ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ರಕ್ಷಿಸದಿದ್ದರೆ ಭವಿಷ್ಯದಲ್ಲಿ ಸಮಸ್ಯೆ: ವೆಂಕಟೇಶ್‌

Last Updated 14 ಜುಲೈ 2021, 16:35 IST
ಅಕ್ಷರ ಗಾತ್ರ

ಕೋಲಾರ: ‘ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ನೀರು ಸಂರಕ್ಷಿಸದಿದ್ದರೆ ಭವಿಷ್ಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ನೀರಿನ ಸಮಸ್ಯೆ ನಿವಾರಣೆಗೆ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ಎಪಿಎಂಸಿ ನಿರ್ದೇಶಕ ವೆಂಕಟೇಶ್‌ ಕಿವಿಮಾತು ಹೇಳಿದರು.

ಗ್ರಾಮ ವಿಕಾಸ ಸಂಸ್ಥೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಹಮ್ಮಿಕೊಂಡಿರುವ ತಾಲ್ಲೂಕಿನ ಕುಂಬಾರಹಳ್ಳಿ ಕೆರೆಯ ಹೂಳೆತ್ತುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ‘ಜಿಲ್ಲೆಯಲ್ಲಿ ನದಿ, ಕಾಲುವೆಯಂತಹ ಮೇಲ್ಮೈ ನೀರಿನ ಮೂಲಗಳಿಲ್ಲ. ಹೀಗಾಗಿ ಕೆರೆಗಳೇ ನೀರಿಗೆ ಪ್ರಮುಖ ಆಸರೆ’ ಎಂದು ಅಭಿಪ್ರಾಯಪಟ್ಟರು.

‘ಬೇಸಿಗೆಯಲ್ಲೇ ಕೆರೆ ಹೂಳೆತ್ತುವ ಕಾಮಗಾರಿ ಆರಂಭಿಸಬೇಕಿತ್ತು. ಆದರೆ, ಮಳೆಗಾಲದಲ್ಲಿ ಈ ಕೆಲಸ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಸದ್ಯ ಮಳೆ ಆಗುತ್ತಿರುವುದರಿಂದ ಹೂಳೆತ್ತುವ ಕಾರ್ಯಕ್ಕೆ ಅಡ್ಡಿಯಾಗಲಿದೆ. ಈಗ ಹೂಳು ತೆಗೆದರೂ ಕೆರೆಯಲ್ಲಿ ನೀರು ಸಂಗ್ರಹಣೆ ಆಗುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೆರೆಯ ಹೂಳು ತೆಗೆಯುವುದರ ಜತೆಗೆ ರಾಜಕಾಲುವೆಗಳ ಸ್ವಚ್ಛತೆಗೂ ಆದ್ಯತೆ ನೀಡಬೇಕು. ಇದರಿಂದ ಮಳೆ ನೀರು ರಾಜಕಾಲುವೆಗಳ ಮೂಲಕ ಸರಾಗವಾಗಿ ಕೆರೆಗಳಿಗೆ ಹರಿಯುತ್ತದೆ. ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಬೇಕು. ಕೆರೆಯ ಹೂಳನ್ನು ರೈತರು ಕೃಷಿ ಭೂಮಿಗೆ ಬಳಸಿಕೊಳ್ಳಲು ಹೆಚ್ಚಿನ ಷರತ್ತು ವಿಧಿಸಬಾರದು’ ಎಂದು ಮನವಿ ಮಾಡಿದರು.

15 ಕೆರೆ: ‘ಕುಂಬಾರಹಳ್ಳಿ ಕೆರೆ ಸೇರಿದಂತೆ ಜಿಲ್ಲೆಯ 15 ಕೆರೆಗಳಲ್ಲಿ ಹೂಳು ತೆಗೆಯುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕೋಲಾರ ಮತ್ತು ಮಾಲೂರು ತಾಲ್ಲೂಕಿನ ತಲಾ 3 ಕೆರೆ, ಶ್ರೀನಿವಾಸಪುರ ಹಾಗೂ ಮುಳಬಾಗಿಲು ತಾಲ್ಲೂಕಿನ ತಲಾ 4 ಕೆರೆ, ಬಂಗಾರಪೇಟೆ ತಾಲ್ಲೂಕಿನ 1 ಕೆರೆಯ ಹೂಳು ತೆಗೆಯಲಾಗುತ್ತದೆ’ ಎಂದು ಯೋಜನೆ ಸಂಯೋಜಕಿ ಗಿರಿಜಾ ಮಾಹಿತಿ ನೀಡಿದರು.

‘ಕೆರೆಗಳಲ್ಲಿ ಹೆಚ್ಚು ನೀರು ಸಂಗ್ರಹಣೆಯಾಗುವಂತೆ ಮಾಡಲು ಹಾಗೂ ಅಂತರ್ಜಲ ವೃದ್ಧಿಸುವ ಉದ್ದೇಶಕ್ಕಾಗಿ ಮೇ 10ರಿಂದ ಹೂಳೆತ್ತುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಒಟ್ಟಾರೆ 1.68 ಲಕ್ಷ ಘನ ಮೀಟರ್ ಹೂಳೆತ್ತುವ ಗುರಿಯಿದೆ. ಮಳೆ ಹಾಗೂ ಬಿತ್ತನೆ ಕಾರ್ಯದಿಂದಾಗಿ ಕಾಮಗಾರಿಗೆ ಕೊಂಚ ಹಿನ್ನಡೆಯಾಗಿದೆ’ ಎಂದು ವಿವರಿಸಿದರು.

‘18 ದಿನದಲ್ಲಿ ಜಿಲ್ಲೆಯ 420ಕ್ಕೂ ಹೆಚ್ಚು ರೈತರು ಕೆರೆಯ ಹೂಳನ್ನು ತಮ್ಮ ಜಮೀನಿಗೆ ತೆಗೆದುಕೊಂಡು ಹೋಗಿದ್ದಾರೆ. ಐಐಟಿ, ರೋಟರಿ ಡಿಸ್ಟ್ರಿಕ್ಟ್‌ 3190, ಎಟಿಇ ಚಂದ್ರ ಪ್ರತಿಷ್ಠಾನ, ಕೇರಿಂಗ್ ಫ್ರೆಂಡ್ಸ್ ಮುಂಬೈ ದಾನಿಗಳಿಂದ ಕೆರೆಗಳ ಹೂಳೆತ್ತುವ ಕಾರ್ಯಕ್ರಮಕ್ಕೆ ₹ 26 ಲಕ್ಷ ಧನಸಹಾಯ ಪಡೆಯಲಾಗಿದೆ. ಕಾರ್ಯಕ್ರಮಕ್ಕೆ ಕಲೆಕ್ಟಿವ್ ಆ್ಯಕ್ಷನ್ ನೆಟ್‌ವರ್ಕ್‌ ಮತ್ತು ರೋಟರಿ ಕೋಲಾರ ಸಂಸ್ಥೆಯ ನೆರವು ಪಡೆಯಲಾಗಿದೆ’ ಎಂದರು.

ರಸ್ತೆಯಿಲ್ಲ: ‘ಕೆರೆ ಹಾಗೂ ಪಕ್ಕದ ಜಮೀನುಗಳಿಗೆ ಹೋಗಲು ರಸ್ತೆಯಿಲ್ಲ. ಈ ಸಮಸ್ಯೆಯನ್ನು ಜಿಲ್ಲಾಡಳಿತದ ಗಮನಕ್ಕೆ ತಂದು ಪರಿಹರಿಸಬೇಕು’ ಎಂದು ಕುಂಬಾರಹಳ್ಳಿ ಗ್ರಾಮಸ್ಥರು ಒತ್ತಾಯಿಸಿದರು. ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ನಾಗೇಶ್, ಸದಸ್ಯ ಜಯರಾಮ್‌, ಗ್ರಾಮ ವಿಕಾಸ ಸಂಸ್ಥೆ ಪ್ರತಿನಿಧಿ ಎಂ.ವಿ.ಎನ್.ರಾವ್, ಜೆಡಿಎಸ್‌ ಮುಖಂಡ ಮಲ್ಲೇಶ್‌ಬಾಬು, ಕ್ಯಾನ್ ಸಂಸ್ಥೆ ಅಧ್ಯಕ್ಷ ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT