ಗುರುವಾರ , ಏಪ್ರಿಲ್ 15, 2021
29 °C

ಗಡಿ ಜಿಲ್ಲೆ ಕೋಲಾರದಲ್ಲಿ ತ್ರಿಭಾಷಾ ಸಂಗಮ: ಶಾಸಕ ಶ್ರೀನಿವಾಸಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕನ್ನಡ ರಾಜ್ಯೋತ್ಸವವನ್ನು ಜಾತಿ, ಧರ್ಮದ ಭೇದವಿಲ್ಲದೆ ಆಚರಿಸಬೇಕು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಿವಿಮಾತು ಹೇಳಿದರು.

ಕನ್ನಡ ಸೇನೆ ವತಿಯಿಂದ ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮಾತೃ ಭಾಷೆಯಲ್ಲಿ ಮಾತ್ರ ಭಾವನೆಗಳು ನೈಜವಾಗಿ ವ್ಯಕ್ತವಾಗುತ್ತವೆ. ಇತರೆ ಭಾಷೆಗಳಲ್ಲಿ ಮಾತನಾಡುವುದು ಕೃತಕವಾಗಿರುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಗಡಿ ಜಿಲ್ಲೆ ಕೋಲಾರದಲ್ಲಿ ಕನ್ನಡ, ತೆಲುಗು, ತಮಿಳು ಭಾಷೆ ಮಾತನಾಡುವವರಿದ್ದಾರೆ. ಜಿಲ್ಲೆಯು ತ್ರಿಭಾಷಾ ಸಂಗಮವಾಗಿದೆ. ಆದರೆ, ಭಾಷೆ ವಿಚಾರದಲ್ಲಿ ಭೇದ ಭಾವವಿಲ್ಲ. ಎಲ್ಲಾ ಭಾಷಿಕರು ಅನ್ಯೋನ್ಯತೆಯಿಂದ ಬಾಳುತ್ತಿದ್ದಾರೆ. ಜನರು ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ನಾಡು, ನುಡಿ ಉಳಿಸಲು ಸದಾ ಸಿದ್ಧರಿರಬೇಕು’ ಎಂದು ಸಲಹೆ ನೀಡಿದರು.

‘ಕರ್ನಾಟಕವು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿ ಜಾಗತಿಕವಾಗಿ ಗುರುತಿಸಿಕೊಂಡಿದೆ. ಒಂದು ರಾಜ್ಯ ಹಲವು ಜಗತ್ತು ಎಂಬ ಹೆಗ್ಗಳಿಕೆ ಹೊಂದಿರುವ ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟ. ಕನ್ನಡಿಗರು ಸಹಬಾಳ್ವೆಯಿಂದ ಬದುಕು ಕಟ್ಟಿಕೊಳ್ಳಬೇಕು’ ಎಂದರು.

ಗ್ರಾಮದಲ್ಲಿ ಕನ್ನಡಾಂಬೆಯ ಭಾವಚಿತ್ರಗಳ ಮೆರವಣಿಗೆ ನಡೆಸಲಾಯಿತು. ಕಲಾ ತಂಡಗಳ ಕಾರ್ಯಕ್ರಮ ಕಣ್ಮನ ಸೆಳೆಯಿತು. ಡಿಸಿಸಿ ಬ್ಯಾಂಕ್‌ ನಿರ್ದೇಶಕ ವಿ.ಸೋಮಣ್ಣ, ಕನ್ನಡ ಸೇನೆ ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ಎನ್‌.ಸಿ.ಶಿವಚಂದ್ರಯ್ಯ, ರಾಜ್ಯ ಘಟಕದ ಉಪಾಧ್ಯಕ್ಷ ವಿಷ್ಣು, ಸತ್ಯಾಂಬಿಕಾ ಮತ್ತು ವೇದಾಂಬಿಕ ದೇವಾಲಯದ ಅಧ್ಯಕ್ಷ ಎನ್.ಸಿ.ಚಂದ್ರಮೋಹನ್, ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ, ನಮ್ಮ ನಾಡು ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಪಿ.ನಾಗೇಶ್ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.