ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರಿಗಾಂ ರಸ್ತೆ ಪೂರ್ಣಕ್ಕೆ ಗಡುವು

Last Updated 23 ಜೂನ್ 2022, 4:18 IST
ಅಕ್ಷರ ಗಾತ್ರ

ಕೆಜಿಎಫ್: ಮಳೆಯಿಂದ ತೀವ್ರವಾಗಿ ಹಾನಿಗೊಳಗಾಗಿ ಸಂಚಾರಕ್ಕೆ ತೊಂದರೆಯಾಗಿದ್ದ ಊರಿಗಾಂ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು, ಎರಡು ತಿಂಗಳೊಳಗೆ ಗುಣಮಟ್ಟದ ರಸ್ತೆ ನಿರ್ಮಾಣವಾಗಲಿದೆ ಎಂದು ಶಾಸಕಿ ಎಂ. ರೂಪಕಲಾ ಹೇಳಿದರು.

ಊರಿಗಾಂ ರಸ್ತೆಗೆ ವಿವಿಧ ಇಲಾಖೆಯ ಅಧಿಕಾರಿಗಳೊಡನೆ ಬುಧವಾರ ಭೇಟಿ ನೀಡಿದ ಅವರು, ಅಧಿಕಾರಿಗಳಿಂದ ರಸ್ತೆ ವಿಸ್ತರಣೆ ಮತ್ತು ಗುಣಮಟ್ಟದ ಖಾತರಿ ಬಗ್ಗೆ ಮಾಹಿತಿ ಪಡೆದರು.

ಕೋವಿಡ್‌ನಿಂದ ರಸ್ತೆ ಅಭಿವೃದ್ಧಿಗೆ ಕೊಟ್ಟಿದ್ದ ಪ್ರಸ್ತಾವಗಳಿಗೆ ಸರ್ಕಾರ ಹಣ ಮಂಜೂರು ಮಾಡಿರಲಿಲ್ಲ. ಸತತ ಹೋರಾಟದ ಫಲವಾಗಿ ಅಂಬೇಡ್ಕರ್ ಶಾಲೆಯಿಂದ ರಾಜೇಶ್ ಕ್ಯಾಂಪ್‌ವರೆಗೂ ಜೋಡಿ ರಸ್ತೆ ಮತ್ತು ರಸ್ತೆ ವಿಸ್ತರಣೆ ಮಾಡಲು ₹ 11 ಕೋಟಿಯನ್ನು ಸರ್ಕಾರ ಮಂಜೂರು ಮಾಡಿದೆ. ಕೂಡಲೇ, ಕಾಮಗಾರಿ ಶುರು ಮಾಡಿ ಎರಡು ತಿಂಗಳೊಳಗೆ ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಮಾಡಬೇಕೆಂದು ಸೂಚಿಸಲಾಗಿದೆ ಎಂದರು.

ಸಿಎಸ್‌ಆರ್ ನಿಧಿಯಡಿ ತನ್ನ ಸುತ್ತಮುತ್ತಲಿನ ಪ್ರದೇಶವನ್ನು ಬೆಮಲ್ ಅಭಿವೃದ್ಧಿ ಮಾಡಬೇಕಿತ್ತು. ಆದರೆ, ಎರಡು ವಾರ್ಡ್‌ಗಳಲ್ಲಿ ಗಮನಹರಿಸು ತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿಗೆ ಮಾಹಿತಿ ತಿಳಿಸಲಾಗುವುದು. ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರ ಸಮ್ಮುಖದಲ್ಲಿ ಬೆಮಲ್ ಅಧಿಕಾರಿಗಳ ಸಭೆ ಮಾಡಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ತಿಳಿಸಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿ ನಿಧಿಯಡಿ ₹ 25 ಕೋಟಿ ಅನುದಾನ ಬಿಡುಗಡೆಯಾಗಿದೆ. ಗೀತಾ ರಸ್ತೆಯ ಕೊನೆಯಿಂದ ರಾಜಪೇಟೆ ರಸ್ತೆವರೆವಿಗೂ ಅಭಿವೃದ್ಧಿ ಮಾಡಲಾಗುವುದು. ಆಂಡರಸನ್‌ಪೇಟೆಯಿಂದ ಎಸ್‌.ಪಿ ಕಚೇರಿವರೆವಿಗೂ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಮಿನಿ ವಿಧಾನ ಸೌಧದ ಕಾಮಗಾರಿ ಮತ್ತು ಸರ್ಕಾರಿ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆರೋಗ್ಯ ಸಚಿವರನ್ನು ಕರೆಯಿಸಿ ಉದ್ಘಾಟಿಸಲು ತೀರ್ಮಾನಿಸಲಾಗಿದೆ ಎಂದರು.

ಸಚಿವರು ಇಲ್ಲಿಗೆ ಬಂದರೆ ಇಲ್ಲಿನ ಜನತೆ ಸೈನೈಡ್ ದೂಳಿನಿಂದ ಅನುಭವಿಸುತ್ತಿರುವ ಕಷ್ಟಗಳ ಅರಿವು ಆಗಲಿದೆ. ಆಸ್ಪತ್ರೆಯಲ್ಲಿ ಮೂಲ ಸೌಕರ್ಯವಿಲ್ಲದೆ ಜನರು ಚಿಕಿತ್ಸೆ ಪಡೆಯಲು ಪಡುವ ಕಷ್ಟಗಳನ್ನು ಖುದ್ದಾಗಿ ತಿಳಿಯಬಹುದು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT