ಶುಕ್ರವಾರ, ಸೆಪ್ಟೆಂಬರ್ 17, 2021
23 °C
ಕೋವಿಡ್‌–19 ಭಯ: ಪ್ರೇಕ್ಷಕರ ಕೊರತೆಯ ಆತಂಕ

ಕೋಲಾರ: ಚಿತ್ರಮಂದಿರ ತೆರೆಯಲು ಮಾಲೀಕರ ಹಿಂದೇಟು

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋವಿಡ್‌–19 ಕಾರಣಕ್ಕೆ ಆರೂವರೆ ತಿಂಗಳಿಂದ ಬಂದ್ ಆಗಿದ್ದ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದರೂ ಜಿಲ್ಲೆಯಲ್ಲಿ ಬಹುಪಾಲು ಚಿತ್ರಮಂದಿರ ಮಾಲೀಕರು ಗುರುವಾರ ಚಿತ್ರ ಪ್ರದರ್ಶನ ಪುನರಾರಂಭಿಸುವ ಮನಸ್ಸು ಮಾಡಲಿಲ್ಲ.

ರಾಜ್ಯ ಸರ್ಕಾರ ಲಾಕ್‌ಡೌನ್‌ನ ಭಾಗವಾಗಿ ರಾಜ್ಯದೆಲ್ಲೆಡೆ ಚಿತ್ರಮಂದಿರಗಳನ್ನು ಬಂದ್‌ ಮಾಡುವಂತೆ ಆದೇಶಿಸಿತ್ತು. ಈ ಆದೇಶದನ್ವಯ ಜಿಲ್ಲೆಯಲ್ಲೂ ಚಿತ್ರಮಂದಿರಗಳನ್ನು ಬಂದ್‌ ಮಾಡಲಾಗಿತ್ತು. ನಂತರ ಲಾಕ್‌ಡೌನ್‌ ಆದೇಶ ಹಿಂಪಡೆದ ಸರ್ಕಾರ ಚಿತ್ರಮಂದಿರಗಳ ಪುನರಾರಂಭಕ್ಕೆ ಹಸಿರು ನಿಶಾನೆ ತೋರಿರಲಿಲ್ಲ.

ಇದೀಗ ಗುರುವಾರದಿಂದ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಆರಂಭಕ್ಕೆ ಸರ್ಕಾರ ಸಮ್ಮತಿಸಿತ್ತು. ಆದರೆ, ಕೋವಿಡ್‌ ಮಾರ್ಗಸೂಚಿ ಪಾಲನೆಯು ಕಷ್ಟವೆಂಬ ಕಾರಣಕ್ಕೆ ಬಹುತೇಕ ಚಿತ್ರಮಂದಿರಗಳ ಮಾಲೀಕರು ಚಿತ್ರ ಪ್ರದರ್ಶನ ಆರಂಭಿಸಿಲ್ಲ. ಬೆರಳೆಣಿಕೆ ಚಿತ್ರಮಂದಿರಗಳಲ್ಲಿ ಶುಕ್ರವಾರದಿಂದ ಚಿತ್ರ ಪ್ರದರ್ಶನ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದ್ದರೂ ಪ್ರೇಕ್ಷಕರ ಕೊರತೆಯ ಆತಂಕ ಎದುರಾಗಿದೆ.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹರಡುವಿಕೆ ಪ್ರಮಾಣ ಏರು ಗತಿಯಲ್ಲಿ ಸಾಗಿದ್ದು, ಈಗಾಗಲೇ ಸಕ್ರಿಯ ಸೋಂಕಿತರ ಸಂಖ್ಯೆ 1,500ರ ಗಡಿ ದಾಟಿದೆ. ಮತ್ತೊಂದೆಡೆ ಪ್ರತಿನಿತ್ಯ ಸೋಂಕಿತರ ಸಾವು ಸಂಭವಿಸುತ್ತಿವೆ. ಕೋವಿಡ್‌ ಭಯದ ಕಾರಣಕ್ಕೆ ಮಾರುಕಟ್ಟೆಗೆ ಬರಲು ಹಿಂಜರಿಯುತ್ತಿರುವ ಜನರು ಚಿತ್ರಮಂದಿರಕ್ಕೆ ಬರುತ್ತಾರೆಯೇ ಎಂಬ ಅನುಮಾನ ಚಿತ್ರಮಂದಿರ ಮಾಲೀಕರಲ್ಲಿದೆ. ಸಿನಿಮಾ ಪ್ರದರ್ಶನಕ್ಕೆ ಹಾಕುವ ಬಂಡವಾಳ ಸಹ ಮರಳುವ ಭರವಸೆ ಇಲ್ಲವಾಗಿದೆ.

ಆರ್ಥಿಕ ಹೊರೆ: ಸರ್ಕಾರದ ಮಾರ್ಗಸೂಚಿ ಪ್ರಕಾರ ಚಿತ್ರಮಂದಿರಗಳಲ್ಲಿ ಡಿಜಿಟಲ್‌ ಟಿಕೆಟ್‌ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಮಾಸ್ಕ್‌ ಧರಿಸಿದ ಪ್ರೇಕ್ಷಕರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಬೇಕು. ಪ್ರತಿಯೊಬ್ಬರನ್ನು ಥರ್ಮಲ್‌ ಸ್ಕ್ಯಾನಿಂಗ್‌ಗೆ ಒಳಪಡಿಸಬೇಕು. ಪ್ರದರ್ಶನ ಮುಗಿದ ಬಳಿಕ ಕಡ್ಡಾಯವಾಗಿ ಸ್ಯಾನಿಟೈಸ್‌ ಮಾಡಬೇಕು. ಜತೆಗೆ ಆಸನಗಳ ನಡುವೆ ಅಂತರ ಕಾಯ್ದುಕೊಳ್ಳಬೇಕು.

‘ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡಲು ಹೊರಟರೆ ಆರ್ಥಿಕ ಹೊರೆ ಹೆಚ್ಚುತ್ತದೆ. ಆಸನಗಳ ನಡುವೆ ಅಂತರ ಕಾಯ್ದುಕೊಂಡರೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ಆದಾಯ ಕುಸಿಯುತ್ತದೆ’ ಎಂದು ಚಿತ್ರಮಂದಿರಗಳ ಮಾಲೀಕರು ಆತಂಕ ವ್ಯಕ್ತಪಡಿಸಿದರು.

ಹೊಸ ಸಿನಿಮಾಗಳಿಲ್ಲ: ಹಲವು ತಿಂಗಳಿಂದ ಚಿತ್ರೀಕರಣ ಸ್ಥಗಿತಗೊಂಡಿದ್ದ ಕಾರಣ ಹೊಸ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿಲ್ಲ. ಒಂದೆರಡು ಸಿನಿಮಾಗಳನ್ನು ಎಲ್ಲಾ ಚಿತ್ರಮಂದಿರಗಳಲ್ಲೂ ಪ್ರದರ್ಶಿಸಲು ಸಾಧ್ಯವಿಲ್ಲ. ಹಳೆಯ ಚಿತ್ರಗಳನ್ನು ಪ್ರದರ್ಶಿಸಿದರೆ ಪ್ರೇಕ್ಷಕರು ಬರುವುದು ಅನುಮಾನ.

ತೆಲುಗು ಭಾಷೆಯ ಪ್ರಭಾವ ಹೆಚ್ಚಿರುವ ಜಿಲ್ಲೆಯಲ್ಲಿ ಕನ್ನಡ ಭಾಷೆಯ ಸಿನಿಮಾಗಳು ಯಶಸ್ವಿ ಪ್ರದರ್ಶನ ಕಾಣುವುದಿಲ್ಲ. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ ಚಿತ್ರಗಳನ್ನು ಪ್ರದರ್ಶಿಸಿದರೆ ಮಾತ್ರ ಚಿತ್ರಮಂದಿರಗಳು ಭರ್ತಿಯಾಗುತ್ತವೆ. ಕೆಲವೇ ಸಿನಿಮಾಗಳನ್ನು ನಂಬಿಕೊಂಡು ಚಿತ್ರಮಂದಿರ ತೆರೆಯುವುದು ಹೊರೆಯಾಗುತ್ತದೆ ಎಂದು ಚಿತ್ರಮಂದಿರ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಸುಪ್ರಸಿದ್ಧ ತಾರೆಯರ ದೊಡ್ಡ ಬಜೆಟ್‌ ಸಿನಿಮಾಗಳೇ ಚಿತ್ರಮಂದಿರಗಳ ಜೀವಾಳ. ಇಂತಹ ಸಿನಿಮಾಗಳು ಬಿಡುಗಡೆಯಾದಾಗ ಹಲವು ದಿನಗಳವರೆಗೆ ಪ್ರೇಕ್ಷಕರು ಕಿಕ್ಕಿರಿದು ಸೇರುತ್ತಾರೆ. ಆದರೆ, ಈಗ ಅರ್ಧದಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ಇರುವುದರಿಂದ ದೊಡ್ಡ ಬಜೆಟ್‌ ಸಿನಿಮಾಗಳು ಬಿಡುಗಡೆ ಆಗುವುದಿಲ್ಲ.

ಹೀಗಾಗಿ ಚಿತ್ರಮಂದಿರದ ಬಾಗಿಲು ತೆಗೆಯಲು ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಪ್ರೇಕ್ಷಕರು ಕೊರೊನಾ ಸೋಂಕಿನ ಭಯದಿಂದ ಸಂಪೂರ್ಣವಾಗಿ ಹೊರ ಬರುವವರೆಗೂ ಕಾದು ನೋಡುವ ನಿರ್ಧಾರಕ್ಕೆ ಬಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು