ಮಂಗಳವಾರ, ಮೇ 26, 2020
27 °C
ವೈರಸ್ ನಿಯಂತ್ರಣಕ್ಕೆ ಸರ್ಕಾರ ಬದ್ಧ: ಆರೋಗ್ಯ ಸಚಿವ

ರಾಜ್ಯದಲ್ಲಿ ಕೊರೊನ ಸೋಂಕಿತರ ಇಳಿಮುಖದಿಂದ ನೆಮ್ಮದಿ: ಬಿ.ಶ್ರೀರಾಮುಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೊರೊನ ವೈರಸ್ (ಕೋವಿಡ್ 19) ನಿಯಂತ್ರಿಸಲು ಅಗತ್ಯ ವೈದ್ಯಕೀಯ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಸೋಂಕಿತ ಪ್ರಕರಣ ರಾಜ್ಯದಲ್ಲಿ ಇಳಿಕೆಯಾಗಿರುವುದು ಕೊಂಚ ನೆಮ್ಮದಿ ತಂದಿದೆ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಭಾನುವಾರ ಕೊರೊನ ವೈರಸ್ ಸಂಬಂಧ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ವೈರಸ್ ನಿಯಂತ್ರಿಸಲು ಯುದ್ದದ ಮಾದರಿಯಲ್ಲಿ ಮುಂದಾಗಿದ್ದು, ಇದಕ್ಕೆ ಪೂರಕವಾಗಿ ಲಾಕ್‌ಡೌನ್ ಆದೇಶ ಮಾಡಲಾಗಿದೆ, ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ರಾಜ್ಯದಲ್ಲಿ 83 ಸೋಂಕಿತರು ಪತ್ತೆಯಾಗಿದ್ದು, ಆ ಪೈಕಿ 3 ಮಂದಿ ಮೃಪಟ್ಟಿದ್ದಾರೆ. 5 ಮಂದಿ ಗುಣಮುಖರಾಗಿದ್ದು, 3,170 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು, 2,874 ಮಂದಿಗೆ ನೆಗೆಟಿವ್ ಬಂದಿದ್ದು 113 ಮಂದಿಯ ಫಲಿತಾಂಶ ಬರಬೇಕಾಗಿದೆ, 228 ಮಂದಿಗೆ ಐಸುಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಸರ್ವಪಕ್ಷಗಳ ನಾಯಕರ ಸಭೆಯಲ್ಲಿ ಆನೇಕ ವಿಷಯಗಳನ್ನು ಚರ್ಚಿಸಿ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲಾಯಿತು. ಕೊರೊನಾ ವೈರಸ್ ನಿಯಂತ್ರಿಸಲು ಎಲ್ಲರೂ ಸಂಪೂರ್ಣವಾಗಿ ಬೆಂಬಲ ಸೂಚಿಸಿದ್ದಾರೆ. ಜಿಲ್ಲೆಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಜನಪ್ರತಿನಿಧಿಗಳು ಸಹಕಾರ ನೀಡುತ್ತಿದ್ದಾರೆ’ ಎಂದರು.

‘ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಎನ್95 ಮಾಸ್ಕ್, ವೆಂಟಿಲೇಟರ್ ವ್ಯವಸ್ಥೆ ಮಾಡಿದ್ದು, ಸಿಬ್ಬಂದಿ ಹಾಗೂ ವೈದ್ಯರರನ್ನು ನೇಮಕ ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ಜತೆಗೆ ಮೂಲ ಸೌಕರ್ಯಕ್ಕೆ ಅಗತ್ಯ ಅನುದಾನ ಮಂಜೂರು ಮಾಡಲಾಗಿದೆ’ ಎಂದು ತಿಳಿಸಿದರು.

‘ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೇರೆ ರಾಜ್ಯಗಳ ಕಾರ್ಮಿಕರನ್ನು ವಾಪಸ್್ ಕಳುಹಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ರಾಜ್ಯದಲ್ಲಿ ಎರಡು ದಿನಗಳಿಂದ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, ಲಾಕ್‌ಡೌನ್‌ಗೆ ಜನ ಸಹಕರಿಸದಿದ್ದರೆ ಪರಿಸ್ಥಿತಿಯನ್ನು ಕಠಿಣಗೊಳಿಸಲಾಗುವುದು’ ಎಂದು ಹೇಳಿದರು.

‘ಸ್ಥಳೀಯರಲ್ಲಿ ಸೋಂಕು ಪತ್ತೆಯಾಗಿಲ್ಲ, ಹೊರ ದೇಶಗಳಿಂದ ರಾಜ್ಯಕ್ಕೆ ಆಗಮಿಸಿರುವ ವ್ಯಕ್ತಿಗಳಿಂದ ಸೋಂಕು ಪತ್ತೆಯಾಗಿದೆ. ಎರಡುದಿನದಿಂದ ಸೋಂಕು ಹರಡುವುದು ಸುಧಾರಣೆಯಾಗಿದ್ದು, ಇದರಿಂದ ಕೊಂಚ ನೆಮ್ಮದಿ ತಂದಿದೆ’ ಎಂದರು.

‘ರಾಜ್ಯದಲ್ಲಿ ಇನ್ನು 2ನೇ ಹಂತದಲ್ಲಿದೆ. ಶಾಸಕ ಮತ್ತು ಸಂಸದರ ಅನುದಾನದಲ್ಲಿ ವೆಂಟಿಲೇಟ್ ಖರೀದಿ ಮಾಡಲು ₹ 1 ಕೋಟಿ ಮೀಸಲು ಇರಿಸಬೇಕು. ವೈರಸ್ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು’ ಎಂದು ಕೋರಿದರು.

ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ‘ಕೊರೊನ ವೈರಸ್ ನಿಯಂತ್ರಿಸಲು ಜಿಲ್ಲೆಯಲ್ಲಿ ಎಲ್ಲ ರೀತಿಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ, ಒಟ್ಟು 450 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ 30, ಆರ್‌ಎಲ್‌ ಜಾಲಪ್ಪ ಆಸ್ಪತ್ರೆಯಲ್ಲಿ 60 ಸೇರಿದಂತೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ, ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಪ್ರತ್ಯೇಕ ಐಸ್ಯೂಲೇಷನ್ ವಾರ್ಡ್‌ ಸ್ಥಾಪಿಸಲಾಗಿದೆ. ಇದರ ಜತೆಗೆ ಔಷದಿ ದಸ್ತಾನು ಮಾಡಲಾಗಿದೆ, ವೆಂಟಿಲೇಟರ್ ವ್ಯವಸ್ಥೆ ಸಹ ಮಾಡಲಾಗಿದ್ದು, ಜಿಲ್ಲೆಗೆ ಇನ್ನು ಹೆಚ್ಚಾಗಿ ವೆಂಟಿಲೇಟರ್‌ಗಳ ಅವಶ್ಯಕತೆಯಿದೆ. ಕೂಡಲೇ ಪೂರೈಸಬೇಕು’ ಎಂದು ಮನವಿ ಮಾಡಿದರು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ‘ಜಿಲ್ಲೆಯ ಮಾಲೂರು, ನರಸಾಪುರ ಹಾಗೂ ವೇಮಗಲ್ ಕೈಗಾರಿಕೆಗಳ ಮುಖ್ಯಸ್ಥರ ಸಭೆ ಕರೆದು ಸಿಎಸ್‌ಆರ್‌ ಯೋಜನೆಯಡಿ ಮಾಸ್ಕ್‌ ಸೇರಿದಂತೆ ಇರತೆ ಸೌಕರ್ಯ ಕಲ್ಪಿಸಲು ಗುರಿ ನೀಡಬೇಕು’ ಎಂದು ಸಲಹೆ ನೀಡಿದರು.

ಸಭೆಯನಂತರ ಆರೋಗ್ಯ ಸಚಿವ ಶ್ರೀರಾಮುಲು ನಗರದ ಎಸ್‌ಎನ್‌ಆರ್‌ ಆಸ್ಪತ್ರೆಗೆ ಭೇಟಿ ನೀಡಿ ಮುಂಜಾಗ್ರತ ಕ್ರಮಗಳನ್ನು ವೀಕ್ಷಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಸಂಸದ ಎಸ್.ಮುನಿಸ್ವಾಮಿ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ವಿ.ದರ್ಶನ್. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಕೆಜಿಎಫ್ ವರಿಷ್ಠಾಧಿಕಾರಿ ಮಹಮದ್ ಸುಚಿತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಜಿ.ನಾರಾಯಣಸ್ವಾಮಿ, ಸಾಂಕ್ರಾಮಿಕ ರೋಗ ನಿಯಂತ್ರಾಧಿಕಾರಿ ಡಾ.ಚಾರಣಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು