ್ಕೃತಿಯು ವಿವಿಧತೆಯಲ್ಲಿ ಏಕತೆ ಇರುವ ಸಂಸ್ಕೃತಿಯಾಗಿದೆ. ಮಹಾನ್ ಮಾನವತಾವಾದಿ ಮತ್ತು ಅಧ್ಯಾತ್ಮಿಕ ಗುರುಗಳಾಗಿದ್ದ ಸೇವಾಲಾಲ್ ಭಾರತ ದೇಶವು ಹಚ್ಚ ಹಸಿರಾಗಿರಬೇಕೆಂಬ ಆಶಯ ಹೊಂದಿದ್ದರು. ಸರ್ಕಾರವು ಸೇವಾಲಾಲ್ ಜಯಂತಿ ಆಚರಿಸುವ ಮೂಲಕ ಜನಾಂಗದವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆ’ ಎಂದು ಕೃತಜ್ಞತೆ ಸಲ್ಲಿಸಿದರು.

ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸೇವಾಲಾಲ್‌ರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ, ಅಖಿಲ ಭಾರತ ಬಂಜಾರ ಸೇವಾ ಸಂಘದ ಕಾರ್ಯದರ್ಶಿ ಮಹಾದೇವನಾಯ್ಕ್, ಖಜಾಂಚಿ ಚೌಹಾಣ್‌, ಜಂಟಿ ಕಾರ್ಯದರ್ಶಿ ಸೂರ್ಯನಾರಾಯಣ, ಬಂಜಾರ ಸಮುದಾಯದ ಮುಖಂಡ ನಾಗಣ್ಣ, ಜಿಲ್ಲಾ ಕನ್ನಡ ಸಿರಿ ಸಾಹಿತ್ಯ ಪರಿಷತ್‌ ಗೌರವ ಅಧ್ಯಕ್ಷ ಎಚ್.ರಾಮಚಂದ್ರಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT