ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ| ರೇಷ್ಮೆ– ಹಾಲಿಗೆ ಜಿಲ್ಲೆ ಹೆಸರುವಾಸಿ

ಜಿಲ್ಲೆಗೆ ವಿದೇಶಿ ಅಧಿಕಾರಿಗಳ ತಂಡ ಭೇಟಿ: ಗ್ರಾಮೀಣಾಭಿವೃದ್ಧಿ ಪರಿಶೀಲನೆ
Last Updated 23 ಜನವರಿ 2020, 14:14 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಗೆ ಬುಧವಾರ ಭೇಟಿ ನೀಡಿದ ಆ್ಯಪ್ರೋ ಏಷ್ಯನ್‌ ಹಾಗೂ ಲ್ಯಾಟಿನ್ ಅಮೆರಿಕದ ಹಿರಿಯ ಅಧಿಕಾರಿಗಳ ತಂಡವು ಕೋಲಾರ ಮತ್ತು ಮುಳಬಾಗಿಲು ತಾಲ್ಲೂಕಿನ ವಿವಿಧೆಡೆ ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಪರಿಶೀಲಿಸಿತು.

ಅಧಿಕಾರಿಗಳ ತಂಡಕ್ಕೆ ಜಿಲ್ಲೆಯ ಸಂಕ್ಷಿಪ್ತ ಪರಿಚಯ ನೀಡಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್, ‘ಕೋಲಾರ ಜಿಲ್ಲೆಯು ರೇಷ್ಮೆ ಹಾಗೂ ಹಾಲು ಉತ್ಪಾದನೆಗೆ ಹೆಸರುವಾಸಿಯಾಗಿದೆ. ಅಲ್ಲದೇ, ಜಿಲ್ಲೆಯು ವಿಶ್ವಕ್ಕೆ ಚಿನ್ನ ನೀಡಿದೆ. ಜಗತ್ತಿನ ೨ನೇ ಅತಿ ಆಳದ ಚಿನ್ನದ ಗಣಿ ಜಿಲ್ಲೆಯಲ್ಲಿತ್ತು. ಪ್ರಸ್ತುತ ಗಣಿ ಮುಚ್ಚಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ಸಾಕ್ಷರತೆ ಪ್ರಮಾಣ ಶೇ 90 ಇದೆ. ಜೀವ ನದಿಗಳಿಲ್ಲದ ಜಿಲ್ಲೆಯು ರಾಜ್ಯದಲ್ಲೇ ಅತಿ ಹೆಚ್ಚು 2,500 ಕೆರೆಗಳನ್ನು ಹೊಂದಿದೆ. ಹಿಂದಿನ 12 ವರ್ಷದಲ್ಲಿ ಜಿಲ್ಲೆಯಲ್ಲಿ ಸತತ ಬರ ಪರಿಸ್ಥಿತಿಯಿದೆ. ಕೊಳವೆ ಬಾವಿಗಳೇ ನೀರಿನ ಪ್ರಮುಖ ಮೂಲವಾಗಿವೆ. ಇಷ್ಟಾದರೂ ಬೆಂಗಳೂರಿನ ಬೇಡಿಕೆಯಲ್ಲಿ ಶೇ ೪೦ರಷ್ಟು ತರಕಾರಿಗಳನ್ನು ಜಿಲ್ಲೆಯಿಂದಲೇ ಪೂರೈಸಲಾಗುತ್ತಿದೆ. ವಿದೇಶಕ್ಕೆ ಟೊಮೆಟೊ ರಫ್ತು ಮಾಡಲಾಗುತ್ತಿದೆ’ ಎಂದು ವಿವರಿಸಿದರು.

‘ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಆಭಿಯಾನದಡಿ ಜಿಲ್ಲೆಯು 2017-28ನೇ ಸಾಲಿನಲ್ಲಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಣೆಯಾಗಿ ರಾಷ್ಟ್ರ ಪುರಸ್ಕಾರಕ್ಕೆ ಭಾಜನವಾಗಿದೆ. ಶೌಚಾಲಯ ನಿರ್ಮಾಣಕ್ಕೆ ಸರ್ಕಾರವು ಪ್ರತಿ ಫಲಾನುಭವಿಗೆ ₹ 15 ಸಾವಿರ ನೆರವು ನೀಡಿದೆ. ಶೌಚಾಲಯ ನಿರ್ಮಾಣದಿಂದ ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆ ಸಾಧ್ಯವಾಗಿರುವುದು ಕಂಡುಬಂದಿದೆ’ ಎಂದು ಮಾಹಿತಿ ನೀಡಿದರು.

ಜಮೀನು ನೀಡಿಕೆ: ‘ಜಿಲ್ಲೆಯ 156 ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ತಲಾ 5 ಎಕರೆ ಜಮೀನು ನೀಡಲಾಗಿದೆ. ದೇಶದ ಪ್ರಧಾನಿ ಮಂತ್ರಿಯವರು ಆ.15ರಂದು ಕರೆ ನೀಡಿದಂತೆ ಏಕಬಳಕೆಯ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಅರಿವು ಮೂಡಿಸಲಾಗುತ್ತದೆ’ ಎಂದರು.

‘ನರೇಗಾ ಯೋಜನೆಯು ರಾಷ್ಟ್ರದಲ್ಲೇ ಅತಿ ದೊಡ್ಡ ಕಾರ್ಯಕ್ರಮವಾಗಿದೆ. ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 36 ಲಕ್ಷ ಮಾನವ ದಿನ ಸೃಜಿಸಿ ₹ 171 ಕೋಟಿ ಖರ್ಚು ಮಾಡಲಾಗಿದೆ. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ವರ್ಷಕ್ಕೆ 38 ಮೀಟರ್ ಕುಸಿಯುತ್ತಿರುವುದರಿಂದ ನೀರಿನ ಸಂರಕ್ಷಣೆಗೆ ಒತ್ತು ನೀಡಲು ಚೆಕ್‌ಡ್ಯಾಂ ನಿರ್ಮಿಸಲಾಗಿದೆ’ ಎಂದು ಹೇಳಿದರು.

‘ನರೇಗಾ ಅನುದಾನದಲ್ಲಿ ಶಾಲಾ ಶೌಚಾಲಯ, ಆಟದ ಮೈದಾನ ನಿರ್ಮಿಸಲಾಗಿದೆ. ರಾಜಕಾಲುವೆಗಳನ್ನು ಸ್ವಚ್ಛಗೊಳಿಸಲಾಗಿದೆ. ರೇಷ್ಮೆ ಇಲಾಖೆಯಲ್ಲಿ 7,668 ಕಾಮಗಾರಿ ಕೈಗೊಳ್ಳಲಾಗಿದೆ. ಹಿಪ್ಪುನೇರಳೆ ನಾಟಿ ಹಾಗೂ 2 ವರ್ಷಗಳ ನಿರ್ವಹಣೆಗೆ ಪ್ರತಿ ರೈತನಿಗೆ ₹ 3 ಲಕ್ಷ ಸಹಾಯಧನ ನೀಡಲಾಗುತ್ತಿದೆ. 1,025 ದೊಡ್ಡಿ ನಿರ್ಮಿಸಲಾಗಿದೆ. ಗ್ರಾಮೀಣ ಭಾಗದಿಂದ ಮುಖ್ಯ ರಸ್ತೆಗೆ ಸಂಪರ್ಕ ರಸ್ತೆ ನಿರ್ಮಾಣ, ಅರಣ್ಯೀಕರಣ, 36 ಕಡೆ ಗ್ರಾಮೀಣ ಸಂಪರ್ಕಕ್ಕೆ ಸೇತುವೆ ನಿರ್ಮಿಸಲಾಗಿದೆ’ ಎಂದರು.

ಆರ್ಥಿಕ ಸ್ವಾವಲಂಬನೆ: ‘ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‍ಆರ್‍ಎಲ್‍ಎಂ) ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳಿಗೆ ಹಣಕಾಸು ನೆರವು ನೀಡಲಾಗುತ್ತಿದೆ. ಸಂಘಗಳ ಸದಸ್ಯರು ಈ ಹಣ ಬಳಸಿಕೊಂಡು ಆದಾಯೋತ್ಪನ್ನ ಚಟುವಟಿಕೆ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ (ಪಿಎಂಎವೈ) ಆರ್ಥಿಕ ಗಣತಿ ಆಧಾರದಲ್ಲಿ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಹಣ ನೀಡಲಾಗುತ್ತದೆ. ಈ ಹಣ ಬಳಸಿಕೊಂಡು ಫಲಾನುಭವಿ ತನ್ನ ಸ್ವಂತ ವಂತಿಗೆ ಸೇರಿ ₹ 5 ಲಕ್ಷ ವೆಚ್ಚದವರೆಗೆ ಮನೆ ನಿರ್ಮಿಸಿಕೊಳ್ಳಲು ಅವಕಾಶವಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 5 ವರ್ಷದಲ್ಲಿ 61 ಕಿಮೀ ರಸ್ತೆ ನಿರ್ಮಿಸಲಾಗಿದೆ’ ಎಂದು ವಿವರಿಸಿದರು.

‘ಕೆ.ಸಿ.ವ್ಯಾಲಿ ಯೋಜನೆಯಡಿ ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಜಿಲ್ಲೆಯ 126 ಕೆರೆಗಳಿಗೆ ಹರಿಸಲಾಗುತ್ತಿದೆ. ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸುವುದು ಈ ಯೋಜನೆ ಉದ್ದೇಶ. ಕುಡಿಯಲು ಹಾಗೂ ಕೃಷಿ ಉದ್ದೇಶಕ್ಕೆ ಕೆ.ಸಿ ವ್ಯಾಲಿ ನೀರು ಬಳಸುತ್ತಿಲ್ಲ. ಈವರೆಗೆ 47 ಕೆರೆ ಮತ್ತು 80 ಚೆಕ್‌ಡ್ಯಾಂ ಭರ್ತಿಯಾಗಿವೆ’ ಎಂದು ಮಾಹಿತಿ ನೀಡಿದರು.

ಸಂವಾದ: ಜಿಲ್ಲಾಧಿಕಾರಿ ಜತೆ ಸಂವಾದ ನಡೆಸಿದ ಆ್ಯಪ್ರೋ ಏಷ್ಯನ್‌ ಹಾಗೂ ಲ್ಯಾಟಿನ್ ಅಮೆರಿಕದ ಹಿರಿಯ ಅಧಿಕಾರಿಗಳು ರೈತರಿಗೆ ಸರ್ಕಾರದಿಂದ ಸಿಗುವ ಯೋಜನೆಗಳು, ಗ್ರಾ.ಪಂ, ತಾ.ಪಂ ಹಾಗೂ ಜಿ.ಪಂ ಚುನಾವಣಾ ಪ್ರಕ್ರಿಯೆ, ಸರ್ಕಾರದ ಯೋಜನೆಗಳಲ್ಲಿ ಜನ ಸಮುದಾಯದ ಸಹಭಾಗಿತ್ವ, ವಸತಿ ಯೋಜನೆ ಅನುಷ್ಠಾನದ ಬಗ್ಗೆ ಮಾಹಿತಿ ಪಡೆದರು.

‘ವಿದೇಶಾಂಗ ಸಚಿವಾಲಯ, 27 ರಾಷ್ಟ್ರಗಳ ಪ್ರತಿನಿಧಿಗಳು ದೇಶದಲ್ಲಿ 3 ತಿಂಗಳು ಅಧ್ಯಯನ ನಡೆಸುವ ಉದ್ದೇಶಕ್ಕೆ ಆಗಮಿಸಿದ್ದಾರೆ. ಪ್ರತಿನಿಧಿಗಳು ಮೈಸೂರು ಜಿಲ್ಲೆಯ ಭೇಟಿ ಮುಗಿಸಿ ಕೋಲಾರ ಜಿಲ್ಲೆಗೆ ಬಂದಿದ್ದು, ಇಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಲಿದ್ದಾರೆ’ ಎಂದು ಹೈದರಾಬಾದ್‌ನ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧಿಕಾರಿ ಚನ್ನದೊರೈ ತಿಳಿಸಿದರು.

ಜಿ.ಪಂ ಉಪಾಧ್ಯಕ್ಷೆ ಯಶೋದಾ, ಕೃಷಿ ಇಲಾಖೆ ಜಂಟಿ ಕೃಷಿ ನಿದೇಶಕ ಎಚ್.ಕೆ.ಶಿವಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT