ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಕೃಷಿ ರೈತರ ಆರ್ಥಿಕ ಜೀವಾಳ

ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಿ: ರೇಷ್ಮೆ ಇಲಾಖೆ ಉಪ ನಿರ್ದೇಶಕ ಕಾಳಪ್ಪ ಕಿವಿಮಾತು
Last Updated 21 ಸೆಪ್ಟೆಂಬರ್ 2021, 13:49 IST
ಅಕ್ಷರ ಗಾತ್ರ

ಕೋಲಾರ: ‘ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಲು ವಿಜ್ಞಾನಿಗಳು ಹಾಗೂ ಪ್ರಗತಿಪರ ರೈತರ ಸಹಕಾರ ಅಗತ್ಯವಾಗಿದೆ’ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ಟಿ.ಎಂ.ಕಾಳಪ್ಪ ಮನವಿ ಮಾಡಿದರು.

ಕೃಷಿ ವಿಜ್ಞಾನ ಕೇಂದ್ರ, ರೇಷ್ಮೆ ಇಲಾಖೆ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ರೈತರ ಆದಾಯ ವೃದ್ಧಿಗೆ ದ್ವಿತಳಿ ರೇಷ್ಮೆ ಕೃಷಿ ಸಾಮರ್ಥ್ಯ ವೃದ್ಧಿ’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಪ್ರಗತಿಪರ ರೇಷ್ಮೆ ಬೆಳೆಗಾರರು ತಾಂತ್ರಿಕತೆ ಹಾಗೂ ಕಾರ್ಯಕ್ರಮದ ಉದ್ದೇಶಗಳನ್ನು ತಿಳಿದು ಮುನ್ನಡೆಯಬೇಕು. ಪ್ರಗತಿಪರ ರೈತರು ಪೂರ್ಣ ಜವಾಬ್ದಾರಿ ವಹಿಸಿಕೊಂಡು ಇತರೆ ರೈತರಿಗೂ ಮಾರ್ಗದರ್ಶಕರಾಗಬೇಕು. ಇತರೆ ರೇಷ್ಮೆ ಬೆಳೆಗಾರರು ಪ್ರಗತಿಪರ ರೈತರನ್ನು ಅನುಸರಿಸಬೇಕು’ ಎಂದು ಸಲಹೆ ನೀಡಿದರು.

‘ಚೀನಾ ರೇಷ್ಮೆ ಆಮದು ತಡೆ ಜತೆಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭದಾಯಕವಾಗಿ ರೇಷ್ಮೆ ಕೃಷಿ ನಿರ್ವಹಣೆ ಮಾಡಲು ರೈತರು ತಾಂತ್ರಿಕ ಅರಿವು ಪಡೆಯಬೇಕು. ರೇಷ್ಮೆ ಕೃಷಿಯು ಇಂದು ರೈತರ ಆರ್ಥಿಕ ಜೀವಾಳವಾಗಿದೆ. ಈ ಉದ್ಯಮದಲ್ಲಿ ಖರ್ಚು ಕಡಿಮೆ ಮಾಡಿ ಲಾಭ ಹೆಚ್ಚಿಸುವ ಹಾದಿಯಲ್ಲಿ ಇಲಾಖೆ ನೀಡುವ ತಂತ್ರಜ್ಞಾನದ ಸದುಪಯೋಗ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

‘ನೂಲು ಬಿಚ್ಚಾಣಿಕೆದಾರರು ಗುಣಮಟ್ಟದ ನೆಪ ಮಾಡಿಕೊಂಡು ಚೀನಾ ರೇಷ್ಮೆಗೆ ಬೇಡಿಕೆಯೊಡ್ಡುತ್ತಾರೆ. ರೈತರು ಗುಣಮಟ್ಟದ ರೇಷ್ಮೆಗೂಡು ಉತ್ಪಾದಿಸಿದರೆ ಚೀನಾ ರೇಷ್ಮೆ ಆಮದು ನಿಲ್ಲುತ್ತದೆ. ರೇಷ್ಮೆ ಉತ್ಪಾದನೆಯಲ್ಲಿ ದೇಶವು ಜಾಗತಿಕವಾಗಿ 2ನೇ ಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯ ರೇಷ್ಮೆಗೂಡಿಗೆ ಹೆಚ್ಚಿನ ಬೇಡಿಕೆಯಿದೆ. ವಿದೇಶಿ ಪೈಪೋಟಿಗೆ ಅನುಗುಣವಾಗಿ ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಂಡು ದ್ವಿತಳಿ ರೇಷ್ಮೆಗೂಡು ಉತ್ಪಾದಿಸಬೇಕು’ ಎಂದರು.

ತರಬೇತಿ ಶಿಬಿರ: ‘ರೈತರ ಜತೆಗೆ ನಿರಂತರ ಸಂಪರ್ಕದಲ್ಲಿರುವ ಉದ್ದೇಶಕ್ಕೆ ಕೋವಿಡ್ ಸಂದರ್ಭದಲ್ಲೂ ಆನ್‌ಲೈನ್‌ ಮೂಲಕ ತರಬೇತಿ ಶಿಬಿರ ನಡೆಸಲಾಗಿತ್ತು. ಈಗ ಪ್ರತಿ ತಿಂಗಳಿಗೊಮ್ಮೆ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಹೊಸ ತಾಂತ್ರಿಕತೆ ಬಗ್ಗೆ ತಿಳಿಸುವ ಉದ್ದೇಶವಿದೆ’ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಎಂ.ಮಂಜುನಾಥ್ ಮಾಹಿತಿ ನೀಡಿದರು.

‘ಚೀನಾ ರೇಷ್ಮೆ ಆಮದಿನಿಂದ ದೇಶದ ರೇಷ್ಮೆ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದ ರೈತರು ಗುಣಮಟ್ಟದ ರೇಷ್ಮೆ ಉತ್ಪಾದಿಸಿದರೆ ನೂಲು ಬಿಚ್ಚಾಣಿಕೆದಾರರು ಸ್ವದೇಶಿ ನೂಲು ಖರೀದಿಸುತ್ತಾರೆ. ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹುದು’ ಎಂದು ಹೇಳಿದರು.

‘ಜಿಲ್ಲೆಯ ಹಲವೆಡೆ ಸ್ವಯಂಚಾಲಿತ ರೀಲಿಂಗ್ ಯಂತ್ರಗಳಿದ್ದು, ರೇಷ್ಮೆ ಬೆಳೆಗಾರರು ಇದರ ಸದುಪಯೋಗ ಪಡೆಯಿರಿ. ಬೇರೆ ಬೆಳೆಗಳತ್ತ ಮುಖ ಮಾಡಿರುವ ರೈತರು ರೇಷ್ಮೆ ಬೆಳೆಗೆ ಮರಳಿ ಬಂದು ಲಾಭದಾಯಕ ಕೃಷಿ ಮಾಡಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿ’ ಎಂದು ಆಶಿಸಿದರು.

ಬೇಡಿಕೆ ಹೆಚ್ಚಲಿದೆ: ‘ದ್ವಿತಳಿ ರೇಷ್ಮೆ ಕೃಷಿಯಲ್ಲಿ ರೈತರು ಸಮಗ್ರ ಪೋಷಕಾಂಶಗಳ ನಿರ್ವಹಣೆ ಮೂಲಕ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು ಬೆಳಯಬಹುದು. ಜತೆಗೆ ಮಣ್ಣಿನ ಗುಣಮಟ್ಟ ಕಾಪಾಡಿಕೊಳ್ಳಬಹುದು. ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಉತ್ತಮ ಭವಿಷ್ಯವಿದೆ. ದ್ವಿತಳಿ ಮತ್ತು ಹೈಬ್ರೀಡ್‌ ರೇಷ್ಮೆ ಹುಳು ತಳಿ ಬಳಸಿಕೊಂಡು ಗುಣಮಟ್ಟದ ರೇಷ್ಮೆಗೂಡು ಉತ್ಪಾದಿಸಬೇಕು. ಭವಿಷ್ಯದಲ್ಲಿ ಭಾರತದ ರೇಷ್ಮೆಗೆ ಬೇಡಿಕೆ ಹೆಚ್ಚಲಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಕೆ.ತುಳಸಿರಾಮ್‌ ವಿಶ್ವಾಸ ವ್ಯಕ್ತಪಡಿಸಿದರು.

ಸಂಪನ್ಮೂಲ ವ್ಯಕ್ತಿ ಜೆ.ಬಿ.ನರೇಂದ್ರಕುಮಾರ್‌, ರೇಷ್ಮೆ ಕೃಷಿ ವಿಜ್ಞಾನಿಗಳಾದ ಕೆ.ಎಸ್.ವಿನೋದಾ, ಕೆ.ಆರ್.ಶಶಿಧರ್, ಮೈರಾಡಾ ಸಂಸ್ಥೆಯ ಜಿಲ್ಲಾ ಸಂಯೋಜಕ ಎಸ್.ಧನಂಜಯ್‌, ರೇಷ್ಮೆ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ಶಂಕರೇಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT