ಗುರುವಾರ , ಜೂಲೈ 9, 2020
29 °C
ಜಿಲ್ಲೆಯಲ್ಲೇ ಶಂಕಿತ ಕೊರೊನಾ ಸೋಂಕಿತರ ಪರೀಕ್ಷೆ

ಕೋಲಾರ| ಕೊರೊನಾ ಸೋಂಕು ಪತ್ತೆ ಪ್ರಯೋಗಾಲಯ ಶೀಘ್ರ ಸೇವೆಗೆ ಮುಕ್ತ: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲಾ ಕೇಂದ್ರದ ಎಸ್‍ಎನ್‍ಆರ್ ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿರುವ ಕೊರೊನಾ ಸೋಂಕು ಪತ್ತೆ ಪ್ರಯೋಗಾಲಯ ಶೀಘ್ರವೇ ಸೇವೆಗೆ ಮುಕ್ತವಾಗಲಿದ್ದು, ಇನ್ನು ಮುಂದೆ ಜಿಲ್ಲೆಯಲ್ಲೇ ಶಂಕಿತ ಕೊರೊನಾ ಸೋಂಕಿತರ ವೈದ್ಯಕೀಯ ಪರೀಕ್ಷೆ ನಡೆಯಲಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರು ಗತಿಯಲ್ಲಿ ಸಾಗಿದ್ದು, ಸದ್ಯ ಶಂಕಿತ ಸೋಂಕಿತರ ತಪಾಸಣೆಗೆ ಬೆಂಗಳೂರಿನ ಪ್ರಯೋಗಾಲಯಗಳನ್ನು ಅವಲಂಬಿಸಲಾಗಿದೆ. ಶಂಕಿತ ಸೋಂಕಿತರ ಕಫಾ ಮತ್ತು ರಕ್ತ ಮಾದರಿಯನ್ನು ಪರೀಕ್ಷೆಗಾಗಿ ಪ್ರತಿನಿತ್ಯ ಬೆಂಗಳೂರಿನ ಪ್ರಯೋಗಾಲಯಗಳಿಗೆ ಕೊಂಡೊಯ್ಯುವುದು ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ.

ಮತ್ತೊಂದೆಡೆ ಪ್ರಯೋಗಾಲಯಗಳ ವರದಿ ಬರುವುದು ಸಾಕಷ್ಟು ವಿಳಂಬವಾಗುತ್ತಿದೆ. ಶಂಕಿತ ಸೋಂಕಿತರ ರಕ್ತ ಮತ್ತು ಕಫಾ ಮಾದರಿ ಕಳುಹಿಸಿದ ನಂತರ ಮೂರ್ನಾಲ್ಕು ದಿನ ಬಿಟ್ಟು ವರದಿ ಬರುತ್ತಿದೆ. ಇದರಿಂದ ಸೋಂಕಿತರನ್ನು ಶೀಘ್ರವೇ ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಮತ್ತಷ್ಟು ಮಂದಿಗೆ ಸೋಂಕು ಹರಡಲು ದಾರಿ ಮಾಡಿಕೊಡುತ್ತಿದೆ.

ಈ ವಿಳಂಬ ತಪ್ಪಿಸಲು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರು ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲೇ ಪ್ರಯೋಗಾಲಯ ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ ಇತ್ತೀಚೆಗೆ ಪ್ರಸ್ತಾವ ಸಲ್ಲಿಸಿದ್ದರು. ಬಳಿಕ ಉಸ್ತುವಾರಿ ಕಾರ್ಯದರ್ಶಿಯವರು ಈ ಪ್ರಸ್ತಾವಕ್ಕೆ ಸರ್ಕಾರದ ಅನುಮತಿ ಪಡೆದು ಪ್ರಯೋಗಾಲಯಕ್ಕೆ ಆರಂಭಕ್ಕೆ ಸಮ್ಮತಿಸಿದ್ದರು.

ಇದೀಗ ಪ್ರಯೋಗಾಲಯದ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಇನ್ನು ಮುಂದೆ ಜಿಲ್ಲೆಯಲ್ಲಿನ ಶಂಕಿತ ಸೋಂಕಿತರ ವೈದ್ಯಕೀಯ ಪರೀಕ್ಷೆ ಈ ಪ್ರಯೋಗಾಲಯದಲ್ಲೇ ನಡೆಯಲಿದೆ. ಈ ಪ್ರಯೋಗಾಲಯದಲ್ಲಿ ದಿನಕ್ಕೆ 120 ಮಂದಿ ಮಾದರಿಗಳನ್ನು ಪರೀಕ್ಷಿಸಬಹುದು. ಜಿಲ್ಲೆಯಲ್ಲಿ ಪ್ರತಿನಿತ್ಯ ಸಂಗ್ರಹಿಸಲಾಗುವ ಶಂಕಿತ ಸೋಂಕಿತರ ಕಫಾ ಮತ್ತು ರಕ್ತ ಮಾದರಿಯನ್ನು ಅದೇ ದಿನ ಪರೀಕ್ಷಿಸಿ ವರದಿ ನೀಡಲಾಗುತ್ತದೆ. ಇದರಿಂದ ಸೋಂಕಿತರನ್ನು ಆ ದಿನವೇ ಕ್ವಾರಂಟೈನ್‌ ಮಾಡಿ, ಹೆಚ್ಚಿನ ಮಂದಿಗೆ ಸೋಂಕು ಹರಡದಂತೆ ತಡೆಯಲು ಸಹಕಾರಿಯಾಗಲಿದೆ.

ಐಸಿಎಂಆರ್‌ ಪರೀಕ್ಷೆ: ಪ್ರಯೋಗಾಲಯದ ಯಂತ್ರೋಪಕರಣಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ ಅಥವಾ ಇಲ್ಲವೇ ಎಂಬ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ತಜ್ಞರು ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ. ಬಳಿಕ ಪ್ರಯೋಗಾಲಯ ಕಾರ್ಯಾರಂಭ ಮಾಡಲಿದೆ.

ಈವರೆಗೆ ಜಿಲ್ಲೆಯಲ್ಲಿ ಪತ್ತೆಯಾಗಿರುವ ಕೊರೊನಾ ಸೋಂಕಿತರ ಕಫಾ ಮತ್ತು ರಕ್ತ ಮಾದರಿಯನ್ನು ನೂತನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಸೋಂಕಿತರಿಗೆ ಸಂಬಂಧಪಟ್ಟಂತೆ ಬೆಂಗಳೂರಿನ ಪ್ರಯೋಗಾಲಯದ ಮತ್ತು ಜಿಲ್ಲಾ ಪ್ರಯೋಗಾಲಯದ ವರದಿ ಒಂದೇ ಆಗಿದ್ದರೆ ಮಾತ್ರ ಪ್ರಯೋಗಾಲಯದ ಕಾರ್ಯಾರಂಭಕ್ಕೆ ಅನುಮತಿ ಸಿಗಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನೂತನ ಪ್ರಯೋಗಾಲಯಕ್ಕೆ ಅಗತ್ಯವಿರುವ 15ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಯನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು