ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಕೃತಿಕ ಅಸಮತೋಲನ: ವಿಜ್ಞಾನ ಚಿಂತಕ ಸುಬ್ಬರಾಮಯ್ಯ ಕಳವಳ

Last Updated 16 ಸೆಪ್ಟೆಂಬರ್ 2021, 13:40 IST
ಅಕ್ಷರ ಗಾತ್ರ

ಕೋಲಾರ: ‘ಆಧುನಿಕತೆ ಬೆಳೆದಂತೆ ಬೃಹತ್ ಕಟ್ಟಡಗಳು ನಿರ್ಮಾಣಗೊಳುತ್ತಿವೆ. ಅರಿವಿನ ಕೊರತೆಯಿಂದ ಮನುಷ್ಯ ಪರಿಸರದ ಮೇಲೆ ದಾಳಿ ನಡೆಸುತ್ತಿದ್ದು, ಇದರಿಂದ ಪ್ರಾಕೃತಿಕ ಅಸಮತೋಲನವಾಗುತ್ತಿದೆ’ ಎಂದು ವಿಜ್ಞಾನ ಚಿಂತಕ ಟಿ.ಸುಬ್ಬರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಜಗದೀಶ್‌ಚಂದ್ರ ಬೋಸ್ ಇಕೋ ಕ್ಲಬ್ ಸಹಯೋಗದಲ್ಲಿ ತಾಲ್ಲೂಕಿನ ರಾಮಸಂದ್ರ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಓಝೋನ್‌ ದಿನಾಚರಣೆಯಲ್ಲಿ ಮಾತನಾಡಿದರು.

‘ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ದುರಾಸೆಯ ಫಲವಾಗಿ ಪರಿಸರ ನಾಶವಾಗಿದೆ. ಮನುಷ್ಯನಿಗೆ ಅಗತ್ಯವಾಗಿ ಬೇಕಿರುವ ಮೂಲಸೌಕರ್ಯವನ್ನು ನಿಸರ್ಗ ಕಲ್ಪಿಸಿದೆ. ಒಂದು ಮರ ದಿನಕ್ಕೆ ಒಂದು ಕೆ.ಜಿ ಆಮ್ಲಜನಕ ಉತ್ಪಾದನೆ ಮಾಡುತ್ತದೆ. ಮರಗಳ ನಾಶದಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ಅರಿತು ಅರಣ್ಯ ಸಂಪತ್ತು ರಕ್ಷಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಮನುಷ್ಯನಿಗೆ ಪ್ರಕೃತಿ ಬಹಳ ಮುಖ್ಯ. ಆದರೆ, ಪ್ರಕೃತಿಗೆ ಮಾನವರು ಮುಖ್ಯವಲ್ಲ. ಇದನ್ನು ಅರಿತು ಓಝೋನ್ ಪದರ ರಕ್ಷಿಸಬೇಕು. ಇದು ಎಲ್ಲರ ಜವಾಬ್ದಾರಿ. ಓಝೋನ್ ಪದರಕ್ಕೆ ಹಾನಿಯಾದರೆ ಸಕಲ ಜೀವಿಗಳಿಗೆ ತೊಂದರೆಯಾಗುತ್ತದೆ. ಪರಿಸರ ರಕ್ಷಿಸದಿದ್ದರೆ ಮುಂದಿನ ಪೀಳಿಗೆ ಸರ್ವನಾಶವಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ವನ್ಯಜೀವಿಗಳು ಬಲಿ: ‘ಕಾಡುಗಳಿಗೆ ಬೆಂಕಿ ಹಚ್ಚುವುದು, ಮೋಜು ಮಸ್ತಿ ನೆಪದಲ್ಲಿ ಕಾಡು ನಾಶ ಮಾಡಿ ರೆಸಾರ್ಟ್ ನಿರ್ಮಾಣ ಮಾಡುತ್ತಿರುವುದರಿಂದ ವನ್ಯಜೀವಿಗಳು ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬಂದು ಬಲಿಯಾಗುತ್ತಿವೆ’ ಎಂದು ಹರಿಕಥಾ ವಿದ್ವಾನ್‌ ಜ್ಞಾನಮೂರ್ತಿ ಅಭಿಪ್ರಾಯಪಟ್ಟರು.

‘ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಪ್ಲಾಸ್ಟಿಕ್‌ ಬಳಕೆಯನ್ನು ಸರ್ಕಾರ ನಿಷೇಧಿಸಿದೆ. ಪ್ಪಾಸ್ಟಿಕ್‌ ವಸ್ತುಗಳ ದುಷ್ಪರಿಣಾಮದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ನಿರುಪಯುಕ್ತ ಪ್ಲಾಸ್ಟಿಕ್ ಬಾಟಲಿ ಅಥವಾ ಡಬ್ಬಗಳನ್ನು ರಸ್ತೆಗೆ ಬಿಸಾಡಬಾರದು. ಖರೀದಿಗಾಗಿ ಮಾರುಕಟ್ಟೆಗೆ ಹೋಗುವಾಗ ಜತೆಯಲ್ಲಿ ಬಟ್ಟೆ ಅಥವಾ ಸೆಣಬಿನ ಕೈ ಚೀಲ ಕೊಂಡೊಯ್ಯಬೇಕು. ಸಾಧ್ಯವಾದಷ್ಟು ಪ್ಲಾಸ್ಟಿಕ್‌ ಕವರ್‌ ಬಳಕೆ ಕಡಿಮೆ ಮಾಡಬೇಕು’ ಎಂದರು.

ಜೀವ ಸಂಕುಲಕ್ಕೆ ಹಾನಿ: ‘ಓಝೋನ್ ಪದರಕ್ಕೆ ಹಾನಿಯಾದರೆ ನೇರಳಾತೀತ ಕಿರಣಗಳು ಭೂಮಿಗೆ ನೇರವಾಗಿ ಪ್ರವೇಶಿಸಿ ಜೀವ ಸಂಕುಲಕ್ಕೆ ಹಾನಿಯುಂಟು ಮಾಡುತ್ತವೆ. ಇದನ್ನು ತಡೆಯದಿದ್ದರೆ ಭೂಮಿಯ ನಾಶಕ್ಕೆ ನಾಂದಿಯಾಗುತ್ತದೆ’ ಎಂದು ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ ಹೇಳಿದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಗೌರವಾಧ್ಯಕ್ಷ ಜಿ.ಶ್ರೀನಿವಾಸ್‌, ಜಿಲ್ಲಾ ಮುಖ್ಯೋಪಾಧ್ಯಯರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಶ್ರೀನಿವಾಸ್, ಜೋಡಿಕೃಷ್ಣಾಪುರ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಎನ್.ಎಂ.ಮುನಿರಾಜು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT