ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಿಕರ ಬಲಿದಾನಕ್ಕೆ ಬೆಲೆ ಕಟ್ಟಲಾಗದು: ನಾಗರಾಜ್‌

ಜಿಲ್ಲಾ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಅಭಿಪ್ರಾಯ
Last Updated 27 ಜುಲೈ 2021, 14:22 IST
ಅಕ್ಷರ ಗಾತ್ರ

ಕೋಲಾರ: ‘ಸೈನಿಕರು ವರ್ಷದ 365 ದಿನವೂ ದೇಶದ ಗಡಿ ಕಾಯುತ್ತಿರುವುದರಿಂದ ಜನ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತಿದೆ’ ಎಂದು ಜಿಲ್ಲಾ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಜಿ.ನಾಗರಾಜ್‌ ಅಭಿಪ್ರಾಯಪಟ್ಟರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ‘ಕಾರ್ಗಿಲ್‌ ವಿಜಯದ ದಿವಸಕ್ಕೆ 22 ವರ್ಷಗಳ ಸಂಭ್ರಮ. ಕಾರ್ಗಿಲ್ ಯುದ್ಧದಲ್ಲಿ ದೇಶದ 527 ಯೋಧರು ಹುತಾತ್ಮರಾದರು. ಈ ಪೈಕಿ ರಾಜ್ಯದ 150 ಯೋಧರು ಸೇರಿದ್ದಾರೆ. ಹುತಾತ್ಮ ಯೋಧರ ಬಲಿದಾನ ಸ್ಮರಿಸಬೇಕು’ ಎಂದರು.

‘ಪಾಕಿಸ್ತಾನ ಸೇನೆಯು 1999ರಲ್ಲಿ ಕಾರ್ಗಿಲ್‌ ಡ್ರಾಸ್ ವಲಯದಲ್ಲಿ ಅಕ್ರಮವಾಗಿ ಪ್ರವೇಶಿಸಿ ಭಾರತದ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿತ್ತು. ಆಕ್ರಮಣ ಮಾಡಲು ಬಂದ ಪಾಕಿಸ್ತಾನದ ಸೈನಿಕರ ವಿರುದ್ಧ ಭಾರತೀಯ ಸೇನೆಗೆ ಯುದ್ಧ ಮಾಡದೆ ಬೇರೆ ದಾರಿಯಿರಲಿಲ್ಲ. ಸತತ ಎರಡೂವರೆ ತಿಂಗಳು ಕಾರ್ಗಿಲ್‌ನಲ್ಲಿ ಯುದ್ಧ ನಡೆದು ಕೊನೆಗೆ ಭಾರತೀಯ ಸೇನೆ ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟಿಸಿತು’ ಎಂದು ವಿವರಿಸಿದರು.

‘ಸೈನಿಕರ ಶೌರ್ಯ ಸಾಧನೆಗೆ ಹಾಗೂ ಅವರ ಪ್ರಾಣ ತ್ಯಾಗಕ್ಕೆ ಪುರಸ್ಕಾರ ಬೇಕಿಲ್ಲ. ಅವರ ತ್ಯಾಗ ಬಲಿದಾನಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ನಮ್ಮೆಲ್ಲರ ಬದುಕಿಗಾಗಿ ತಮ್ಮ ಭವಿಷ್ಯವನ್ನೇ ಬಲಿಕೊಟ್ಟು ಅಮರರಾಗುವ ಸೈನಿಕರನ್ನು ಪ್ರತಿಯೊಬ್ಬರು ಸ್ಮರಿಸಬೇಕು. ಸೈನಿಕರ ಸೇವೆ ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಕಿವಿಮಾತು ಹೇಳಿದರು.

ದೇಶಭಕ್ತಿ ಬೆಳೆಯಲಿ: ‘ದೇಶ ಶಾಂತಿಯುತವಾಗಿ ಇರಬೇಕಾದರೆ ಸೈನಿಕರ ಪರಿಶ್ರಮ ಕಾರಣ ಎಂಬ ಸಂಗತಿಯನ್ನು ಸರ್ಕಾರಗಳು ಅರ್ಥ ಮಾಡಿಕೊಳ್ಳಬೇಕು. ಹುತಾತ್ಮ ಯೋಧರ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು. ಜತೆಗೆ ಯೋಧರಿಗೆ ಎಲ್ಲಾ ರೀತಿಯ ಮೂಲಸೌಕರ್ಯ ಕಲ್ಪಿಸಬೇಕು. ಜನರಲ್ಲಿ ದೇಶಭಕ್ತಿ ಬೆಳೆಯಬೇಕು’ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಪಿ.ನಾರಾಯಣಪ್ಪ ಸಲಹೆ ನೀಡಿದರು.

‘ತಂದೆ ತಾಯಿ, ಹೆಂಡತಿ ಮಕ್ಕಳನ್ನು ತೊರೆದು ದೇಶ ರಕ್ಷಣೆ ಮಾಡುವ ಯೋಧರನ್ನು ಗೌರವಿಸಬೇಕು. ಸ್ವಾರ್ಥ ಜೀವನ ತೊರೆಯಬೇಕು. ಕಾರ್ಗಿಲ್ ವಿಜಯೋತ್ಸವ ನೆನಪಿನಿಂದ ಭಾರತ ಮಾತೆಗೆ ನಮ್ಮನ್ನು ನಾವು ಅರ್ಪಿಸಿಕೊಂಡಂತೆ ಆಗುತ್ತದೆ’ ಎಂದು ತಿಳಿಸಿದರು.

ಎರಡು ಕಣ್ಣು: ‘ಗಡಿ ಕಾಯುವ ಸೈನಿಕರು ಹಾಗೂ ಅನ್ನ ಕೊಡುವ ರೈತರು ದೇಶದ ಎರಡು ಕಣ್ಣುಗಳಿದ್ದಂತೆ. ಸೈನಿಕರು ಜಾತಿ, ಧರ್ಮದ ಭೇದವಿಲ್ಲದೆ ದೇಶ ರಕ್ಷಣೆ ಮಾಡುತ್ತಿದ್ದಾರೆ. ದೇಶದ ಪ್ರಜೆಗಳು ನೆಮ್ಮದಿಯಿಂದ ಬದುಕುತ್ತಿರುವುದರ ಹಿಂದೆ ಸೈನಿಕರ ಶ್ರಮವಿದೆ. ಪಟ್ಟಭದ್ರ ಹಿತಾಸಕ್ತಿಗಳನ್ನು ಮಟ್ಟಹಾಕಲು ಸಾರ್ವಜನಿಕರು ಯೋಧರಂತೆ ಕೆಲಸ ಮಾಡಬೇಕು’ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಹೇಳಿದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಬಿ.ಶಿವಕುಮಾರ್, ರಾಮಚಂದ್ರ, ನಾರಾಯಣಸ್ವಾಮಿ, ಕನ್ನಡ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಎಸ್.ಸಿ.ವೆಂಕಟಕೃಷ್ಣಪ್ಪ, ಸಾಹಿತಿಗಳಾದ ಸಿ.ರವೀಂದ್ರಸಿಂಗ್. ಶರಣಪ್ಪ ಗಬ್ಬೂರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT