ಶುಕ್ರವಾರ, ಜುಲೈ 30, 2021
28 °C
ಲಾಭ ತಂದ ಆನ್‌ಲೈನ್ ಮಾರಾಟ l 15 ವರ್ಷಗಳಿಂದಲೂ ವಹಿವಾಟು

ಮಾವು ಬೆಳೆಗಾರನ ಸಾಹಸಗಾಥೆ

ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ಬೆಲೆ ಕುಸಿತದ ಪರಿಣಾಮ ಮಾವಿನ ಕಾಯಿ ತೋಟಗಳಲ್ಲಿ ಕೊಳೆಯುತ್ತಿದೆ. ಆದರೆ,  ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ಮಾವು ಬೆಳೆಗಾರ ನೀಲಟೂರು ಚಿನ್ನಪ್ಪರೆಡ್ಡಿ ಆನ್‌ಲೈನ್ ಮೂಲಕ ಮಾರಾಟ ಮಾಡಿ ಒಳ್ಳೆಯ ಲಾಭಗಳಿಸುತ್ತಿದ್ದಾರೆ.

ಚಿನ್ನಪ್ಪರೆಡ್ಡಿ ಅವರಿಗೆ ಆನ್‌ಲೈನ್‌ ವ್ಯಾಪಾರ ಹೊಸದಲ್ಲ. 15 ವರ್ಷಗಳಿಂದ ಆನ್‌ಲೈನ್‌ ಮೂಲಕ ಗ್ರಾಹಕರಿಗೆ ಮಾವಿನ ಹಣ್ಣು ತಲುಪಿಸುತ್ತಿದ್ದಾರೆ. ಗ್ರಾಹಕ ಪ್ರಿಯ ಮಾವು ಬೆಳೆಗಾರರಾಗಿ ಗುರುತಿಸಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ ಮಾವು ಅಭಿವೃದ್ಧಿ ಹಾಗೂ ಮಾರಾಟ ಅಭಿವೃದ್ಧಿ ಮಂಡಳಿ ಪ್ರಾರಂಭವಾದ ಮೇಲೆ ಅವರ ಮಾವು ವಹಿವಾಟು ಗರಿಗೆದರಿದೆ.

ಪ್ರತಿವರ್ಷ ಇವರು ಬೆಂಗಳೂರಿನಲ್ಲಿ ನಡೆಯುತ್ತಿದ್ದ ಮಾವು ಮೇಳದಲ್ಲಿ ಭಾಗವಹಿಸಿ, ಉತ್ತಮ ಗುಣಮಟ್ಟದ ಮಾವಿನ ಹಣ್ಣನ್ನು ಲಾಭದಾಯಕ ಬೆಲೆಗೆ ಮಾರಾಟ ಮಾಡುತ್ತಿದ್ದರು. ನಗರದ ಕೆಲವು ಆಯ್ದ ಪ್ರದೇಶಗಳಲ್ಲಿ ಮಾರಾಟ ಮಳಿಗೆ ತೆರೆದು ಮಾರಾಟ ಮಾಡುತ್ತಿದ್ದರು. ಆದರೆ, ಕೋವಿಡ್ ಸೋಂಕು ವ್ಯಾಪಾರಕ್ಕೆ ಕಂಟಕವಾಗಿ ಪರಿಣಮಿಸಿದೆ. ಎರಡು ವರ್ಷದಿಂದ ಬೆಂಗಳೂರಿನ ಮಾರಾಟ ಮಳಿಗೆ ವ್ಯಾಪಾರ ನಿಂತಿದೆ. ಆದರೆ, ಆನ್‌ಲೈನ್ ವ್ಯಾಪಾರ ಮುಂದುವರಿದಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ನಗರಗಳ ಮಾವು ಪ್ರಿಯರು ಆನ್‌ಲೈನ್ ಮೂಲಕ ಹಣ್ಣು ಖರೀದಿಸಿದರೆ, ಇನ್ನು ಕೆಲವರು ನೇರವಾಗಿ ತೋಟಕ್ಕೆ ಬಂದು ತಮಗೆ ಬೇಕಾದ ಕಾಯಿಯನ್ನು ಆಯ್ಕೆ ಮಾಡಿಕೊಂಡು ಖರೀದಿಸುತ್ತಾರೆ. ಕೆಲವು ಬಡಾವಣೆಗಳಲ್ಲಿನ ಮಾವು ಪ್ರಿಯರು ದೂರವಾಣಿ ಮೂಲಕ ಸಂಪರ್ಕಿಸಿ ಗುಂಪು ಗುಂಪಾಗಿ ಮಾವು ಖರೀದಿ ಮಾಡುತ್ತಾರೆ.

ಯಾವುದೇ ರೂಪದಲ್ಲಿ ಖರೀದಿ ಮಾಡಿದರೂ 5 ಕೆ.ಜಿ ಮಾವನ್ನು ಕಾಗದದ ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ ಗ್ರಾಹಕರಿಗೆ ತಲುಪಿಸಲಾಗುತ್ತದೆ. ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಮನೆ ಬಾಗಿಲಿಗೆ ಅಥವಾ ಒಂದು ನಿಗದಿತ ಸ್ಥಳಕ್ಕೆ ತಲುಪಿಸಲಾಗುತ್ತದೆ. ಕೋವಿಡ್‌ ಪರಿಣಾಮ ಅಂಚೆ  ಮೂಲಕ ಗ್ರಾಹಕರ ಮನೆ ಸೇರಿಸಲಾಗುತ್ತಿದೆ.

‘ನಾನು 5 ಎಕರೆ ಮಾವು ಹೊಂದಿದ್ದೇನೆ. ಅದರಲ್ಲಿ ಬಾದಾಮಿ, ಬೇನಿಷಾ, ಮಲ್ಲಿಕಾ, ರಸಪೂರಿ ಸೇರಿದಂತೆ ಹಲವು ಜಾತಿಯ ಮಾವಿನ ಮರಗಳನ್ನು ಬೆಳೆಸಿದ್ದೇನೆ. ಆನ್‌ಲೈನ್ ವ್ಯವಹಾರ ಪ್ರಾರಂಭವಾದಾಗಿನಿಂದಲೂ ಗ್ರಾಹಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಉತ್ತಮ ಗುಣಮಟ್ಟದ ಹಾಗೂ ಬಲಿತ ಕಾಯಿಯನ್ನು ಮಾತ್ರ ಕಟಾವು ಮಾಡಿ ಸಾಂಪ್ರದಾಯಿಕ ವಿಧಾನದಲ್ಲಿ ಹಣ್ಣು ಮಾಡಿ ಮಾರಾಟ ಮಾಡುತ್ತಿದ್ದೇನೆ. ಗ್ರಾಹಕರ ತೃಪ್ತಿಗೆ ಪೂರಕವಾದ ವಾತಾವರಣ ನಿರ್ಮಿಸಿಕೊಂಡಿದ್ದೇನೆ’ ಎಂದು ಚಿನ್ನಪ್ಪರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾರುಕಟ್ಟೆ ಹಾಗೂ ತೋಟಗಳಲ್ಲಿ ಮಾವು ಕೊಳೆತು ನಾರುತ್ತಿರುವ ಸಂದರ್ಭದಲ್ಲೂ ಸರಾಸರಿ ಒಂದು ಕೆ.ಜಿ ಮಾವಿಗೆ ₹ 130 ಬೆಲೆ ನಿಗದಿಪಡಿಸಲಾಗಿದೆ. ಗ್ರಾಹಕರು ಗೊಣಗದೆ ಖರೀದಿಸುತ್ತಿದ್ದಾರೆ. ಹಾಗಾಗಿ ಆನ್‌ಲೈನ್ ಮಾರಾಟಗಾರರು ಸ್ಥಳೀಯ ಮಾರುಕಟ್ಟೆ ಮೇಲೆ ಆಧಾರಪಟ್ಪಿಲ್ಲ. ಬದಲಿಗೆ ವೈಯಕ್ತಿಕ ವರ್ಚಸ್ಸುಗಳಿಸಿಕೊಂಡು ಲಾಭದಾಯಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಚಿನ್ನಪ್ಪರೆಡ್ಡಿ ಆನ್‌ಲೈನ್ ವ್ಯಾಪಾರದ ಮೂಲಕ ತಾವು ಮಾತ್ರ ಲಾಭ ಮಾಡಿಕೊಳ್ಳುತ್ತಿಲ್ಲ. ಇತರ ಮಾವು ಬೆಳೆಗಾರರಿಗೂ ಆ ಕುರಿತು ಮಾರ್ಗದರ್ಶನ ಮಾಡುತ್ತಿದ್ದಾರೆ. ಕೆಲವು ಬೆಳೆಗಾರರು ಈಗಾಗಲೇ ಅವರ ಜಾಡಲ್ಲಿ ನಡೆಯುತ್ತಿದ್ದಾರೆ. ಮಾವು ಬೆಳೆಗಾರರ ಸಮಸ್ಯೆಗಳ ನಿವಾರಣೆಗೆ ಹೋರಾಟ ಮಾಡುತ್ತಲೇ  ಸ್ವತಂತ್ರವಾಗಿ ಉತ್ಪನ್ನ ಮಾರಾಟ ಮಾಡುವ ಕೌಶಲ ಕಲಿಸುತ್ತಿದ್ದಾರೆ.

ಗ್ರಾಹಕರಿಂದ ಹಣ್ಣಿಗೆ ಹೆಚ್ಚಿನ ಬೇಡಿಕೆ ಬಂದಾಗ ಸ್ಥಳೀಯ ರೈತರಿಂದ ಉತ್ತಮ ಗುಣಮಟ್ಟದ ಬಲಿತ ಕಾಯಿ ಖರೀದಿಸಿ ಹಣ್ಣು ಮಾಡಿ ಪೂರೈಸುವುದುಂಟು. ಯಾವುದೇ ಸಂದರ್ಭದಲ್ಲಿ ಗುಣಮಟ್ಟದೊಂದಿಗೆ ರಾಜಿ ಆಗುವುದಿಲ್ಲ.

‘ಈ ವರ್ಷ ಕೋವಿಡ್‌ನಿಂದ ದೂರದ ನಗರಗಳಿಗೆ ಮಾವನ್ನು ತಲುಪಿಸುವುದು ಕಷ್ಟ. ಆದರೂ ಪರವಾಗಿಲ್ಲ. ಒಟ್ಟಿಗೆ ಟೆಂಪೊದಲ್ಲಿ ಮಾವಿನ ಪೆಟ್ಟಿಗೆಗಳನ್ನು ಕಳಿಸಿಕೊಟ್ಟರೆ ಖರ್ಚು ಕಡಿಮೆ ಬರುತ್ತದೆ. ಕೊರಿಯರ್ ಮೂಲಕ ಕೆ.ಜಿಯೊಂದಕ್ಕೆ ₹ 25 ಖರ್ಚು ಬರುತ್ತದೆ ಯಾವುದೇ ಕಮಿಷನ್‌ ಇರುವುದಿಲ್ಲ. ಹಾಗಾಗಿ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿದೆ’ ಎಂದು ಅವರು ಹೆಮ್ಮೆಯಿಂದ
ಹೇಳುತ್ತಾರೆ.

‘ಮಾವು ಬೆಳೆಗಾರರು ಬಲಿತ ಕಾಯಿಯನ್ನು ಮಾತ್ರ ವೈಜ್ಞಾನಿಕವಾಗಿ ಕಟಾವು ಮಾಡಬೇಕು. ಮಧ್ಯವರ್ತಿಗಳಿಗೆ ಸಲಾಮು ಹೊಡೆಯದೆ ಸ್ವತಂತ್ರವಾಗಿ ಮಾರಾಟ ಮಾಡುವುದರ ಮೂಲಕ ನಷ್ಟದಿಂದ ಪಾರಾಗಬೇಕು’ ಎಂಬುದು ಅವರ ಸಲಹೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.