ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೈವಾಕ್‌ ನಿರ್ಮಾಣಕ್ಕೆ ಹಿಂದೇಟು: ಹೆದ್ದಾರಿ ದಾಟಲು ಹರಸಾಹಸ

ಆದರ್ಶ ಶಾಲೆ ವಿದ್ಯಾರ್ಥಿಗಳಿಗೆ ಸಂಕಷ್ಟ
Last Updated 1 ಏಪ್ರಿಲ್ 2021, 7:42 IST
ಅಕ್ಷರ ಗಾತ್ರ

ನಂಗಲಿ: ತಾತಿಕಲ್ಲು ಸಮೀಪದ ಆದರ್ಶ ಶಾಲೆಗೆ ಹೋಗುವ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿ ದಾಟಲು ಪ್ರತಿದಿನ ಹರಸಾಹಸ ಪಡುವಂತಾಗಿದೆ.

2016-17ರಲ್ಲಿ ಆದರ್ಶ ಶಾಲೆ ಪ್ರಾರಂಭಿಸಲಾಗಿದೆ. ಶಾಲೆಗೆ ದೂರದ ಊರುಗಳಿಂದ ಬಸ್‌ಗಳು ಹಾಗೂ ಇತರೆ ವಾಹನಗಳಲ್ಲಿ ಬರುವ ವಿದ್ಯಾರ್ಥಿಗಳು ಸಾವಿರಾರು ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿ 75 ಅನ್ನು ದಾಟಬೇಕಿದೆ. ‌ಆದರೆ, ಯಾವುದೇ ಸುರಕ್ಷತಾ ಕ್ರಮ ಇಲ್ಲದೆ ಇರುವುದರಿಂದ ತಮ್ಮ ಪ್ರಾಣವನ್ನು ಅಂಗೈಯಲ್ಲಿಟ್ಟುಕೊಂಡು ಬರಬೇಕಾದ ಪರಿಸ್ಥಿತಿ ಇದೆ.

ಪ್ರಸ್ತುತ ಶಾಲೆಯಲ್ಲಿ 392 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಹೆದ್ದಾರಿ ದಾಟಿ ಬರಬೇಕಾಗಿದೆ. ಆದರೆ, ಹೆದ್ದಾರಿ ದಾಟುವಾಗ ವೇಗದಲ್ಲಿ ಬರುವ ವಾಹನಗಳಿಂದ ತಪ್ಪಿಸಿಕೊಂಡು ಬರುವುದೇ ದೊಡ್ಡ ಸಾಹಸವೇ ಸರಿ. ಸ್ವಲ್ಪ ಯಾಮಾರಿದರೂ ವಿದ್ಯಾರ್ಥಿಗಳ ಪ್ರಾಣಕ್ಕೆ ಸಂಚಕಾರ ಗ್ಯಾರಂಟಿ.

ವಿದ್ಯಾರ್ಥಿಗಳನ್ನು ರಸ್ತೆ ದಾಟಿಸಲು ಭದ್ರತಾ ಸಿಬ್ಬಂದಿಯನ್ನೂ ನೇಮಿಸಿಲ್ಲ. ಶಾಲೆ ಇದೆ ವಾಹನಗಳು ನಿಧಾನವಾಗಿ ಚಲಿಸಿ ಎಂಬ ಸುರಕ್ಷತಾ ಅಥವಾ ಎಚ್ಚರಿಕೆಯ ಫಲಕವಿಲ್ಲ. ರಸ್ತೆ ಉಬ್ಬುಗಳಿಲ್ಲ. ಸಿಗ್ನಲ್ ಲೈಟ್ ಕೂಡ ಅಳವಡಿಸಿಲ್ಲ. ಇದರಿಂದ ವಿದ್ಯಾರ್ಥಿಗಳು ಬಸ್ ಮತ್ತು ಇತರೆ ವಾಹನಗಳಲ್ಲಿ ಬಂದು ಸ್ವತಃ ತಾವೇ ಎಚ್ಚರಿಕೆಯಿಂದ ಹೆದ್ದಾರಿಯ ಎರಡೂ ಕಡೆಗಳನ್ನು ನೋಡಿ ದಾಟಬೇಕಾಗಿದೆ.

ಹೆದ್ದಾರಿ ಪಕ್ಕದಲ್ಲಿ ಜನಸಂಖ್ಯೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಸ್ಕೈವಾಕ್‌ಗಳು ಅಥವಾ ಅಂಡರ್ ಪಾಸ್‌ ನಿರ್ಮಿಸುವುದು ಹೆದ್ದಾರಿ ಪ್ರಾಧಿಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಪ್ರಾಧಿಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಬಿಸಿಲು, ಮಳೆ, ಗಾಳಿ ಎನ್ನದೆ ಬಸ್ ಬರುವವರೆಗೂ ವಿದ್ಯಾರ್ಥಿಗಳು ರಸ್ತೆಬದಿಯಲ್ಲಿ ನಿಲ್ಲಬೇಕಾಗುತ್ತದೆ. ಆದರೆ, ಶಾಲೆ ಆರಂಭವಾಗಿ ಸುಮಾರು ಐದಾರು ವರ್ಷಗಳು ಕಳೆಯುತ್ತಿದ್ದರೂ ಇದುವರೆಗೂ ಬಸ್ ಶೆಲ್ಟರ್ ನಿರ್ಮಿಸಿಲ್ಲ.

‘ಶಾಲೆ ಸ್ಥಾಪನೆಯಾದ ಪ್ರಾರಂಭದಲ್ಲಿ ನಂಗಲಿ ಬಳಿಯ ಜೆ.ಎಸ್.ಆರ್ ಟೋಲ್ ಪ್ಲಾಜಾದ ಅಧಿಕಾರಿಯೊಬ್ಬರು ಮಕ್ಕಳು ಹೆದ್ದಾರಿಯಲ್ಲಿ ಸುಗುಮವಾಗಿ ಸಂಚರಿಸಲು ಮತ್ತು ಹೆದ್ದಾರಿ ದಾಟಲು ಸ್ಕೈವಾಕ್ ನಿರ್ಮಿಸಿಕೊಡುತ್ತೇವೆ ಎಂದು ಹೇಳಿದ್ದರು. ಈ ಸಂಬಂಧ ಶಾಲೆಯಿಂದ ಅರ್ಜಿಯನ್ನೂ ನೀಡಲಾಗಿತ್ತು. ನಂತರ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದರು. ಆದರೆ, ಇದುವರೆಗೂ ಸ್ಕೈವಾಕ್ ನಿರ್ಮಾಣ ಮಾಡಿಲ್ಲ. ಇದರಿಂದ ವಿದ್ಯಾರ್ಥಿಗಳು ರಸ್ತೆ ದಾಟಲು ಸಮಸ್ಯೆಯಾಗಿದೆ. ಕೂಡಲೇ ಸೌಲಭ್ಯ ಕಲ್ಪಿಸಬೇಕು’ ಎಂದು ಶಾಲೆಯ ಪ್ರಾಂಶುಪಾಲನಟರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT