ಗುರುವಾರ , ಆಗಸ್ಟ್ 11, 2022
26 °C
‘ವಿಸ್ಟ್ರಾನ್‌’ ಕಂಪನಿಯಿಂದ ಖುಲಾಯಿಸಿದ ಅದೃಷ್ಟ

ಕೋಲಾರದಲ್ಲಿ ಕೃಷಿ ಭೂಮಿಗೆ ಬಂಗಾರದ ಬೆಲೆ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಆ್ಯಪಲ್‌ ಐಫೋನ್‌ ಉತ್ಪಾದಿಸುವ ವಿಸ್ಟ್ರಾನ್‌ ಇನ್ಫೋಕಾಮ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಜಿಲ್ಲೆಗೆ ಅಡಿಯಿಟ್ಟ ನಂತರ ಕೈಗಾರಿಕಾ ಪ್ರದೇಶಗಳ ಸುತ್ತಮುತ್ತಲಿನ ಕೃಷಿ ಭೂಮಿಗೆ ಬಂಗಾರದ ಬೆಲೆ ಬಂದಿದೆ.

ಕೃಷಿ ಪ್ರಧಾನ ಜಿಲ್ಲೆಯಲ್ಲಿ ಕೈಗಾರಿಕೀಕರಣದ ಗಾಳಿ ಬೀಸಿದ್ದು, ಜಿಲ್ಲೆಯ ಅದೃಷ್ಟವೇ ಬದಲಾಗಿದೆ. ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ ಜಿಲ್ಲೆಯತ್ತ ಬಹುರಾಷ್ಟ್ರೀಯ ಕಂಪನಿಗಳು, ಕೈಗಾರಿಕೆಗಳು ಮುಖ ಮಾಡಿದ್ದು, ಜಿಲ್ಲೆಯು ಬಂಡವಾಳ ಹೂಡಿಕೆಗೆ ಪ್ರಶಸ್ತ ಸ್ಥಳವೆಂಬ ಭಾವನೆ ಬಲಗೊಂಡಿದೆ.

ಬೆಂಗಳೂರಿನ ಮೇಲಿನ ಒತ್ತಡ ನಿವಾರಣೆಗಾಗಿ ಸರ್ಕಾರ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶಗಳ ಸ್ಥಾಪನೆಗೆ ಆಸಕ್ತಿ ತೋರಿದೆ. ಮುಖ್ಯವಾಗಿ ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಕೈಗಾರಿಕಾ ಪ್ರದೇಶಗಳು ತಲೆ ಎತ್ತಿವೆ.

ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಂತಿರುವ ನರಸಾಪುರ ಸುತ್ತಮುತ್ತ ದಶಕದ ಹಿಂದೆ ಕೃಷಿ ಭೂಮಿ ಬೆಲೆ ಎಕರೆಗೆ ಗರಿಷ್ಠ ₹ 20 ಲಕ್ಷವಿತ್ತು. ನರಸಾಪುರ ಸಮೀಪದ ವೇಮಗಲ್‌ನಲ್ಲೂ ಭೂಮಿ ಬೆಲೆ ಇಷ್ಟೇ ಇತ್ತು. ನರಸಾಪುರ ಮತ್ತು ವೇಮಗಲ್‌ ಕೈಗಾರಿಕಾ ಪ್ರದೇಶಗಳಾಗಿ ಘೋಷಣೆಯಾದ ನಂತರ ಭೂಮಿ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು.

5 ಪಟ್ಟು ಹೆಚ್ಚು: ತೈವಾನ್‌ ಮೂಲದ ವಿಸ್ಟ್ರಾನ್‌ ಕಂಪನಿಯು 2 ವರ್ಷದ ಹಿಂದೆ ಜಿಲ್ಲೆಯನ್ನು ಪ್ರವೇಶಿಸಿದ ನಂತರ ಕೃಷಿ ಭೂಮಿ ಬೆಲೆ 5 ಪಟ್ಟು ಹೆಚ್ಚಾಗಿದೆ. ವಿಸ್ಟ್ರಾನ್‌ ಕಂಪನಿಯು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಅಚ್ಚಟ್ನಹಳ್ಳಿಯ ರೈತರ ಜಮೀನಿಗೆ ಎಕರೆಗೆ ₹ 1 ಕೋಟಿ ಕೊಟ್ಟು ಕೆಐಎಡಿಬಿ ಮೂಲಕ 43 ಎಕರೆ ಜಮೀನು ಖರೀದಿಸಿದೆ. ಇದು ಜಿಲ್ಲೆಯಲ್ಲಿ ಕಂಪನಿಯೊಂದು ಕೃಷಿ ಭೂಮಿಗೆ ಕೊಟ್ಟಿರುವ ಗರಿಷ್ಠ ಬೆಲೆಯಾಗಿದೆ.

ಹೆಚ್ಚುವರಿ ಭೂಮಿ: ನರಸಾಪುರ ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಅಪ್ಪಸಂದ್ರ, ಕೆ.ಬಿ.ಹೊಸಹಳ್ಳಿ, ಜಕ್ಕಸಂದ್ರ, ಕಲ್ಲನಾಯಕನಹಳ್ಳಿ, ಮಿಂಡಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿನ ಕೃಷಿ ಭೂಮಿ ಬೆಲೆ ಗಗನಕ್ಕೇರಿದೆ. ವಿಸ್ಟ್ರಾನ್‌ ಕಂಪನಿಯ ವಿಸ್ತರಣೆಗೆ ಹೆಚ್ಚುವರಿಯಾಗಿ 63 ಎಕರೆ ಭೂಮಿಗೆ ಪ್ರಸ್ತಾವ ಸಲ್ಲಿಸಿದ್ದು, ಜಿಲ್ಲಾಡಳಿತವು ಅಚ್ಚಟ್ನಹಳ್ಳಿ ಸುತ್ತಮುತ್ತ ಜಮೀನು ಗುರುತಿಸಿದೆ. ಈ ಜಮೀನಿಗೆ ಎಕರೆಗೆ ₹ 1.08 ಕೋಟಿ ಬೆಲೆ ನಿಗದಿಯಾಗಿದ್ದು, ಕೆಐಎಡಿಬಿ ಮೂಲಕ ಭೂಸ್ವಾಧೀನ ಪ್ರಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ವೇಮಗಲ್‌ ಕೈಗಾರಿಕಾ ಪ್ರದೇಶದ ಪಕ್ಕ 2ನೇ ಹಂತದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲು 520 ಎಕರೆ ಜಮೀನು ಗುರುತಿಸಲಾಗಿದೆ. ನರಸಾಪುರ ಕೈಗಾರಿಕಾ ಪ್ರದೇಶದ ಬಳಿಯ ಮಿಂಡಹಳ್ಳಿ, ಕರಡುಬಂಡೆ, ಹೊಸಹಳ್ಳಿ, ಖಾಜಿ ಕಲ್ಲಹಳ್ಳಿ, ಅಚ್ಚಟ್ನಹಳ್ಳಿ ಸುತ್ತಮುತ್ತ 2ನೇ ಹಂತದಲ್ಲಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ 877 ಎಕರೆ ಜಮೀನು ಗುರುತಿಸಿ, ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ.

*
ದಶಕದ ಹಿಂದೆ ಗ್ರಾಮದಲ್ಲಿ ಕೃಷಿ ಭೂಮಿ ಕೇಳುವವರಿಲ್ಲ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ವಿಸ್ಟ್ರಾನ್‌ ಕಂಪನಿ ಬಂದ ನಂತರ ಭೂಮಿ ಬೆಲೆ ಗಗನಕ್ಕೇರಿದೆ. ಈ ಬೆಲೆ ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ.
–ಆರ್‌.ಸುರೇಶ್‌, ಅಚ್ಚಟ್ನಹಳ್ಳಿ ರೈತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು