ಶನಿವಾರ, ಅಕ್ಟೋಬರ್ 23, 2021
22 °C
ಜನರ ಧಾರ್ಮಿಕ ಭಾವನೆಯೊಂದಿಗೆ ಚೆಲ್ಲಾಟ: ಬಜರಂಗದಳ ಕಾರ್ಯಕರ್ತರ ಆಕ್ರೋಶ

ಹಿಂದೂ ಶ್ರದ್ಧಾಕೇಂದ್ರಗಳ ಧ್ವಂಸ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಮೈಸೂರಿನಲ್ಲಿ ಪುರಾತನ ದೇವಾಲಯಗಳ ಧ್ವಂಸ ಹಾಗೂ ರಾಜ್ಯದೆಲ್ಲೆಡೆ ದೇವಸ್ಥಾನಗಳನ್ನು ತೆರವುಗೊಳಿಸುವ ಸರ್ಕಾರದ ನಡೆ ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಇಲ್ಲಿ ಶನಿವಾರ ಪ್ರತಿಭಟನೆ ಮಾಡಿದರು.

‘ಸರ್ಕಾರವು ಅಭಿವೃದ್ಧಿ ಕಾಮಗಾರಿ ಮತ್ತು ರಸ್ತೆ ಅಗಲೀಕರಣದ ನೆಪದಲ್ಲಿ ರಾಜ್ಯದೆಲ್ಲೆಡೆ ಹಿಂದೂ ದೇವಾಲಯಗಳ ಧ್ವಂಸಕ್ಕೆ ಮುಂದಾಗಿದೆ. ಜನರ ಧಾರ್ಮಿಕ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿರುವ ಸರ್ಕಾರ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

‘ಅಭಿವೃದ್ಧಿ ಸೋಗಿನಲ್ಲಿ ಹಿಂದೂಗಳ ಶ್ರದ್ಧಾಕೇಂದ್ರಗಳನ್ನೇ ಗುರಿಯಾಗಿಸಿ ನಾಶಪಡಿಸುತ್ತಿರುವ ಸರ್ಕಾರದ ಕ್ರಮ ಖಂಡನೀಯ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಆದಿಶಕ್ತಿ ಮಹದೇವಮ್ಮ ಭೈರವೇಶ್ವರ ದೇವಸ್ಥಾನ ತೆರವುಗೊಳಿಸಿರುವುದು ಸರಿಯಲ್ಲ. ಇದರಿಂದ ಹಿಂದೂ ಸಮುದಾಯಕ್ಕೆ ಹಾಗೂ ಭಕ್ತರ ಭಾವನೆಗೆ ನೋವಾಗಿದೆ’ ಎಂದು ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಡಾ.ಶಿವಣ್ಣ ಹೇಳಿದರು.

‘ಸುಪ್ರೀಂ ಕೋರ್ಟ್ ಆದೇಶ ಪಾಲಿಸುವ ಸಂದರ್ಭದಲ್ಲಿ ಸರ್ಕಾರವು ಪ್ರತಿ ಶ್ರದ್ಧಾಕೇಂದ್ರದ ಬಗ್ಗೆ ಪ್ರತ್ಯೇಕ ಪರಾಮರ್ಶೆ ನಡೆಸಬೇಕು. ಸಕ್ರಮ, ಸ್ಥಳಾಂತರ ಅನಿವಾರ್ಯ ಆದಾಗ ಮಾತ್ರ ತೆರವು ಮಾಡಬೇಕೆಂದು ನ್ಯಾಯಾಲಯ ಹೇಳಿದ್ದರೂ ಮೈಸೂರು ಜಿಲ್ಲಾಡಳಿತ ಆ ಬಗ್ಗೆ ಪರಿಶೀಲನೆ ಮಾಡದೆ ಏಕಾಏಕಿ ದೇವಾಲಯ ಕೆಡವಿರುವುದು ಖಂಡನೀಯ’ ಎಂದು ದೂರಿದರು.

‘ರಾಮ ಮಂದಿರಕ್ಕಾಗಿ 500 ವರ್ಷ ಹೋರಾಟ ನಡೆಸಿದ್ದೇವೆ. ಹಿಂದೂಪರವೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಹಿಂದೂ ದೇವಾಲಯಗಳನ್ನು ಗುರಿಯಾಗಿಸಿ ಹಾಳು ಮಾಡಲು ಹೊರಟರೆ ಕೈಕಟ್ಟಿ ಕೂರುವುದಿಲ್ಲ’ ಎಂದು ಗುಡುಗಿದರು.

ಹಾಸ್ಯಸ್ಪದ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಹಿಂದೂಗಳ ಹತ್ಯೆ ಬಗ್ಗೆ ತುಟಿ ಬಿಚ್ಚದ ಕಾಂಗ್ರೆಸ್ ನಾಯಕರು ಇದೀಗ ರಾಜಕೀಯ ಲಾಭಕ್ಕಾಗಿ ಹಿಂದೂ ದೇವಾಲಯಗಳ ರಕ್ಷಣೆಗೆ ಧ್ವನಿ ಎತ್ತುತ್ತಿರುವುದು ಬಹುಸಂಖ್ಯಾತರ ಹಕ್ಕುಗಳಿಗೆ ಚ್ಯುತಿಯಾದರೆ ಅಧಿಕಾರ ಸಿಗಲಾರದು ಎಂದು ಕಾಂಗ್ರೆಸ್‌ ಮುಖಂಡರಿಗೆ ತಡವಾಗಿ ಜ್ಞಾನೋದಯವಾಗಿದೆ’ ಎಂದು ಬಜರಂಗದಳ ಮುಖಂಡ ಬಾಲಾಜಿ ವ್ಯಂಗ್ಯವಾಡಿದರು.

‘ಕೋಲಾರ ಜಿಲ್ಲೆಯಲ್ಲಿ ರಸ್ತೆ ಅಗಲೀಕರಣ ಸೇರಿದಂತೆ ವಿವಿಧ ಕಾರಣಕ್ಕೆ 24 ದೇವಾಲಯ, ಕಟ್ಟೆಗಳನ್ನು ಧ್ವಂಸ ಮಾಡಿರುವುದು ಆಘಾತಕಾರಿಯಾಗಿದೆ. ಬೇರೆ ಧರ್ಮ ಕೇಂದ್ರಗಳು ರಸ್ತೆಯಲ್ಲಿದ್ದರೂ, ಹಿಂದೂ ಕ್ಷೇತ್ರದ ದೇವಾಲಯಗಳ ಮೇಲೆ ಮಾತ್ರ ಕಣ್ಣಿಟ್ಟಿರುವುದು ವಿಷಾದಕರ’ ಎಂದು ಬೇಸರ ವ್ಯಕ್ತಪಡಿಸಿದರು.

ಅಮಾನತು ಮಾಡಿ: ‘ಸುಪ್ರೀಂ ಕೋರ್ಟ್‌ ಆದೇಶ ಮುಂದಿಟ್ಟುಕೊಂಡು ದೇವಾಲಯಗಳನ್ನು ಧ್ವಂಸ ಮಾಡುತ್ತಿರುವುದು ಸರಿಯಲ್ಲ. ದೇವಾಲಯಗಳ ತೆರವು ನಿರ್ಧಾರದಿಂದ ಸರ್ಕಾರ ತಕ್ಷಣ ಹಿಂದೆ ಸರಿಯಬೇಕು. ಈಗಾಗಲೇ ಒಡೆದು ಹಾಕಿರುವ ದೇವಾಲಯಗಳನ್ನು ಪುನರ್ ನಿರ್ಮಿಸಬೇಕು. ಘಟನೆಗೆ ಕಾರಣರಾದ ಮೈಸೂರು ಜಿಲ್ಲಾಧಿಕಾರಿ ಹಾಗೂ ನಂಜನಗೂಡು ತಹಶೀಲ್ದಾರ್‌ರನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ ರಾಜ್ಯದೆಲ್ಲೆಡೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಬಜರಂಗದಳ ಜಿಲ್ಲಾ ಘಟಕದ ಸಂಚಾಲಕ ಬಾಬು, ಸದಸ್ಯರಾದ ಡಿ.ಆರ್.ನಾಗರಾಜ್, ಮಂಜು, ತುಳಸಿರಾಮ್, ಧನಂಜಯ, ಶಂಕರ್, ಪ್ರವೀಣ್, ವಿಶಾಖ್, ಅಶೋಕ್, ಯಶ್ವಂತ್, ಶ್ರೀಧರ್ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು