ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಶಾಲೆಗಳ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ: ಶಿಕ್ಷಣ ತಜ್ಞ ಡಾ.ಕೋಡಿರಂಗಪ್ಪ

Last Updated 17 ಜನವರಿ 2020, 14:19 IST
ಅಕ್ಷರ ಗಾತ್ರ

ಕೋಲಾರ: ‘ಅಳುವ ಸರ್ಕಾರಗಳಿಗೆ ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿಯಿಲ್ಲದ ಕಾರಣ ಗಡಿ ಭಾಗದಲ್ಲಿ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿವೆ’ ಎಂದು ಶಿಕ್ಷಣ ತಜ್ಞ ಡಾ.ಕೋಡಿರಂಗಪ್ಪ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ನಡೆದ ಗಡಿ ಮೀರಿದ ಬದುಕು ಗೋಷ್ಠಿಯಲ್ಲಿ ಗಡಿನಾಡ ಶಿಕ್ಷಣ ಮತ್ತು ಸಂಸ್ಕೃತಿ ವಿಷಯ ಮಂಡಿಸಿ ಮಾತನಾಡಿ, ‘ಗಡಿ ಮಕ್ಕಳಿಗೆ ಶಿಕ್ಷಣ ಕಲ್ಪಿಸಲು ವಸತಿ ಶಾಲೆಗಳನ್ನು ತೆರೆಯಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

‘ಗಡಿ ಭಾಗದ ಶಾಲೆಗಳ ವಿಲೀನ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ವಿಲೀನದ ಬದಲು ಸೂಕ್ತ ಭಾಗದಲ್ಲಿ ವಸತಿ ಶಾಲೆಗಳನ್ನು ತೆರೆದು ಆ ಭಾಗದ ಪಂಚಾಯಿತಿಗೆ ಜವಾಬ್ದಾರಿ ನೀಡಿದರೆ ಶಿಕ್ಷಣ ಕಲ್ಪಿಸಬಹುದು. ಗಡಿಶಾಲೆಗಳಲ್ಲಿ ಶಿಕ್ಷಣ ನೀತಿಯಡಿ ದ್ವಿಭಾಷೆ ಪದ್ದತಿ ಅಳವಡಿಕೆಗೆ ಅವಕಾಶವಿದೆ. ಬಹುಭಾಷೆಗಳ ಸಂಸ್ಕೃತಿ ಇದ್ದಲ್ಲಿ ಆ ಮಕ್ಕಳ ಶೈಕ್ಷಣಿಕ ಮಟ್ಟ ಹಾಗೂ ಭಾವನಾತ್ಮಕ, ವ್ಯಕ್ತಿತ್ವದ ವಿಕಾಸಕ್ಕೆ ನೆರವಾಗುತ್ತದೆ’ ಎಂದು ಹೇಳಿದರು.

‘ಗಡಿ ಶಾಲೆಯಲ್ಲಿ ಓದುವವರು ಶ್ರೀಸಾಮಾನ್ಯರ ಮಕ್ಕಳು, ಉಳ್ಳವರು ಮಕ್ಕಳನ್ನು ನಗರ ಪ್ರದೇಶದಲ್ಲಿನ ಖಾಸಗಿ ಶಾಲೆಗೆ ಸೇರಿಸುತ್ತಾರೆ. ಹಾಗಾಗಿ ಆಳುವ ಸರ್ಕಾರಗಳು ಕೂಡ ಗಡಿ ಭಾಗದ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುತ್ತಿಲ್ಲ’ ಎಂದು ಆರೋಪಿಸಿದರು.

‘ಸಾಮಾಜಿಕ ನ್ಯಾಯಕ್ಕೆ ಧಕ್ಕೆ ಅಗದಂತೆ ಎಲ್ಲ ಮಕ್ಕಳೂ ಸಮಾಜದ ಮುಖ್ಯವಾಹಿನಿಗೆ ಬರುವಂತಹ ಶಿಕ್ಷಣ ಸಿಗಬೇಕೆಂಬುದು ಶಾಸನವಾಗಿದೆ. ಆದರೆ ಗಡಿ ಭಾಗದ ಶಾಲೆಗಳು ಸೌಕರ್ಯ, ಕನ್ನಡ ಭಾಷಾ ಶಿಕ್ಷಕರ ಕೊರತೆ, ಅಧಿಕಾರಿಗಳ ಮೇಲ್ವಿಚಾರಣೆ ಇಲ್ಲದೆ ಸೊರಗುತ್ತಿದೆ. ಇದರಿಂದಾಗಿಯೇ ೮,೦೦೦ ಶಾಲೆಗಳು ಮುಚ್ಚಿದ್ದರೆ, ಇದರ ಲಾಭ ಪಡೆದು 5 ರಿಂದ 6 ಸಾವಿರ ಖಾಸಗಿ ಶಾಲೆಗಳು ಈ ಭಾಗದಲ್ಲಿ ಸ್ಥಾಪನೆಯಾಗಿದೆ’ ಎಂದು ದೂರಿದರು.

ಜನಪದ ಸೃಜನ ಶೀಲತೆಯ ಅನನ್ಯತೆ ಕುರಿತು ವಿಷಯ ಮಂಡಿಸಿದ ಸಾಹಿತಿ ಡಾ.ಕುಪ್ಪನಹಳ್ಳಿ ಬೈರಪ್ಪ ಮಾತನಾಡಿ, ‘ಜನಪದ ಎಲ್ಲ ಶಿಷ್ಟ ಸಂಪ್ರದಾಯದ ಆವರಣವನ್ನು ದಾಟಿ ನೆಲ ಮುಖಿಯಾಗಿ, ಸಾಮೂಹಿಕ ಸೃಷ್ಠಿಯಾಗಿ ಅರಿವನ್ನು ಅಂತರಂಗದಲ್ಲಿ ಬಿತ್ತಿದೆ’ ಎಂದು ಹೇಳಿದರು.

‘ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆಯ ಬೀಜವನ್ನು ನೆಲದ ಜನರ ಮನದಲ್ಲಿ ಜನಪದರು ಬಿತ್ತಿದ್ದಾರೆ. ಜಗತ್ತಿಗೆ ಜೀವಕಾರುಷ್ಯ ಬೋಧಿಸಿದ ಬುದ್ದ, ಪಂಪ, ಬಸವಣ್ಣನವರ ಮನಸ್ಸು ಜನಪದವಾಗಿತ್ತು’ ಎಂದು ವಿವರಿಸಿದರು.

ಬೆಂಗಳೂರು ಕೃಷಿ ವಿ.ವಿಯ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಬಾಲಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT