ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಮಟ್ಟದಲ್ಲಿ ಜಿಲ್ಲೆಗೆ 16ನೇ ಸ್ಥಾನ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಜಿಲ್ಲೆಯಲ್ಲಿ ಬಾಲಕಿಯರ ಮೇಲುಗೈ
Last Updated 14 ಜುಲೈ 2020, 15:18 IST
ಅಕ್ಷರ ಗಾತ್ರ

ಕೋಲಾರ: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಜಿಲ್ಲೆಯು ಶೇ 67.42 ಫಲಿತಾಂಶ ಸಾಧನೆಯೊಂದಿಗೆ ರಾಜ್ಯ ಮಟ್ಟದಲ್ಲಿ 16ನೇ ಸ್ಥಾನಕ್ಕೇರಿದೆ.

ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯು ಶೇ 65.19 ಫಲಿತಾಂಶದೊಂದಿಗೆ ರಾಜ್ಯ ಮಟ್ಟದಲ್ಲಿ 18ನೇ ಸ್ಥಾನದಲ್ಲಿತ್ತು. ಈ ಬಾರಿ ಒಟ್ಟಾರೆ ಫಲಿತಾಂಶದಲ್ಲಿ ಶೇ 2.23ರಷ್ಟು ಏರಿಕೆಯಾಗಿದ್ದು, ಜಿಲ್ಲಾವಾರು ಪಟ್ಟಿಯಲ್ಲಿ ಜಿಲ್ಲೆಯು 16ನೇ ಸ್ಥಾನಕ್ಕೆ ತಲುಪಿದೆ.

ಜಿಲ್ಲೆಯಿಂದ ಈ ಬಾರಿ ಖಾಸಗಿ, ಪುನರಾವರ್ತಿತ ಹಾಗೂ ಹೊಸ ವಿದ್ಯಾರ್ಥಿಗಳನ್ನು ಒಳಗೊಂಡಂತೆ 8,061 ಮಂದಿ ಬಾಲಕರು ಮತ್ತು 8,298 ಬಾಲಕಿಯರು ಸೇರಿದಂತೆ ಒಟ್ಟಾರೆ 16,359 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಈ ಪೈಕಿ 9,847 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದಿದ್ದ 2,463 ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 738 ಮಂದಿ ಮತ್ತು 519 ಮಂದಿ ಖಾಸಗಿ ಅಭ್ಯರ್ಥಿಗಳಲ್ಲಿ 90 ಮಂದಿ ಉತ್ತೀರ್ಣರಾಗಿದ್ದಾರೆ.

ಪ್ರತಿ ವರ್ಷದಂತೆ ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧಕರಾಗಿ ಹೊರಹೊಮ್ಮಿದ್ದಾರೆ. ಪರೀಕ್ಷೆ ಬರೆದ 8,061 ಬಾಲಕರಲ್ಲಿ 4,387 ಮಂದಿ ತೇರ್ಗಡೆಯಾಗುವ ಮೂಲಕ ಶೇ 54.42ರಷ್ಟು ಫಲಿತಾಂಶ ಬಂದಿದೆ. 8,298 ಬಾಲಕಿಯರಲ್ಲಿ 5,460 ಮಂದಿ ತೇರ್ಗಡೆಯಾಗಿ ಶೇ 65.18 ಫಲಿತಾಂಶ ಸಾಧನೆ ಮಾಡಿದ್ದಾರೆ.

ಜಿಲ್ಲೆಗೆ ಪ್ರಥಮ: ವಿಜ್ಞಾನ ವಿಭಾಗದಲ್ಲಿ ಕೋಲಾರದ ವಿದ್ಯಾಜ್ಯೋತಿ ಪದವಿ ಪೂರ್ವ ಕಾಲೇಜಿನ ರೇವಂತ್ 589 ಅಂಕ ಗಳಿಸುವುದರೊಂದಿಗೆ ಜಿಲ್ಲೆಗೆ ಮೊದಲಿಗರಾಗಿದ್ದಾರೆ. ಸಹ್ಯಾದ್ರಿ ಕಾಲೇಜಿನ ಕೆ.ನಂದನ್ 587 ಹಾಗೂ ಎಂ.ಶಶಾಂಕ್ 586 ಅಂಕ ಗಳಿಸುವ ಮೂಲಕ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಕೋಲಾರದ ಎಸ್‌ಡಿಸಿ ಕಾಲೇಜಿನ ವಿದ್ಯಾರ್ಥಿನಿ ತುಷಾರ ಎನ್.ಶೆಟ್ಟಿ 593 ಅಂಕ ಗಳಿಸಿ ಜಿಲ್ಲೆಗೆ ಮೊದಲಿಗರಾಗಿ ಹೊರ ಹೊಮ್ಮಿದ್ದಾರೆ. ಮಹಿಳಾ ಸಮಾಜ ಕಾಲೇಜಿನ ಉಜ್ರಾ ಬೇಗಂ 588 ಅಂಕ ಗಳಿಕೆಯೊಂದಿಗೆ ದ್ವಿತೀಯ ಹಾಗೂ ಸಹ್ಯಾದ್ರಿ ಕಾಲೇಜಿನ ಎನ್‌.ದೀಪ್ತಿ 586 ಅಂಕ ಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಕೋಲಾರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಎ.ವಿ.ಅಂಜಲಿ 568 ಅಂಕ ಗಳಿಸಿ ಜಿಲ್ಲೆಗೆ ಮೊದಲಿಗರಾಗಿದ್ದಾರೆ. ಮಾಲೂರು ಪದವಿ ಪೂರ್ವ ಕಾಲೇಜಿನ ಸಿ.ಮಲ್ಲಿಕಾರ್ಜುನ್‌ 549 ಅಂಕ ಗಳಿಸಿ ದ್ವಿತೀಯ ಹಾಗೂ ಮುಳಬಾಗಿಲು ತಾಲ್ಲೂಕು ಆವಣಿ ಪದವಿ ಪೂರ್ವ ಕಾಲೇಜಿನ ಶಿವಶಂಕರ್ ವರಪ್ರಸಾದ್ 545 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನದಲ್ಲಿ ಶೇ 82: ಜಿಲ್ಲೆಯಲ್ಲಿ ಹೊಸದಾಗಿ ವಿಜ್ಞಾನ ವಿಭಾಗದಿಂದ 4,390 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 3,601 ಮಂದಿ ಉತ್ತೀರ್ಣರಾಗುವ ಮೂಲಕ ಶೇ 82.63 ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 1,861 ವಿದ್ಯಾರ್ಥಿಗಳಲ್ಲಿ 681 ಮಂದಿ ತೇರ್ಗಡೆಯಾಗುವ ಮೂಲಕ ಶೇ 36.59ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 7,126 ಮಂದಿ ಹೊಸ ವಿದ್ಯಾರ್ಥಿಗಳಲ್ಲಿ 4,737 ಮಂದಿ ಉತ್ತೀರ್ಣರಾಗಿದ್ದು, ಶೇ 66.47ರಷ್ಟು ಫಲಿತಾಂಶ ಲಭಿಸಿದೆ.

ಶೇ 100 ಫಲಿತಾಂಶ: ಜಿಲ್ಲೆಯ ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿ ಚಿನ್ಮಯ ಪದವಿ ಪೂರ್ವ ಕಾಲೇಜು ಶೇ 100ರ ಫಲಿತಾಂಶ ಸಾಧನೆ ಮಾಡಿ ಮೊದಲ ಸ್ಥಾನ ಗಳಿಸಿದೆ. ಸಹ್ಯಾದ್ರಿ ಪದವಿ ಪೂರ್ವ ಕಾಲೇಜು ಶೇ 99 ಫಲಿತಾಂಶ ಸಾಧನೆಯೊಂದಿಗೆ ದ್ವಿತೀಯ ಮತ್ತು ಎಸ್‌ಡಿಸಿ ಪದವಿ ಪೂರ್ವ ಕಾಲೇಜು ಶೇ 99 ಫಲಿತಾಂಶ ಸಾಧನೆಯೊಂದಿಗೆ ತೃತೀಯ ಸ್ಥಾನ ಪಡೆದಿವೆ.

ಅನುದಾನಿತ ಕಾಲೇಜುಗಳ ಪಟ್ಟಿಯಲ್ಲಿ ಬೈರಕೂರು ನೆಹರೂ ಕೆನಡಿ ಪದವಿ ಕಾಲೇಜು ಶೇ 83 ಫಲಿತಾಂಶ ಗಳಿಸಿ ಮೊದಲ ಸ್ಥಾನ, ಕೋಲಾರದ ಆಲ್‍ಅಮೀನ್ ಕಾಲೇಜು ಶೇ 80 ಫಲಿತಾಂಶದೊಂದಿಗೆ ದ್ವಿತೀಯ ಮತ್ತು ಮುಳಬಾಗಿಲಿನ ಶಾರದಾ ಪದವಿ ಪೂರ್ವ ಕಾಲೇಜು ಶೇ 76 ಫಲಿತಾಂಶ ಗಳಿಕೆಯೊಂದಿಗೆ ತೃತೀಯ ಸ್ಥಾನ ಪಡೆದಿವೆ.

ಸರ್ಕಾರಿ ಕಾಲೇಜುಗಳ ಪಟ್ಟಿಯಲ್ಲಿ ಕೆಜಿಎಫ್ ತಾಲ್ಲೂಕಿನ ಸುಂದರಪಾಳ್ಯ ಸರ್ಕಾರಿ ಪದವಿ ಕಾಲೇಜು ಶೇ 90 ಫಲಿತಾಂಶದೊಂದಿಗೆ ಪ್ರಥಮ, ಕೋಲಾರ ತಾಲ್ಲೂಕಿನ ಮದನಹಳ್ಳಿ ಪದವಿ ಪೂರ್ವ ಕಾಲೇಜು ಶೇ 75 ಫಲಿತಾಂಶದೊಂದಿಗೆ ದ್ವಿತೀಯ ಹಾಗೂ ಮಾಲೂರು ತಾಲ್ಲೂಕಿನ ಮಾಸ್ತಿ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ.70.4 ಫಲಿತಾಂಶ ಸಾಧನೆಯೊಂದಿಗೆ ತೃತೀಯ ಸ್ಥಾನ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT