ಶನಿವಾರ, ಜೂನ್ 25, 2022
24 °C
ಬೀದಿಗೆ ಬಂದ ಬೀದಿ ವ್ಯಾಪಾರಿಗಳ ಬದುಕು

ಕೋಲಾರ | ಕೋವಿಡ್‌ ಲಾಕ್‌ಡೌನ್‌ ಹೊಡೆತ: ಕುಟುಂಬದ ಪೋಷಣೆಯೇ ದೊಡ್ಡ ಸವಾಲು

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋವಿಡ್‌ ಹಾಗೂ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದ ಬೀದಿ ಬದಿ ವ್ಯಾಪಾರಿಗಳ ಬದುಕು ಬೀದಿಗೆ ಬಂದಿದೆ.

ನಗರದಲ್ಲಿ ಸುಮಾರು 900 ಮಂದಿ ಬೀದಿ ಬದಿ ವ್ಯಾಪಾರಿಗಳಿದ್ದು, ರಸ್ತೆ ಬದಿಯ ಪಾದಚಾರಿ ಮಾರ್ಗವು ಇವರ ಬದುಕಿಗೆ ಅನ್ನದ ಮಾರ್ಗ ಕಲ್ಪಿಸಿದೆ. ಇವರು ಜಿಲ್ಲಾ ಕೇಂದ್ರದ ಟಿ.ಚನ್ನಯ್ಯ ರಂಗಮಂದಿರ ರಸ್ತೆ, ಎಂ.ಜಿ.ರಸ್ತೆ, ಎಂ.ಬಿ.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಬಟ್ಟೆ, ಪಾದರಕ್ಷೆ, ತರಕಾರಿ, ಹಣ್ಣು, ಎಲೆಕ್ಟ್ರಾನಿಕ್‌ ವಸ್ತುಗಳು, ಪುಸ್ತಕ ಹಾಗೂ ಹೂವಿನ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.

ಬೀದಿ ವ್ಯಾಪಾರಿಗಳ ಬದುಕಿಗೆ ಪ್ರತಿನಿತ್ಯದ ದುಡಿಮೆಯೇ ಆಧಾರ. ಆರ್ಥಿಕವಾಗಿ ಸ್ಥಿತಿವಂತರಲ್ಲದ ಇವರು ಕಡಿಮೆ ಬಂಡವಾಳ ಹೂಡಿ ದಿನದ ಕೂಲಿ ಸಂಪಾದನೆ ಮಾಡುವ ಮಂದಿ. ಆದರೆ, ಇದೀಗ ಕೊರೊನಾ ಮತ್ತು ಲಾಕ್‌ಡೌನ್ ಇವರ ಬದುಕನ್ನೇ ಕಸಿದಿದೆ. ಕಳೆದ ವರ್ಷ ಸಹ ಇದೇ ಅವಧಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಮೊದಲನೇ ಲಾಕ್‌ಡೌನ್‌ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದ ಇವರ ಬದುಕು ಕೋವಿಡ್‌ 2ನೇ ಅಲೆಯ ತೀವ್ರತೆಗೆ ಸೂತ್ರವಿಲ್ಲದ ಗಾಳಿಪಟದಂತಾಗಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಜಾರಿಯಾಗಿರುವ ಲಾಕ್‌ಡೌನ್‌ ಬೀದಿ ಬದಿ ವ್ಯಾಪಾರಿಗಳ ಬದುಕಿಗೆ ಕೊಳ್ಳಿ ಇಟ್ಟಿದೆ. ಲಾಕ್‌ಡೌನ್‌ ಕಾರಣಕ್ಕೆ ಬೆಳಿಗ್ಗೆ 6 ಗಂಟೆಯಿಂದ 10ರವರೆಗೆ ತರಕಾರಿ, ಹೂವು, ಹಣ್ಣಿನ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ರಸ್ತೆ ಬದಿಯಲ್ಲಿ ತಳ್ಳುಗಾಡಿಗಳ ಮೂಲಕ ಹೋಟೆಲ್ ನಡೆಸುತ್ತಿದ್ದವರು, ಪಾನಿಪೂರಿ, ಕಬಾಬ್ ಮಾರುತ್ತಿದ್ದವರು, ಬಟ್ಟೆ, ಪಾದರಕ್ಷೆ, ಎಲೆಕ್ಟ್ರಾನಿಕ್‌ ವಸ್ತುಗಳು, ಪುಸ್ತಕ ಮಾರುತ್ತಿದ್ದವರು. ತಮ್ಮ ಗಾಡಿಗಳನ್ನು ಟಾರ್ಪಲ್‌ನಿಂದ ಮುಚ್ಚಿ ಮೂಲೆಯಲ್ಲಿ ನಿಲ್ಲಿಸಿದ್ದಾರೆ.

ಸೀಮಿತ ಅವಧಿವರೆಗೆ ಮಾತ್ರ ತರಕಾರಿ, ಹಣ್ಣು, ಹೂವಿನ ವ್ಯಾಪಾರ ಮಾಡಬೇಕಿರುವುದರಿಂದ ಮೊದಲಿನಂತೆ ವಹಿವಾಟು ನಡೆಯುತ್ತಿಲ್ಲ. ಮತ್ತೊಂದೆಡೆ ಜಿಲ್ಲಾಡಳಿತವು ಆಗೊಮ್ಮೆ ಈಗೊಮ್ಮೆ ಸಂಪೂರ್ಣ ಲಾಕ್‌ಡೌನ್‌ ಜಾರಿ ಮಾಡುತ್ತಿರುವುದರಿಂದ ಸಂಪಾದನೆ ಖೋತಾ ಆಗಿದೆ. ಕೋವಿಡ್‌ ಆತಂಕದ ಕಾರಣಕ್ಕೆ ಜನ ಮನೆಯಿಂದ ಹೊರಬರಲು ಭಯಪಡುತ್ತಿರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ವಹಿವಾಟು ನಡೆಯದೆ ಬೀದಿ ಬದಿ ವ್ಯಾಪಾರಿಗಳಿಗೆ ಸಂಪಾದನೆ ಕಡಿಮೆಯಾಗಿದೆ.

ಸಾಲದ ಶೂಲ: ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಸಾಕಷ್ಟು ಬೀದಿ ಬದಿ ವ್ಯಾಪಾರಿಗಳು ₹ 10 ಸಾವಿರ ಸಾಲ ಪಡೆದಿದ್ದಾರೆ. ಮತ್ತೆ ಕೆಲ ವ್ಯಾಪಾರಿಗಳು ಹಣಕಾಸು ಸಂಸ್ಥೆಗಳು, ಲೇವಾದೇವಿದಾರರು, ಖಾಸಗಿ ವ್ಯಕ್ತಿಗಳು, ಸಂಘಗಳಿಂದ ಸಾಲ ಪಡೆದು ಪ್ರತಿವಾರ ಅಸಲು ಮತ್ತು ಬಡ್ಡಿ ಪಾವತಿಸುತ್ತಿದ್ದರು.

ಆದರೆ, ಈಗ ವ್ಯಾಪಾರವಿಲ್ಲದೆ ಅಸಲು ಪಾವತಿಸಲು ಸಹ ಸಾಧ್ಯವಾಗುತ್ತಿಲ್ಲ. ಹಣಕಾಸು ಸಂಸ್ಥೆಯವರು ಬಡ್ಡಿ ಮನ್ನಾ ಮಾಡಲು ಒಪ್ಪುತ್ತಿಲ್ಲ. ಸಕಾಲಕ್ಕೆ ಸಾಲದ ಕಂತು ಕಟ್ಟದ ಕಾರಣ ದಿನದಿಂದ ದಿನಕ್ಕೆ ಬಡ್ಡಿಯ ಮೊತ್ತ ಏರು ಗತಿಯಲ್ಲಿ ಸಾಗಿದೆ. ಸಾಲದ ಶೂಲದಲ್ಲಿ ಸಿಲುಕಿರುವ ಬೀದಿ ಬದಿ ವ್ಯಾಪಾರಿಗಳ ಗೋಳು ಹೇಳತೀರದು.

ಸೋಂಕಿನ ಭಯ: ಕೆಲ ಬೀದಿ ಬದಿ ವ್ಯಾಪಾರಿಗಳು ಕೋವಿಡ್‌ ಆತಂಕದ ನಡುವೆಯೂ ಬೆಳಿಗ್ಗೆ 10ರ ನಂತರ ಸಂಜೆ 6ರವರೆಗೂ ಬಡಾವಣೆಗಳಲ್ಲಿ ತಳ್ಳು ಗಾಡಿಗಳ ಮೂಲಕ ವ್ಯಾಪಾರ ಮಾಡುತ್ತಿದ್ದಾರೆ. ಇವರಿಗೂ ಕೊರೊನಾ ಸೋಂಕಿನ ಆತಂಕ ಕಾಡುತ್ತಿದೆ. ಸಾಕಷ್ಟು ಬೀದಿ ಬದಿ ವ್ಯಾಪಾರಿಗಳಿಗೆ ಸೋಂಕು ತಗುಲಿ ಆಸ್ಪತ್ರೆ ಸೇರಿದ್ದಾರೆ. ಸೋಂಕಿನ ಭಯಕ್ಕೆ ಅನೇಕರು ವ್ಯಾಪಾರ ಬಿಟ್ಟು ಮನೆಯಲ್ಲಿ ಕುಳಿತಿದ್ದಾರೆ.

ವ್ಯಾಪಾರಿಗಳಿಗೆ ಮನೆ ಬಾಡಿಗೆಯಿರಲಿ, ಊಟಕ್ಕೂ ತೊಂದರೆಯಾಗಿದೆ. ವಿದ್ಯುತ್‌, ನೀರಿನ ಬಿಲ್‌ ಪಾವತಿ ಸೇರಿದಂತೆ ಕುಟುಂಬದ ಪೋಷಣೆಯೇ ಇವರಿಗೆ ದೊಡ್ಡ ಸವಾಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು