ಸೋಮವಾರ, ಜೂನ್ 27, 2022
21 °C
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಆತಂಕ

ದೇಶದ ಆಹಾರ ಭದ್ರತೆಗೆ ಸಂಚಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಅನ್ನದಾತರಿಗೆ ಆತ್ಮಸ್ಥೈರ್ಯ ತುಂಬದಿದ್ದರೆ ದೇಶದ ಆಹಾರ ಭದ್ರತೆಗೆ ಸಂಚಕಾರ ಎದುರಾಗುತ್ತದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಆತಂಕ ವ್ಯಕ್ತಪಡಿಸಿದರು.

ಮನ್ವಂತರ ಜನಸೇವಾ ಟ್ರಸ್ಟ್ ಮೂಲಕ ರೈತರಿಂದ ಖರೀದಿಸಿದ ಸುಮಾರು 15 ಟನ್ ತಾಜಾ ತರಕಾರಿಗಳನ್ನು ಇಲ್ಲಿ ಗುರುವಾರ ಗಾಂಧಿನಗರ 2 ಮತ್ತು 3ನೇ ವಾರ್ಡ್‌ನ ಕುಟುಂಬಗಳಿಗೆ ವಿತರಿಸಿ ಮಾತನಾಡಿದರು.

‘ಕೋವಿಡ್ ಮತ್ತು ಲಾಕ್‌ಡೌನ್‌ನಿಂದ ಬೆಳೆಗಳಿಗೆ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಬೆಳೆಗೆ ಮಾಡಿದ ಸಾಲ ತೀರಿಸಲಾಗದೆ ಬಡ್ಡಿಯ ಸುಳಿಯಲ್ಲಿ ಸಿಲುಕಿದ್ದಾರೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಉಳ್ಳವರು ರೈತರ ನೆರವಿಗೆ ಧಾವಿಸಬೇಕು’ ಎಂದು ಮನವಿ ಮಾಡಿದರು.

‘ಜಿಲ್ಲೆಯ ಕೆರೆಗಳಿಗೆ ಕೆ.ಸಿ ವ್ಯಾಲಿ ಯೋಜನೆ ನೀರು ಬಂದಿರುವುದರಿಂದ ಅಂತರ್ಜಲ ವೃದ್ಧಿಯಾಗಿ ಕೊಳವೆ ಬಾವಿಗಳು ಮರುಪೂರಣಗೊಂಡಿವೆ. ರೈತರು ಬಡ್ಡಿ ಸಾಲ ಮಾಡಿ ಬೆಳೆ ಬೆಳೆದಿದ್ದಾರೆ. ಸಾಲದ ಕೂಪದಿಂದ ಹೊರಬರುವ ವಿಶ್ವಾಸದಲ್ಲಿದ್ದ ರೈತರಿಗೆ ಕೋವಿಡ್ ಆಘಾತ ನೀಡಿದೆ. ರೈತರು ಆತ್ಮಸ್ಥೈರ್ಯ ಕಳೆದುಕೊಂಡರೆ ದೇಶದಲ್ಲಿ ಖಂಡಿತ ಅನ್ನಕ್ಕೆ ಬರ ಬರುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಇಂತಹ ಸಂಕಷ್ಟದ ಸಮಯದಲ್ಲಿ ಉಳ್ಳವರು ರೈತರಿಗೆ ಕೈಲಾದಷ್ಟು ಸಹಾಯ ಮಾಡಬೇಕು. ರೈತರ ತೋಟಗಳಿಗೆ ಹೋಗಿ ತರಕಾರಿ ಖರೀದಿಸಿ ಅನ್ನದಾತನ ಕೈ ಹಿಡಿಯಬೇಕು. ಆ ತರಕಾರಿಯನ್ನು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ವಿತರಿಸುವ ಮೂಲಕ ಅವರಿಗೂ ನೆರವಾಗಬೇಕು’ ಎಂದರು.

ಪುಣ್ಯದ ಕೆಲಸ: ‘ಕೋವಿಡ್ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ತರಕಾರಿಗಳನ್ನು ಬಡವರಿಗೆ ವಿತರಿಸುವುದು ಪುಣ್ಯದ ಕೆಲಸ. ಸರ್ಕಾರ ಏನೂ ಮಾಡಲಿಲ್ಲ ಎಂದು ದೂಷಿಸುವ ಬದಲು ನಮ್ಮ ಕೈಲಾದಷ್ಟು ರೈತರು, ಬಡವರಿಗೆ ಸಹಾಯ ಮಾಡಬೇಕು’ ಎಂದು ಮನವಿ ಮಾಡಿದರು.

ಜನರಿಗೆ ಪಡವಲಕಾಯಿ, ಸೋರೆಕಾಯಿ, ಕ್ಯಾರೆಟ್, ಪಾಲಾಕ್ ಮತ್ತು ದಂಟು ಸೊಪ್ಪು, ಕೊತ್ತಂಬರಿ ವಿತರಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ನಗರಸಭೆ ಉಪಾಧ್ಯಕ್ಷ ಪ್ರವೀಣ್‌ಗೌಡ, ಅಣ್ಣಿಹಳ್ಳಿ ಎಸ್‍ಎಫ್‌ಸಿಎಸ್‌ ಅಧ್ಯಕ್ಷ ನಾಗರಾಜ್, ಮನ್ವಂತರ ಟ್ರಸ್ಟಿ ಸತ್ಯನಾರಾಯಣರಾವ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು