ಶುಕ್ರವಾರ, ಡಿಸೆಂಬರ್ 4, 2020
24 °C
ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಗೌರವ ಕಾರ್ಯದರ್ಶಿ ಚನ್ನೇಗೌಡ ಕಿಡಿ

ಸಂವಿಧಾನಕ್ಕೆ ಮಹಾರಾಷ್ಟ್ರ ಸರ್ಕಾರದ ಅಪಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮಹಾರಾಷ್ಟ್ರ ಸರ್ಕಾರವು ಗಡಿ ವಿಚಾರಕ್ಕೆ ಸಂಬಂಧಪಟ್ಟಂತೆ ಮಹಾಜನ್ ಆಯೋಗದ ವರದಿ ಒಪ್ಪದೆ ಸಂವಿಧಾನಕ್ಕೆ ಅಪಮಾನ ಮಾಡಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ ಕಿಡಿಕಾರಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ ಮಹಾಜನ್‌ ಆಯೋಗದ ವರದಿಯೇ ಅಂತಿಮ. ಆದರೆ, ಮಹಾರಾಷ್ಟ್ರ ಸರ್ಕಾರವು ಈ ವರದಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಧಾವೆ ಹೂಡಿದೆ. ಮಹಾರಾಷ್ಟ್ರವು ಗಡಿ ವಿಚಾರವಾಗಿ ವಿನಾಕಾರಣ ವಿವಾದ ಸೃಷ್ಟಿಸುತ್ತಿದೆ. ಕಪ್ಪುಪಟ್ಟಿ ಧರಿಸಿ ಗಲಾಟೆ ಮಾಡುತ್ತಿರುವ ಅಲ್ಲಿನ ಸಚಿವರನ್ನು ವಜಾ ಮಾಡಬೇಕು’ ಎಂದು ಆಗ್ರಹಿಸಿದರು.

‘ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ಕರ್ನಾಟಕ ನಮಗೆ ಸಿಕ್ಕಿಲ್ಲ. ಸುಮಾರು 2 ಕೋಟಿ ಕನ್ನಡಿಗರನ್ನು ರಾಜ್ಯದಿಂದ ಹೊರಗಿಟ್ಟಿದ್ದೇವೆ. ಹರಿದು ಹಂಚಿ ಹೋಗಿರುವ ಪ್ರದೇಶದ ಕಲೆ, ಸಾಹಿತ್ಯ ಸಂಸ್ಕೃತಿ, ಪರಂಪರೆ ಉಳಿಸಲು ಸಂಘಟಿತ ಹೋರಾಟ ನಡೆಸಬೇಕು’ ಎಂದು ಅಭಿಪ್ರಾಯಪಟ್ಟರು.

‘ಕನ್ನಡದ ಶಾಸನಗಳು ಒಂದು ಸಾವಿರ ವರ್ಷಗಳಷ್ಟು ಹಿಂದಿನವು. ಅಂತಹ ಮಹತ್ವಪೂರ್ಣ ಶಾಸನಗಳನ್ನು ಉಳಿಸಬೇಕು. ಗಡಿ ಭಾಗದಲ್ಲಿನ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಲು ಸರ್ಕಾರ ಬದ್ಧತೆ ತೋಡಬೇಕು’ ಎಂದು ಮನವಿ ಮಾಡಿದರು.

‘ಕೆಎಸ್‌ಆರ್‌ಟಿಸಿ ನೌಕರರು ಕನ್ನಡವನ್ನು ಆಡಳಿತ ಭಾಷೆಯಾಗಿ ಸ್ವೀಕರಿಸಿ ಕನ್ನಡದಲ್ಲೇ ದೈನಂದಿನ ವ್ಯವಹಾರ ನಡೆಸುತ್ತಿದ್ದಾರೆ. ರಾಜ್ಯದ ಪ್ರತಿ ವ್ಯಕ್ತಿಯ ದಿನನಿತ್ಯದ ಚಟುವಟಿಕೆಗಳಲ್ಲಿ ಕನ್ನಡ ಭಾಷೆ ಬಳಕೆಯಾಗಬೇಕು. ದೇಶದ ಇತರೆ ಭಾಷೆಗಳಂತೆ ಕನ್ನಡ ಭಾಷೆಯು ಭವ್ಯ ಇತಿಹಾಸ ಮತ್ತು ಶ್ರೀಮಂತ ಸಾಹಿತ್ಯ ಹೊಂದಿದೆ. ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಚಾರ’ ಎಂದು ಹೇಳಿದರು.

ಭಾಷಾ ಸಾಮರಸ್ಯ: ‘ಜಿಲ್ಲೆಯಲ್ಲಿ ಭಾಷಾ ಸಾಮರಸ್ಯವಿದೆ. ಗಡಿ ಜಿಲ್ಲೆ ಕೋಲಾರದಲ್ಲಿ ಕನ್ನಡ, ತೆಲುಗು, ತಮಿಳು ಭಾಷೆ ಮಾತನಾಡುವವರಿದ್ದಾರೆ. ಜಿಲ್ಲೆಯು ತ್ರಿಭಾಷಾ ಸಂಗಮವಾಗಿದೆ. ಆದರೆ, ಭಾಷೆ ವಿಚಾರದಲ್ಲಿ ಬೇಧ ಭಾವವಿಲ್ಲ. ಎಲ್ಲಾ ಭಾಷಿಕರು ಅನ್ಯೋನ್ಯತೆಯಿಂದ ಬಾಳುತ್ತಿರುವುದು ಶ್ಲಾಘನೀಯ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್‌.ಚಂದ್ರಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ಭಾಷಾವಾರು ಪ್ರಾಂತ್ಯ ರಚನೆ ವೇಳೆ ಕೋಲಾರವನ್ನು ಆಂಧ್ರಪ್ರದೇಶ, ತಮಿಳುನಾಡಿಗೆ ಸೇರಿಸುವ ಪ್ರಸ್ತಾವ ಬಂದಾಗ ಇಲ್ಲಿನ ಜನ ಕರ್ನಾಟಕದಲ್ಲೇ ಉಳಿಯುವ ಇಂಗಿತ ವ್ಯಕ್ತಪಡಿಸಿದ್ದರು. ಜಿಲ್ಲೆಯ ಜನ ಕನ್ನಡವನ್ನು ಅಭಿಮಾನದಿಂದ ಉಳಿಸಿ ಬೆಳೆಸುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ವಿಶಿಷ್ಟ ಕಾರ್ಯಕ್ರಮ: ‘ಪರಿಷತ್ತು ಕನ್ನಡ ಭಾಷೆಯ ಉಳಿವಿಗಾಗಿ ಜಿಲ್ಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ ನಡೆಸುತ್ತಾ ಬಂದಿದೆ. 250 ಉಪನ್ಯಾಸ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಕನ್ನಡ ಭಾಷೆ ಜಾಗೃತಿ ಸಮ್ಮೇಳನಗಳನ್ನು ನಡೆಸಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ವಿವರಿಸಿದರು.

ಸಾಹಿತಿ ಜರಗನಹಳ್ಳಿ ಶಿವಶಂಕರ್, ಕವಿ ಶ್ರೀನಿವಾಸಪ್ರಸಾದ್, ಸಮಾಜ ಸೇವಕ ಅಣ್ಣಯ್ಯ, ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿ ಜಿಲ್ಲಾ ಅಧ್ಯಕ್ಷ ಸಿ.ಗೋಪಾಲಗೌಡ, ಕನ್ನಡ ಸಾಹಿತ್ಯ ಪರಿಷತ್‌ ನಗರ ಘಟಕದ ಅಧ್ಯಕ್ಷ ಶಿವಕುಮಾರ್ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.